ADVERTISEMENT

ಕಣ್ತೆರೆದು ನೋಡಿ ಕಬಳಿಗೆರೆ...

ಬಾಬು ಎಂ.ಆರ್
Published 13 ಆಗಸ್ಟ್ 2014, 9:24 IST
Last Updated 13 ಆಗಸ್ಟ್ 2014, 9:24 IST
ರಾಮನಾಥಪುರ ಸಮೀಪದ ಕಬಳಿಗೆರೆ ಕೊಪ್ಪಲಿನ ನೀರಿನ ಟ್ಯಾಂಕ್ ಸುತ್ತ ಗಿಡಗಂಟಿ ಬೆಳದು ಇದರ ಬದಿಯಲ್ಲೇ ಎಮ್ಮೆಗಳನ್ನು ಕಟ್ಟಿಹಾಕಿರುವುದು
ರಾಮನಾಥಪುರ ಸಮೀಪದ ಕಬಳಿಗೆರೆ ಕೊಪ್ಪಲಿನ ನೀರಿನ ಟ್ಯಾಂಕ್ ಸುತ್ತ ಗಿಡಗಂಟಿ ಬೆಳದು ಇದರ ಬದಿಯಲ್ಲೇ ಎಮ್ಮೆಗಳನ್ನು ಕಟ್ಟಿಹಾಕಿರುವುದು   

ರಾಮನಾಥಪುರ: ಚಿಕ್ಕಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಕಬಳಿಗೆರೆ ಕೊಪ್ಪಲು ಮೂಲಸೌಲಭ್ಯಗಳಿಂದ ವಂಚಿತವಾಗಿದೆ. ಗ್ರಾಮದಲ್ಲಿ 150ಕ್ಕೂ ಹೆಚ್ಚು ಮನೆಗಳು ಹಾಗೂ 600 ಮತದಾರಿದ್ದಾರೆ. 800ಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮವು ಚರಂಡಿ, ಶೌಚಾಲಯ, ಬೀದಿದೀಪ... ಹೀಗೆ ಅತ್ಯಗತ್ಯ ಸೌಕರ್ಯಗಳಿಂದ ವಂಚಿವಾಗಿದೆ.

ಗ್ರಾಮದಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮನೆಗಳ ಅಕ್ಕಪಕ್ಕದಲ್ಲೇ ಕೊಳಚೆ ನೀರು ನಿಲ್ಲುತ್ತದೆ. ಚರಂಡಿಯ ಅಸುಪಾಸಿನಲ್ಲಿ  ಗಿಡಗಂಟಿ ಬೆಳೆದು ಕೊಳಚೆ ನೀರು ಸರಿಯಾಗಿ ಹರಿಯದೇ ಗಬ್ಬು ವಾಸನೆ ಬರುತ್ತಿದೆ. ಊರಿನ ಪ್ರಮುಖ ಬೀದಿಯಲ್ಲಿ ಚರಂಡಿ ಕಟ್ಟಿಕೊಂಡಿದರೂ ಸಂಬಂಧಪಟ್ಟವರು ಈ ಕಡೆ ಗಮನ ಹರಿಸದೇ  ಈ ಚರಂಡಿಯ ಕೊಳಚೆ ನೀರಿನಿಂದ ಸೊಳ್ಳೆಗಳು ಹೆಚ್ಚಾಗಿವೆ.

ಶೌಚಾಲಯದ ಸಮಸ್ಯೆ: ಗ್ರಾಮದಲ್ಲಿ ಸುಮಾರು 150 ಮನೆಗಳಿದ್ದು, ಅದರಲ್ಲಿ ಆರ್ಥಿಕವಾಗಿ ಚೆನ್ನಾಗಿ ಇರುವವರು ಮಾತ್ರ ಶೌಚಾಲಯಗಳನ್ನು ಕಟ್ಟಿಸಿಕೊಂಡಿದ್ದಾರೆ. ಗ್ರಾಮದ ಬಹುತೇಕ  ಕುಟುಂಬದವರು ಇನ್ನೂ ಬಯಲು ಶೌಚಾಲಯವನ್ನೇ ಅವಲಂಬಿಸಿದ್ದಾರೆ ಎನ್ನುತ್ತಾರೆ ಗ್ರಾಮದ  ನಿವಾಸಿ ರವಿ.

ಇಲ್ಲಿನ ಬಹುತೇಕರು ತಮ್ಮ ಜಾನುವಾರುಗಳನ್ನು ಹಗಲು ಇರುಳು ಎನ್ನದೆ ಶಾಲಾ ಮೈದಾನದಲ್ಲಿ ಕಟ್ಟಿಹಾಕುವುದರಿಂದ ಶಾಲಾ ಮೈದಾನ ಹೋಗಿ ದನಗಳನ್ನು ಕಟ್ಟುವ ತಾಣವಾಗಿ ಮಾರ್ಪಟ್ಟಿದೆ. ಇದರಿಂದ ಶಾಲಾ ವಿದ್ಯಾರ್ಥಿಗಳಿಗೆ ಇರುವ ಒಂದೇಒಂದು ಕ್ರೀಡಾಂಗಣ ಕೂಡ  ಇಲ್ಲದಂತಾಗಿದೆ.

ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಗ್ರಾಮದ ಸಂಬಂಧಪಟ್ಟ ವಿವಿಧ ಇಲಾಖೆ ಅಧಿಕಾರಿಗಳು ಮೂಲ ಸೌಕರ್ಯಗಳಾದ ಚರಂಡಿ, ಶೌಚಾಲಯ, ರಸ್ತೆ ದುರಸ್ತಿಗೆ ಕ್ರಮ ಕೈಗೊಂಡು ಈ ಗ್ರಾಮ ಅಭಿವೃದ್ಧಿ ಕಾಣುವಂತೆ ಮಾಡಬೇಕು ಎಂಬುದು ಇಲ್ಲಿನ ಗ್ರಾಮಸ್ಥರ ಒಕ್ಕೂರಲಿನ ಕೂಗು.

ಬಲಿಗೆ ಬಾಯ್ದೆರೆದ ಕೊಳವೆಬಾವಿ
ಕಬಳಿಗೆರೆ ಕೊಪ್ಪಲಿನ ಸಮೀದಪ ರಾಂಪುರ ಗ್ರಾಮಕ್ಕೆ 2006ರಲ್ಲಿ ಆಗಿನ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಗ್ರಾಮ ವಾಸ್ತವ್ಯಕ್ಕೆ ಬಂದಿದ್ದರು. ಆಗ ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಸಮೀಪ ಕೊಳವೆಬಾವಿ ತೆಗಸಲಾಗಿತ್ತು. ಈ ಕೊಳವೆಬಾವಿಯಲ್ಲಿ ನೀರು ಬರಲಿಲ್ಲ. ಆದರೆ, ಇಲ್ಲಿಯವರೆಗೂ ಅದನ್ನು ಮುಚ್ಚಿಲ್ಲ. ಕೊಳವೆಬಾವಿಗಳೇ ಈಚೆಗೆ ಭಾರಿ ಸುದ್ದಿ ಮಾಡುತ್ತಿದ್ದರೆ ಇಲ್ಲಿಗೆ ಯಾವ ಅಧಿಕಾರಿಯೂ ಬಂದು ನೋಡಿಲ್ಲ. ಇದರ ಹತ್ತಿರವೇ ಮಕ್ಕಳು ಆಟವಾಡುತ್ತಾರೆ ಎಂಬುದು ಇನ್ನೂ ಭಯಾನಕ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.