ಹಾಸನ: ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡುವ ವಿಚಾರ ಚರ್ಚೆಗೆ ಸೀಮಿತವಾಗಿದೆಯೇ ವಿನಾ ವಾಸ್ತವಕ್ಕೆ ಬಂದಿಲ್ಲ. ಮಹಿಳೆಯರಿಗೆ ಶೇ33ರ ಮೀಸಲಾತಿ ಬಗ್ಗೆ ಭಾಷಣ ಮಾಡುವವರೇ ಸಂಸತ್ತಿನಲ್ಲಿ ಅದನ್ನು ವಿರೋಧಿಸಿದ್ದಾರೆ. ಆದರೆ, ಪ್ರತಿಯೊಂದು ಪಕ್ಷವೂ ಬೆರಳೆಣಿಕೆಯಷ್ಟು ಮಹಿಳೆಯರನ್ನು ಕಣಕ್ಕೆ ಇಳಿಸಿ ಮಹಿಳೆಗೆ ಸ್ಥಾನ ನೀಡಿದ್ದೇವೆ ಎಂದು ಸಮಾಧಾನಪಡಿಸುತ್ತಿವೆ. ಇಂಥ ಸ್ಥಿತಿಯಲ್ಲೂ ದೇಶದ ಅನೇಕ ಮಹಿಳೆಯರು ಬೇರೆ ಬೇರೆ ಪಕ್ಷಗಳಿಂದ ಗೆದ್ದು ರಾಷ್ಟ್ರದ ಗಮನ ಸೆಳೆದಿದ್ದಾರೆ. ಹಿಂದೆ ಅನೇಕ ಮಹಿಳೆಯರು ಈ ಸಾಧನೆ ಮಾಡಿದ್ದರೆ, ಈಗಲೂ ಕೆಲವು ಮಹಿಳೆಯರು ರಾಷ್ಟ್ರದ ಗಮನ ಸೆಳೆಯುತ್ತಿದ್ದಾರೆ. ಸ್ವಾತಂತ್ರ್ಯ ನಂತರ 15 ಚುನಾವಣೆಗಳು ನಡೆದಿದ್ದರೂ ದೇಶದ ಅನೇಕ ಕ್ಷೇತ್ರಗಳಂತೆ ಹಾಸನದಿಂದಲೂ ಈವರೆಗೆ ಒಬ್ಬರೇ ಒಬ್ಬ ಮಹಿಳೆ ಸಂಸದೆಯಾಗಿ ಆಯ್ಕೆಯಾಗಿಲ್ಲ.
ಲೋಕಸಭಾ ಚುನಾವಣೆಗೆ ಮಹಿಳೆ ಸ್ಪರ್ಧೆಗೆ ಇಳಿದದ್ದೂ ಕೇವಲ ಒಂದು ಬಾರಿ ಮಾತ್ರ. ಅದೂ ಬಿಜೆಪಿಯಿಂದ. ಮೂರು ದಶಕಗಳಿಂದ ಹಾಸನ ಕ್ಷೇತ್ರ ಜಿದ್ದಾಜಿದ್ದಿನ ರಾಜಕಾರಣದಿಂದ ಗಮನ ಸೆಳೆಯುತ್ತಿದೆ. ಈ ಕ್ಷೇತ್ರ ಎಚ್.ಡಿ. ದೇವೇಗೌಡ ಪ್ರಧಾನಿ ಆದ ಬಳಿಕ ಕ್ಷೇತ್ರ ರಾಷ್ಟ್ರದ ಗಮನ ಸೆಳೆಯುತ್ತಿದೆ. ದೇವೇಗೌಡ ಅವರಿಗಿಂತ ಹಿಂದೆ ಈ ಕ್ಷೇತ್ರದಿಂದ ಜಿ. ಪುಟ್ಟಸ್ವಾಮಿಗೌಡ, ಎಚ್.ಸಿ. ಶ್ರೀಕಂಠಯ್ಯ, ನೀರಾವರಿ ತಜ್ಞ ಎಚ್.ಎನ್. ನಂಜೇಗೌಡ, ಎನ್. ಶಿವಪ್ಪ ಮೊದಲಾದ ಘಟಾನುಘಟಿಗಳು ಆಯ್ಕೆ ಆಗಿದ್ದರು. ಇಂಥವರ ಜಿದ್ದಾಜಿದ್ದಿನ ನಡುವೆ ಯಾವ ಮಹಿಳೆಗೂ ರಾಜಕೀಯದ ಮೆಟ್ಟಿಲು ಏರಲು ಸಾಧ್ಯವಾಗಲಿಲ್ಲ.
