ಆಲೂರು: ತಾಲ್ಲೂಕು ಕೇಂದ್ರದಿಂದ 6ಕಿ.ಮೀ ದೂರದಲ್ಲಿರುವ ತೊರಗರವಳ್ಳಿ ಗ್ರಾಮದಲ್ಲಿ ಎರಡು ದಲಿತ ಕಾಲೋನಿಗಳು ಇದ್ದು 180 ಕುಟುಂಬಗಳು ಇವೆ, ಜನಸಂಖ್ಯೆ 700ಇದೆ. ಆದರೆ, ಗ್ರಾಮದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆ ಇದೆ.
ತಾಲ್ಲೂಕು ಕೇಂದ್ರದಿಂದ ಗ್ರಾಮಕ್ಕೆ ರಸ್ತೆ ಸಾರಿಗೆ ಬಸ್ಸುಗಳ ಸೌಲಭ್ಯವಿದ್ದು ಬೆಳಿಗ್ಗೆ ಮತ್ತು ಸಂಜೆ ಸಂಚರಿಸುತ್ತವೆ. ಕಣತೂರು ಕೂಡಿಗೆಯಿಂದ 3ಕಿ.ಮೀ ರಸ್ತೆ ಮಣ್ಣುರಸ್ತೆಯಾಗಿದ್ದು ಅಕ್ಕಪಕ್ಕದಲ್ಲಿ ಚರಂಡಿಗಳು ಇಲ್ಲದೆ ಮಳೆಗಾಲದಲ್ಲಿ ರಸ್ತೆಯ ಮೇಲೆ ನೀರು ಹರಿಯುತ್ತದೆ. ಅಲ್ಲದೇ ಗುಂಡಿಗಳಿಂದ ರಸ್ತೆ ತುಂಬಿ ಹೋಗಿದೆ.
ಗ್ರಾಮದ ಕೆಲವು ಮನೆಗಳ ಮುಂದೆ ಚರಂಡಿಗಳಿಲ್ಲ, ಶೌಚಾಲಯಗಳ ಸೌಲಭ್ಯವಿಲ್ಲ. ಗ್ರಾಮದಲ್ಲಿ ಸೊಳ್ಳೆಗಳ ಕಾಟ ಹೆಚ್ಚಾಗಿದೆ.
ಇದೇ ಗ್ರಾಮದವರಾದ ಜಿಲ್ಲಾ ಪಂಚಾಯ್ತಿ ಸದಸ್ಯ ಸಗನಯ್ಯನವರ ಅವಧಿಯಲ್ಲಿ ಹಲವು ಅಭಿವೃದ್ದಿ ಕೆಲಸಗಳಾಗಿದ್ದವು. ಒಂದರಿಂದ ಏಳನೇ ತರಗತಿವರೆಗೆ ಶಾಲೆಯಿದೆ.
ಅದಕ್ಕೆ ತಕ್ಕಂತೆ ಆಟದ ಮೈದಾನ ಮತ್ತು ಕಾಂಪೌಂಡ್ ಇದೆ. ಅಂಗನವಾಡಿ ಕೇಂದ್ರ ಮತ್ತು ಸ್ವಸಹಾಯ ಸಂಘಗಳು ಇವೆ. ಎರಡು ಕೊಳವೆ ಬಾವಿ, ಒಂದು ಸೇದು ಬಾವಿ, ಕಿರುನೀರು ಸರಬರಾಜು ಸೌಲಭ್ಯವಿದ್ದರೂ ನೀರಿನ ಗುಣಮಟ್ಟ ಸರಿಯಿಲ್ಲ. ವಿದ್ಯುತ್ ಸೌಲಭ್ಯವಿದೆ. ಬಿಕ್ಕೋಡು ಬೈಪಾಸ್ ರಸ್ತೆಯಿಂದ 3ಕಿ.ಮಿ ಡಾಂಬರೀಕರಣ ರಸ್ತೆ ಆಗಬೇಕಾಗಿದೆ.
ಗ್ರಾಮದಲ್ಲಿ ಬಡ ಕುಟುಂಬಗಳ ಸಂಖ್ಯೆ ಹೆಚ್ಚಾಗಿದ್ದು ಕೆಲವರು ಕೂಲಿ ಮಾಡಿ ಜೀವನ ಸಾಗಿಸಿದರೆ ಕೆಲವರು ಅಲ್ಪಸ್ವಲ್ಪ ಭೂಮಿಯಲ್ಲಿಯೇ ಕೃಷಿ ಮಾಡಿಕೊಂಡಿದ್ದಾರೆ.
ಆಂಜನೇಯ ಸ್ವಾಮಿ ಮತ್ತು ಶನಿದೇವರ ದೇವಾಸ್ಥಾನಗಳು ಇವೆ. ಕೋಟ್ಯಾಳಮ್ಮ ಹಾಗೂ ಗ್ರಾಮದೇವತೆಗಳ ಗುಡಿಗಳಿವೆ. ಇವುಗಳಿಗೆ ದೇವಸ್ಥಾನ ಕಟ್ಟಿಸಬೇಕಾಗಿದೆ.
ಶಾಸಕ ಎಚ್.ಎಂ.ವಿಶ್ವನಾಥ್ ಅವರ ಅವಧಿಯಲ್ಲಿ 4ಜನತಾ ಮನೆ ಮಂಜೂರಾಗಿದ್ದು, ಈವರೆಗೆ ಯಾವ ಸೌಲಭ್ಯವಿಲ್ಲ. ಈ ದೊಡ್ಡ ಗ್ರಾಮಕ್ಕೆಸಮುದಾಯ ಭವನ ಮತ್ತು ಸ್ಮಶಾನ ಜಾಗದ ಅವಶ್ಯಕತೆಯಿದೆ.
‘ಗ್ರಾಮದ ಸುತ್ತ ಇರುವ ಕಡೆಕಟ್ಟೆ, ಹೊಟ್ಟಿನಕಟ್ಟೆ, ಕೆರೆಗಳ ಹೂಳು ತೆಗೆಯಬೇಕಾಗಿದೆ. ಗ್ರಾಮದಲ್ಲಿ ಆರೋಗ್ಯ ನೈರ್ಮಲ್ಯ ಸಮಿತಿ ಇದೆ ಆದರೆ ಇದರಿಂದ ಗ್ರಾಮಕ್ಕೆ ಏನೋ ಪ್ರಯೋಜನ ಆಗಿಲ್ಲ. ಈ ಬಗ್ಗೆ ಆಸಕ್ತಿ ವಹಿಸಬೇಕೆಂದು ಗ್ರಾಮ ಪಂಚಾಯ್ತಿ ಸದಸ್ಯೆ ಲೀಲಾವತಿಯವರ ಗಮನಕ್ಕೆ ತಂದರೂ ಏನೂ ಪ್ರಯೋಜನವಾಗಿಲ್ಲ ಎನ್ನುತ್ತಾರೆ ಗ್ರಾಮದ ಈರೇಶ್ ಮತ್ತು ಸೋಮೇಶ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.