ADVERTISEMENT

ಆಸ್ಪತ್ರೆ ನೂತನ ಕಟ್ಟಡಕ್ಕೆ ಗ್ರಹಣ!

ಬಾಬು ಎಂ.ಆರ್
Published 12 ನವೆಂಬರ್ 2014, 6:28 IST
Last Updated 12 ನವೆಂಬರ್ 2014, 6:28 IST

ರಾಮನಾಥಪುರ: ಸಂಗೀತ ಕಲಾ ಗ್ರಾಮವೆಂದು ಪ್ರಸಿದ್ಧಿ ಹೊಂದಿರುವ ಅರಕಲಗೂಡು ತಾಲ್ಲೂಕು ರಾಮನಾಥಪುರ ಹೋಬಳಿಯ ರುದ್ರಪಟ್ಟಣ ಕರ್ನಾಟಕ ಸಂಗೀತ ಕ್ಷೇತ್ರಕ್ಕೆ ಹಲವು ಮೇರು ಕಲಾವಿದರನ್ನು ಕೊಟ್ಟಿದೆ.

ಈ ಗ್ರಾಮ ಪೋಷಿಸಿ ಬೆಳಸಿದ ಅನೇಕ ಕಲಾವಿದರು ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆಯನ್ನು ಪ್ರದರ್ಶಿಸಿದ್ದಾರೆ. ಆದರೆ, ಗ್ರಾಮದ ಜನರಿಗೆ ಮಾತ್ರ ಸರಿಯಾದ ಆರೋಗ್ಯ ಕೇಂದ್ರವಿಲ್ಲದೇ ಪ್ರತಿನಿತ್ಯ  ಸಾರ್ವಜನಿಕರು ನರಕಯಾತನೆ ಅನುಭವಿಸುವಂತಾಗಿದೆ.

ರುದ್ರಪಟ್ಟಣದಲ್ಲಿ 600ಕ್ಕೂ ಹೆಚ್ಚು ಮನೆ, ನಾಲ್ಕು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಇರುವ 600 ಮನೆಗಳಲ್ಲಿ 300 ಮನೆಗಳಿಗೆ ಮಾತ್ರ ಶೌಚಾಲಯವಿದೆ. ಉಳಿದವರು ಬಹಿರ್ದೆಸೆಗೆ ಹೊಲ ಅಥವಾ ತೋಟಗಳನ್ನು ಅವಲಂಬಿಸಿದ್ದಾರೆ.

ಭಣಗುಡುತ್ತಿರುವ ಆರೋಗ್ಯ ಕೇಂದ್ರ: ಗ್ರಾಮದಲ್ಲಿರುವ ಆರೋಗ್ಯ ಕೇಂದ್ರಕ್ಕೆ ಪ್ರತಿ ನಿತ್ಯ 50 ರಿಂದ 60 ರೋಗಿಗಳು ಬರುತ್ತಾರೆ. ಆದರೆ, ಸರಿಯಾದ ಸಮಯಕ್ಕೆ ವೈದ್ಯರು ಲಭಿಸದೆ ರೋಗಿಗಳು ಸುಮಾರು 8 ಕಿ.ಮೀ. ದೂರದ ಹೋಬಳಿ  ಕೇಂದ್ರಗಳಾದ ರಾಮನಾಥಪುರ ಅಥವಾ ಕೊಣನೂರಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ  ಹೋಗಬೇಕಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ವಾರದಲ್ಲಿ 5 ದಿನ ಮಾತ್ರ ವೈದ್ಯರು ಈ  ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಬರುತ್ತಾರೆ. ಉಳಿದ ದಿನಗಳಲ್ಲಿ ಕಾಯಿಲೆಗೆ ತುತ್ತಾಗುವವರ ಗೋಳು ಕೇಳುವವರಿಲ್ಲ. 5 ದಿನ ಬರುವ ವೈದ್ಯರು ಸಹ ಸರಿಯಾದ ಸಮಯಕ್ಕೆ ಬರುವುದಿಲ್ಲ ಎಂದು ದೂರುತ್ತಾರೆ ರೋಗಿಗಳು.

ಇದರಿಂದ ಗರ್ಭಿಣಿಯರು ಮತ್ತು ವೃದ್ಧರಿಗೆ ತುಂಬ ತೊಂದರೆಯಾಗುತ್ತಿದೆ. ಈ ಆಸ್ಪತ್ರೆಗೆ ಹೊಂದಿಕೊಂಡಂತೆ ಹನ್ಯಾಳು, ಲಕ್ಕೂರು, ರಾಗಿಮರೂರು, ಸೋಂಪುರ, ಮತ್ತಿಗೋಡು, ವಡ್ಡರಹಳ್ಳಿ, ಮಧುರನಹಳ್ಳಿ, ಆನಂದೂರು ಗ್ರಾಮಸ್ಥರಿಗೂ  ಸಹ ತೊಂದರೆಯಾಗಿದೆ.