ಕಾಂಗ್ರೆಸ್ ಮತ್ತು ಜನತಾದಳದ ಅಭ್ಯರ್ಥಿಗಳನ್ನು ಬಿಟ್ಟರೆ ಬೇರೆ ಯಾರೂ ಈ ಕ್ಷೇತ್ರದಿಂದ ಗೆದ್ದಿಲ್ಲ. ಇಲ್ಲಿನ ಏಳು ವಿಧಾನಸಭಾ ಚುನಾವಣೆಯಲ್ಲಿ ಆರರಲ್ಲಿ ಒಂದಿಲ್ಲೊಂದು ಬಾರಿ ಬಿಜೆಪಿ ಅಭ್ಯರ್ಥಿ ಗೆದ್ದ ಇತಿಹಾಸವಿದೆ. ಆದರೆ, ಲೋಕಸಭಾ ಚುನಾವಣೆಯ ಇತಿಹಾಸ ನೋಡಿದರೆ ಬಿಜೆಪಿಯದ್ದು ನಾಮಕಾವಾಸ್ತೆ ಸ್ಪರ್ಧೆ. ಒಮ್ಮೆಯೂ ಈ ಪಕ್ಷದ ಅಭ್ಯರ್ಥಿ ಗೆಲುವಿನ ಮುಖ ಕಂಡಿಲ್ಲ.
ಹಾಸನದಲ್ಲೀಗ ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ನಗರಸಭೆ ಮೂರೂ ಕಡೆ ಮಹಿಳೆಯರೇ ಅಧ್ಯಕ್ಷರಾಗಿದ್ದಾರೆ. ಅನೇಕ ಗ್ರಾಮ ಪಂಚಾಯಿತಿಗಳಲ್ಲಿ, ವಿವಿಧ ಸ್ಥಳೀಯ ಸಂಘ–ಸಂಸ್ಥೆಗಳಲ್ಲಿ ಮಹಿಳೆಯರು ಆಡಳಿತ ನಡೆಸುತ್ತಿದ್ದಾರೆ. ಆದರೆ, ಲೋಕಸಭೆ ಅಥವಾ ವಿಧಾನಸಭೆ ಚುನಾವಣೆ ಬಂದಾಗ ಮಹಿಳೆಯ ಹೆಸರೂ ಕೇಳಿ ಬರುವುದಿಲ್ಲ. ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲೂ ಮಹಿಳೆಯ ಹೆಸರು ಇರುವುದಿಲ್ಲ ಎಂಬುದು ವಿಶೇಷ.
ನಮ್ಮ ಕಾಲದಲ್ಲೇ ಮಹಿಳೆಯರಿಗೆ ಶೇ 33ರಷ್ಟು ಮೀಸಲಾತಿ ನೀಡಿದ್ದೇವೆ ಎಂದು ಮಾಜಿ ಪ್ರಧಾನಿ ಹಿಂದೆ ಹೇಳಿದ್ದಿದೆ. ಹಾಸನ ಜಿಲ್ಲೆಯಲ್ಲಿ ಜೆಡಿಎಸ್ ಅತ್ಯಂತ ಬಲಿಷ್ಠ ಪಕ್ಷ. ಆದರೆ, ಈವರೆಗೆ ಯಾವುದೇ ವಿಧಾನಸಭಾ ಚನಾವಣೆಯಲ್ಲೂ ಮಹಿಳೆಗೆ ಟಿಕೆಟ್ ಕೊಟ್ಟಿಲ್ಲ. ಹೀಗಿರುವಾರ ಲೋಕಸಭೆ ಟಿಕೆಟ್ ಮಾತೇ ಬರುವುದಿಲ್ಲ.
