ADVERTISEMENT

ಕಳಪೆ ಕಾಮಗಾರಿಗೆ ಕೊನೆ ಎಂದು?

​ಪ್ರಜಾವಾಣಿ ವಾರ್ತೆ
Published 9 ಜೂನ್ 2012, 7:25 IST
Last Updated 9 ಜೂನ್ 2012, 7:25 IST

ರಾಮನಾಥಪುರ: ಎರಡು ವರ್ಷಗಳ ಹಿಂದೆ ಪ್ರಾರಂಭವಾದ ಕಟ್ಟೇಪುರ ಅಣೆಕಟ್ಟೆ ಕೃಷ್ಣರಾಜ ನಾಲೆಗಳ ಆಧುನೀಕರಣ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣಿಸುತ್ತಿಲ್ಲ. ಕಾಮಗಾರಿ ಕಳಪೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.

ಕಟ್ಟೇಪುರ ಅಣೆಕಟ್ಟೆಯ ಎಡ ಮತ್ತು ಬಲದಂಡೆ ನಾಲೆಗಳ ಆಧುನೀಕರಣಕ್ಕೆ ಸರ್ಕಾರ ರೂ. 121.39 ಕೋಟಿ ಬಿಡುಗಡೆಗೊಳಿಸಿದೆ. ಗುತ್ತಿಗೆ ಪಡೆದ ಬೆಂಗಳೂರಿನ ಎಸ್.ಎನ್.ಸಿ. ಪವರ್ ಕಾರ್ಪೊ ರೇಷನ್ ಕಂಪನಿ ಕಳೆದ 2010ರಲ್ಲಿಯೇ ಕಾಮಗಾರಿ ಆರಂಭಿಸಿತ್ತು. ಆದರೆ ಕಳೆದ 2011 ಫೆಬ್ರುವರಿಯಲ್ಲಿ ಕಟ್ಟೇಪುರ ಬಳಿ ನಾಲೆಗೆ ಸಿಮೆಂಟ್ ಕಾಂಕ್ರಿಟ್ ಲೈನಿಂಗ್ ಹಾಕುವ ಕಾಮಗಾರಿಗೆ ಕ್ಷೇತ್ರದ ಶಾಸಕರು ಅಧಿಕೃತವಾಗಿ ಚಾಲನೆ ನೀಡಿದರು.
 
ಟೆಂಡರ್ ಕರಾರಿನಂತೆ  ಸೆಪ್ಟಂಬರ್‌ನಲ್ಲಿಯೇ ಪೂರ್ಣಗೊಳ್ಳ ಬೇಕಿದ್ದ ಕಾಮಗಾರಿ ಮಳೆಗಾಲ ಆರಂಭವಾದ ಕಾರಣ ಅರ್ಧಕ್ಕೆ ನಿಂತಿತು. ಮಳೆಗಾಲ ಮುಗಿದ ನಂತರ ಪುನರಾರಂಭಗೊಂಡ ಕಾಮಗಾರಿ ಇನ್ನೂ ಮುಗಿದಿಲ್ಲ.
ಕಾಮಗಾರಿ ಕಳಪೆ: ಹೋದ ವರ್ಷ ಕಳಪೆ ಕಾಮಗಾರಿ ನಡೆಸಿದ ಕಾರಣ ನಾಲೆಗೆ ನೀರು ಬಿಟ್ಟ ನಂತರ ಮಲ್ಲಿನಾಥಪುರ, ಮಲ್ಲರಾಜಪಟ್ಟಣ ಮತ್ತು ಕೇರಳಾಪುರದ ಕರ್ತಾಳು ಮುಂತಾದೆಡೆ ಸಿಮೆಂಟ್ ಲೈನಿಂಗ್ ಸಂಪೂರ್ಣ ಕಿತ್ತು ಬಂದಿತ್ತು. 

