ADVERTISEMENT

ಉತ್ತಮ ಬದುಕಿಗೆ ಸಕಾರಾತ್ಮಕ ಚಿಂತನೆ ಅಗತ್ಯ

ಸಹಪಠ್ಯ ಚಟುವಟಿಕೆಗಳ ಸಮಾರಂಭದಲ್ಲಿ ಎಡಿಸಿ ಕುಮಾರ್‌

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:16 IST
Last Updated 9 ಏಪ್ರಿಲ್ 2018, 9:16 IST

ಹಾಸನ: ಮೌಲ್ಯ ನೈತಿಕತೆಯೊಂದಿಗೆ ಸಕಾರಾತ್ಮಕ ಚಿಂತನೆಗಳನ್ನು ಬದುಕಿನುದ್ದಕ್ಕೂ ಕೊಂಡೊಯ್ದಲ್ಲಿ ಸಾಧನೆ ಸಾಧ್ಯ ಎಂದು ಚಿಕ್ಕಮಗಳೂರಿನ ಹೆಚ್ಚುವರಿ ಜಿಲ್ಲಾಧಿಕಾರಿ ಕುಮಾರ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಸಾಂಸ್ಕೃತಿಕ ವೇದಿಕೆ, ಎನ್‌ಎಸ್ಎಸ್, ಎನ್‌ಸಿಸಿ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್, ಯುವ ರೆಡ್ ಕ್ರಾಸ್ ಘಟಕ ಹಾಗೂ ಕ್ರೀಡಾ ಚಟುವಟಿಕೆಗಳ ಆಶ್ರಯದಲ್ಲಿ ಏರ್ಪಡಿಸಿದ್ದ ಸಹಪಠ್ಯ ಚಟುವಟಿಕೆಗಳ ಸಮಾರೋಪ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಕಾಲೇಜು ಹಂತದಲ್ಲಿ ವಿದ್ಯಾರ್ಥಿಗಳು ಕೇವಲ ಪಠ್ಯಕ್ಕಷ್ಟೇ ಸೀಮಿತರಾಗದೆ, ಸಹಪಠ್ಯ ಚಟುವಟಿಕೆಗಳನ್ನು ಅಳವಡಿಸಿ ಕೊಳ್ಳಬೇಕು. ಇದು ಬದುಕುವ ರೀತಿಯನ್ನು ಕಲಿಸಿಕೊಡುತ್ತದೆ. ಪಠ್ಯಕ್ಕೆ ಪೂರಕವಾದ ಈ ಚಟುವಟಿಕೆಗಳೇ ಬದುಕನ್ನು ಗಟ್ಟಿಗೊಳಿಸುವಲ್ಲಿ ಸಹಕಾರಿಯಾಗಿವೆ ಎಂದು ನುಡಿದರು.

ADVERTISEMENT

ಮಿಂಚಿಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ ಎಂಬಂತೆ, ವಿದ್ಯಾರ್ಥಿ ಜೀವನ ಒಮ್ಮೆ ಕಳೆದರೆ ಮರಳಿ ಬರುವಂತದ್ದಲ್ಲ. ಆದ್ದರಿಂದ ವಿದ್ಯಾರ್ಥಿ ದೆಸೆಯಲ್ಲೆ ಅಮೂಲ್ಯ ಸಮಯವನ್ನು ಸದ್ಬಳಕೆ ಮಾಡಿಕೊಂಡು ತಮ್ಮೊಳಗೆ ಹುದುಗಿರುವ ಪ್ರತಿಭೆಯನ್ನು ಹೊರ ಹಾಕುವಲ್ಲಿ ಪ್ರಯತ್ನಿಸಬೇಕು. ತಂದೆ, ತಾಯಿ ಮತ್ತು ಅಧ್ಯಾಪಕರೊಂದಿಗೆ ಗೌರವ ಇಟ್ಟುಕೊಂಡು ಅವರ ಮಾರ್ಗದರ್ಶನದಲ್ಲಿ ಜೀವನ ರೂಪಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ಕಿರುತೆರೆ ನಟ ತಾಂಡವ್ ಮಾತನಾಡಿ, ವಿದ್ಯಾರ್ಥಿಗಳು ಶೈಕ್ಷಣಿಕ ಪೂರಕವಾದ ಚಟುವಟಿಕೆಗಳಲ್ಲಿ ದೊಡ್ಡ ಮಟ್ಟಕ್ಕೆ ಬೆಳೆದು ಹೆಸರು ಮಾಡಿದಲ್ಲಿ ತಂದೆ, ತಾಯಿ ಜತೆಗೆ ಸಂತಸ ಪಡುವ ಮತ್ತೊಬ್ಬ ವ್ಯಕ್ತಿಯೇ ಗುರು. ಆದ್ದರಿಂದ ಹೆತ್ತವರ ಜತೆಗೆ ವಿದ್ಯೆ ಕಲಿಸಿದ ಗುರುವನ್ನು ಗೌರವಿಸಬೇಕು, ಅವರ ಹಾರೈಕೆ ಪ್ರತಿಯೊಬ್ಬ ವಿದ್ಯಾರ್ಥಿ ಮೇಲೆ ಇದ್ದಾಗ ಮಾತ್ರ ಸಾಧನೆಯ ಮೆಟ್ಟಿಲೇರಲು ಸಾಧ್ಯ ಎಂದು ತಿಳಿಸಿದರು.

ಕಾಲೇಜಿನ ಪ್ರಾಂಶುಪಾಲ ಡಿ.ಜಿ.ಕೃಷ್ಣೇಗೌಡ ಮಾತನಾಡಿ, ಮನುಷ್ಯರಲ್ಲಿ ಜೀವಂತಿಕೆ ಬರುವುದು ನಿಸ್ವಾರ್ಥತೆ ಇದ್ದಾಗ ಮಾತ್ರ. ಅಂತೆಯೇ
ಜನ್ಮದಾತರು ಸೇರಿದಂತೆ ಗುರು ಹಿರಿಯರಿಗೆ ಎಲ್ಲಿಯವರೆಗೆ ಗೌರವ ಕೊಡುತ್ತೇವೋ ಅಲ್ಲಿಯವರೆಗೆ ನಾವು ಉತ್ಕೃಷ್ಟವಾಗಿ ಬೆಳೆಯಲು ಸಾಧ್ಯವಾಗುತ್ತದೆ ಎಂದರು.

ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್‌ನ ಜಂಟಿ ಕಾರ್ಯದರ್ಶಿ ಎಚ್.ಜಿ.ಕಾಂಚನಮಾಲಾ ಅವರಿಗೆ ವರ್ಷದ ವ್ಯಕ್ತಿ ಪುರಸ್ಕಾರ ನೀಡಿ ಅಭಿನಂದಿಸಲಾಯಿತು.

ಕಾಲೇಜಿನ ಡೀನ್ ಪ್ರೊ.ವೈ.ಪಿ.ಮಲ್ಲೇಗೌಡ, ಅಧೀಕ್ಷಕ ಸತ್ಯಮೂರ್ತಿ, ಸಾಂಸ್ಕೃತಿಕ ವೇದಿಕೆ ಸಂಚಾಲಕ ಎಚ್.ಡಿ.ದೇವರಾಜ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.