ಕಾಂಗ್ರೆಸ್ ಪಕ್ಷದಿಂದ ವಿಧಾನಸಭೆಗೆ ಕೆಲವು ಮಹಿಳೆಯರು ಸ್ಪರ್ಧಿಸಿದ್ದರೂ, ಯಾರೂ ಗೆಲುವು ಸಾಧಿಸಿಲ್ಲ. ಆದರೆ ಲೋಕಸಭೆಗೆ ಈ ಪಕ್ಷವೂ ಮಹಿಳೆಗೆ ಟಿಕೆಟ್ ನೀಡಿಲ್ಲ.
ವಿಧಾನಸಭೆ ಇತಿಹಾಸದಲ್ಲಿ ಜಿಲ್ಲೆಯ ಹಾಸನ ಕ್ಷೇತ್ರದಿಂದ ಯಶೋಧರಾ ದಾಸಪ್ಪ ಮತ್ತು ಗಂಡಸಿ ವಿಧಾನಸಭಾ ಕ್ಷೇತ್ರದಿಂದ ದೇವಮ್ಮ ಎಂಬ ಮಹಿಳೆ ತಲಾ ಒಂದು ಅವಧಿಗೆ ಶಾಸಕರಾಗಿದ್ದರು. ಅದೇ ಕೊನೆ, ನಂತರ ಮಹಿಳೆ ಈ ಎತ್ತರಕ್ಕೆ ಏರಿಲ್ಲ.
16ನೇ ಲೋಕಸಭಾ ಚುನಾವಣೆಯ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, ಎಂದಿನಂತೆ ಪ್ರಮುಖ ಪಕ್ಷಗಳು ಪುರುಷ ಅಭ್ಯರ್ಥಿಗಳ ಹೆಸರು ಘೋಷಿಸಿ ಆಗಿದೆ. ಆದರೆ, ಈ ಬಾರಿಯೂ ಮಹಿಳೆಗೆ ನಿರಾಸೆಯೇ ಆಗಿದೆ.
ಜಿಲ್ಲೆಯ ಎಲ್ಲ ಹುದ್ದೆಗಳಲ್ಲೂ ಅಧಿಕಾರ ನಡೆಸುವ ಮಹಿಳೆಯರು ಲೋಕಸಭೆ ಅಥವಾ ವಿಧಾನಸಭೆಗೆ ಹೋಗಲು ಹಿಂಜರಿಯುತ್ತಿದ್ದಾರೆಯೇ? ಅಥವಾ ಮಹಿಳೆ ಆ ಸ್ಥಾನಕ್ಕೆ ಏರದಂತೆ ಪುರುಷರು ತಡೆಯುತ್ತಿದ್ದಾರೆಯೇ? ಜಿಲ್ಲೆಯ ಮಹಿಳೆಯರೇ ಇದಕ್ಕೆ ಉತ್ತರ ನೀಡಬೇಕಾಗಿದೆ.