 ಕಳಪೆ ಕಾಮಗಾರಿ ವಿರೋಧಿಸಿ ದಲಿತ ಸಂಘರ್ಷ ಸಮಿತಿಯವರು ಪ್ರತಿಭಟನೆಗೆ ಮುಂದಾದರು. ನಂತರ ಸಂಘಟನೆಯ ಸ್ಥಳೀಯ ಮುಖಂಡರೊಬ್ಬರ ಮೇಲೆ ಹಲ್ಲೆ ನಡೆಯಿತು. ಈ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಎಸ್‌ಎಸ್ ಮುಖಂಡ ರಾಜಶೇಖರ್ ಗುತ್ತಿಗೆ ಮೇಲ್ವಿಚಾರಕ ಸುಬ್ರಹ್ಮಣ್ಯ ಎಂಬಾತನ ಮೇಲೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಗುತ್ತಿಗೆದಾರನ ಮೇಲೆ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ಡಿಎಸ್‌ಎಸ್ ಕಾರ್ಯಕರ್ತರಿಂದ ಧರಣಿ ನಡೆಯಿತು.

ಇದಲ್ಲದೇ ರಾಜ್ಯ ರೈತ ಸಂಘದ ಕಾರ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಅವರು ಕಳಪೆ ಕಾಮಗಾರಿ ನಡೆದ ಸ್ಥಳಕ್ಕೆ ಭೇಟಿ ನೀಡಿ ಗುತ್ತಿಗೆ ದಾರರು ಹಾಗೂ ಸಂಬಂಧಪಟ್ಟ ಎಂಜಿನಿಯರ್ ವಿರುದ್ದ ಕ್ರಮ ಕೈಗೊಳ್ಳುವಂತೆ ಸರ್ಕಾರವನ್ನು ಒತ್ತಾಯಿಸುವುದಾಗಿ ಹೇಳಿ ತೆರಳಿದ್ದರು. ನಾಲೆಯಲ್ಲಿ ನಡೆಯುತ್ತಿರುವ ಕಾಮಗಾರಿ ಕಳಪೆಯಾಗಿದೆ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 

 ಗುತ್ತಿಗೆ ವಹಿಸಿಕೊಂಡಿರುವ ಮಾಲೀಕರೇ ಜೆಸಿಬಿ ಮೂಲಕ ಸ್ಥಳೀಯರ ಹೊಲಗಳಲ್ಲಿ ಕೆರೆ ತೋಡಿ ಕಳಪೆ ಮಣ್ಣು ಹಾಕಲಾಗುತ್ತಿದೆ. ಈಚೆಗೆ ಬೆಟ್ಟಸೋಗೆ ಬಳೆ ಎಡದಂಡೆ ನಾಲೆಗೆ ತುಂಡು ಗುತ್ತಿಗೆದಾರರು ಬಿಳಿ ದೂಳು ಮಣ್ಣು ಹಾಕಿಸುತ್ತಿದ್ದರೂ ಸ್ಥಳಕ್ಕೆ ಬಂದಿದ್ದ ಎಂಜಿನಿಯರ್ ವೆಂಕಟೇಶ್ ಯಾವುದೇ ಚಕಾರವೆತ್ತಲಿಲ್ಲ.
 
ಅವರು ಹೊರಟ ತಕ್ಷಣವೇ ಆಗಮಿಸಿದ ಕೊಣನೂರು ಹಾರಂಗಿ ಪುನರ್ವಸತಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ದೇವನಾಥ್ ಅವರು ತುಂಡು ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರಲ್ಲದೇ ನಾಲೆಗೆ ಸುರಿದಿರುವ ಕಳಪೆ ಮಣ್ಣು ತೆಗೆಸುವಂತೆ ಸೂಚಿಸಿದರು.


ಮತ್ತೆ ಅವರು ಅಲ್ಲಿಂದ ಕಾಲ್ಕಿತ್ತ ನಂತರ ತುಂಡು ಗುತ್ತಿಗೆದಾರರು ಅದೇ ರೀತಿಯ ಕಳಪೆ ಮಣ್ಣನ್ನು ನಾಲೆಗೆ ಬಳಸುವುದು ಕಂಡುಬಂತು. ಕಾಮಗಾರಿಯ ಗುಣಮಟ್ಟ ಕಳಪೆಯಾಗಿದ್ದರೂ ಎಂಜಿನಿಯರ್‌ಗಳು ಯಾವುದೇ ಕ್ರಮಕ್ಕೆ ಮುಂದಾಗ ಲಿಲ್ಲ. ಸಬಂಧಪಟ್ಟವರು ಇತ್ತ ಗಮನಹರಿಸಿ ಗುಣಮಟ್ಟದ ಕಾಮಗಾರಿಗೆ ಕ್ರಮಕೈಗೊಳ್ಳಬೇಕು ಎಂಬುದು ರೈತರ ಆಗ್ರಹ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.