ಕಾಮಗಾರಿ ಸ್ಥಗಿತ: ಈಗಿರುವ ಆಸ್ಪತ್ರೆಯ ಹಿಂಭಾಗದಲ್ಲಿರುವ ಖಾಲಿ ಜಾಗದಲ್ಲಿ ಹೊಸ ಕಟ್ಟಡ ನಿರ್ಮಾಣ ಕೆಲಸಕ್ಕೆ ಚಾಲನೆ ನೀಡಿ 2–3 ವರ್ಷ ಕಳೆಯುತ್ತಿದ್ದರೂ, ಕಟ್ಟಡಕ್ಕೆ ಉದ್ಘಾಟನೆಯ ಭಾಗ್ಯ ಸಿಕ್ಕಿಲ್ಲ. ಕಟ್ಟಡಕ್ಕಾಗಿ ಸರ್ಕಾರದಿಂದ ₨ 1 ಕೋಟಿ ಅನುದಾನ ಸಿಕ್ಕಿದೆ. ಇದರ ಜತೆಗೆ ಗ್ರಾಮಸ್ಥರಿಂದ ವಂತಿಗೆಯ ರೂಪದಲ್ಲಿ ₨ 1 ಲಕ್ಷ ಹಣವನ್ನು ಸಂಗ್ರಹಿಸಿ 20 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ಜಮಾ ಮಾಡಲಾಗಿದೆ.

ಇಷ್ಟೆಲ್ಲಾ ಹಣ ಬಿಡುಗಡೆ ಆದರೂ ಕಟ್ಟಡದ ಕಾಮಗಾರಿ ಅರ್ಧಕ್ಕೆ ನಿಂತಿರುವುದು ಸಾರ್ವಜನಿಕರಿಗೆ ಅರಗಿಸಿಕೊಳ್ಳಲಾಗದ ಸಮಸ್ಯೆಯಾಗಿದೆ. ಕಾಮಗಾರಿ ಪಡೆದ ಗುತ್ತಿಗೆದಾರರನ್ನು ಗ್ರಾಮಸ್ಥರು ಪ್ರಶ್ನಿಸಿದಾಗ, ‘ಇಲ್ಲಿಯವರೆಗೆ ಮಾಡಿರುವ ಕಾಮಗಾರಿಯ ಹಣ ಬಂದಿಲ್ಲ ಅದಕ್ಕಾಗಿ ಕೆಲಸ ನಿಲ್ಲಿಸಲಾಗಿದೆ’ ಎನ್ನುತ್ತಾರೆ ಎಂದು ಗ್ರಾಮಸ್ಥರು ದೂರಿದರು.

ವಾರಸುದಾರರಿಲ್ಲದ ಸರ್ಕಾರಿ ಕಟ್ಟಡಗಳು: ಸುಮಾರು 40 ವರ್ಷಗಳ ಹಿಂದೆ ಕರ್ನಾಟಕ ಗೃಹ ಮಂಡಳಿ ವತಿಯಿಂದ ಸರ್ಕಾರಿ ನೌಕರರಿಗೆಂದು ನಾಲ್ಕು ವಸತಿ ನಿಲಯಗಳನ್ನು ನಿರ್ಮಿಸಲಾಗಿತ್ತು. ಆದರೆ, ಅಂದಿನಿಂದ ಇಂದಿನವರೆಗೂ ಯಾವ ಇಲಾಖೆಯ ನೌಕರರೂ ಈ ಕಟ್ಟಡದಲ್ಲಿ ವಾಸ ಮಾಡಿಲ್ಲ. ಇದರಿಂದಾಗಿ ಕಟ್ಟಡಗಳು ಪಾಳುಬಿದ್ದು, ಹಾವು ಹಲ್ಲಿಗಳ ವಾಸ ಸ್ಥಾನವಾಗಿವೆ ಎನ್ನುತ್ತಾರೆ ಗ್ರಾಮ ಪಂಚಾಯಿತಿ ಸದಸ್ಯ ಗೋವಿಂದೇಗೌಡ.

ಆರೋಗ್ಯ ಕೇಂದ್ರಕ್ಕೆ  ಪೂರ್ಣಕಾಲಿಕ ವೈದ್ಯರು ಹಾಗೂ ಸಿಬ್ಬಂದಿ ನೇಮಕ ಮಾಡಿ ಮತ್ತು ನೂತನ ಕಟ್ಟಡದ ಕಾಮಗಾರಿ ಮುಗಿಸಿ ಲೋಕರ್ಪಣೆಯಾಗಲಿ ಎಂಬ  ಆಶಯ ಇಲ್ಲಿನ ಗ್ರಾಮಸ್ಥರದ್ದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.