ಸುಶೀಲಾ ಏಕೈಕ ಅಭ್ಯರ್ಥಿ
ಹಾಸನ ಲೋಕಸಭಾ ಕ್ಷೇತ್ರದಿಂದ ಪ್ರಮುಖ ಪಕ್ಷದಿಂದ ಸ್ಪರ್ಧಿಸಿದ್ದ ಏಕೈಕ ಮಹಿಳೆ ಎಂದರೆ ಸುಶೀಲಾ ಶಿವಪ್ಪ. ಇವರು ಮಾಜಿ ಶಾಸಕ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರೂ ಆಗಿದ್ದ ಬಿ.ಬಿ. ಶಿವಪ್ಪ ಅವರ ಪತ್ನಿ. 1998ರ ಚುನಾವಣೆಯಲ್ಲಿ ಇವರು ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಆಗ ಇವರಿಗೆ ಎದುರಾಳಿಯಾಗಿದ್ದವರೆಂದರೆ ಜಿಲ್ಲೆಯ ಘಟಾನುಘಟಿ ರಾಜಕಾರಣಿಗಳೆನಿಸಿದ್ದ ಎಚ್.ಡಿ.ದೇವೇಗೌಡ ಮತ್ತು ಎಚ್.ಸಿ. ಶ್ರೀಕಂಠಯ್ಯ. ಆ ಚುನಾವಣೆಯಲ್ಲಿ ಸುಶೀಲಾ 2,05,628 ಮತ ಪಡೆದಿದ್ದರು. ದೇವೇಗೌಡರು 3,36,407 ಮತ ಪಡೆದು ಜಯ ಗಳಿಸಿದರೆ, ಕಾಂಗ್ರೆಸ್‌ನ ಶ್ರೀಕಂಠಯ್ಯ, 3,04,753 ಮತ ಪಡೆದಿದ್ದರು.
ಅದೇ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಕೋಮಲತಾ ಎಂಬುವವರು ಕೇವಲ 718 ಮತ ಪಡೆದಿದ್ದರು.
ಕೋಮಲತಾ ಅದಕ್ಕೂ ಹಿಂದಿನ ಎರಡು ಚುನಾವಣೆಗಳಲ್ಲೂ ಸ್ಪರ್ಧಿಸಿದ್ದರು. 1991ರಲ್ಲಿ ಅವರು 2,414 ಮತ ಹಾಗೂ 1996ರ ಚುನಾವಣೆಯಲ್ಲಿ 1,172 ಮತ ಪಡೆದಿದ್ದರು. 2009ರ ಚುನಾವಣೆಯಲ್ಲಿ ರಜನಿ ನಾರಾಯಣಗೌಡ ಅವರು ಪಕ್ಷೇತರರಾಗಿ ಕಣಕ್ಕೆ ಇಳಿದು 3556 ಮತ ಪಡೆದಿದ್ದರು. ಹಾಸನ ಲೋಕಸಭಾ ಕ್ಷೇತ್ರದಿಂದ ಮಹಿಳೆಯರ ಸ್ಪರ್ಧೆ ಅಷ್ಟಕ್ಕೇ ಸೀಮಿತವಾಗಿದೆ.
ಮಹಿಳೆಯರ ಸಂಖ್ಯೆ ಹೆಚ್ಚು
2011ರ ಜನಗಣತಿ ಪ್ರಕಾರ ಜಿಲ್ಲೆಯಲ್ಲಿ ಮಹಿಳೆಯರ ಸಂಖ್ಯೆಯೇ ಹೆಚ್ಚು. ಒಟ್ಟು 17,76,221 ಜನರಲ್ಲಿ 8,85,804 ಪುರುಷರಿದ್ದರೆ, 8,90,417 ಮಹಿಳೆಯರು ಇದ್ದಾರೆ.
ಪ್ರಸಕ್ತ ಜಿಲ್ಲೆಯಲ್ಲಿ ಒಟ್ಟು 15,23,524 ಮತದಾರರಿದ್ದು, ಅವರಲ್ಲಿ 7,70,769 ಪುರುಷರು ಹಾಗೂ 7,52,680 ಮಹಿಳೆಯರಿದ್ದಾರೆ. ಈಗ ಮಹಿಳಾ ಮತದಾರರ ಸಂಖ್ಯೆ ಸ್ವಲ್ಪ ಇಳಿಮುಖವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.