ADVERTISEMENT

ಕಿತ್ತಳೆ ಗಿಡ ಖರೀದಿ ಅಕ್ರಮ ಬೆಳಕಿಗೆ

ಜಾನೆಕೆರೆ ಆರ್‌.ಪರಮೇಶ್‌
Published 25 ಫೆಬ್ರುವರಿ 2011, 6:50 IST
Last Updated 25 ಫೆಬ್ರುವರಿ 2011, 6:50 IST

ಸಕಲೇಶಪುರ: ಉದ್ಯೋಗ ಖಾತ್ರಿ ಯೋಜನೆ ಅಡಿ ಗ್ರಾ.ಪಂ.ಗಳಿಗೆ ಹೆಚ್ಚಿನ ಬೆಲೆಯ ನಾಗಪುರ ಕಿತ್ತಳೆ ಗಿಡ ಖರೀದಿ ಮಾಡಿದ ಪ್ರಕರಣಕ್ಕೆ ಸಂಬಂಧ ಗುತ್ತಿಗೆದಾರರಿಗೆ ತಡೆ ಹಿಡಿದಿದ್ದ ಬಿಲ್ ಮೊತ್ತವನ್ನು ಕೆಲವು ಗ್ರಾ.ಪಂ. ಆಡಳಿತ ಪಾವತಿ ಮಾಡಿದ ಅಂಶ ಬೆಳಕಿಗೆ ಬಂದಿದೆ.

ಕಳೆದ ಸೆಪ್ಟೆಂಬರ್ ಮೊದಲ ವಾರ ‘ಎಸ್‌ಆರ್‌ಎಸ್ ನರ್ಸರಿ ಫಾರಮ್ಸ್ ಅಂಡ್ ಪ್ರೂಟ್ಸ್’ ತಾಲ್ಲೂಕಿನ ಹಲವು ಗ್ರಾ.ಪಂ.ಗಳಿಗೆ ಖಾತ್ರಿ ಅಡಿ ಬೇರು ಕಿತ್ತಳೆ ಗಿಡಗಳನ್ನು ರೂ. 22 ಬೆಲೆಯಲ್ಲಿ ಸರಬರಾಜು ಮಾಡಿದೆ. ಮಾರುಕಟ್ಟೆಯಲ್ಲಿ ಬುಟ್ಟಿ ಗಿಡಗಳಿಗೆ ರೂ. 22 ನೀಡಬಹುದು, ಬೇರು ಗಿಡಗಳಿಗೆ ಹೆಚ್ಚೆಂದರೆ 12 ರೂ. ನೀಡಬಹದು, ಒಂದು ಗಿಡಕ್ಕೆ 22 ರೂ. ಹೆಚ್ಚು ಎಂದು ಕೆಲ ರೈತರು ಆಕ್ಷೇಪ ವ್ಯಕ್ತ ಪಡಿಸಿದ್ದರು. ಈ ಬಗ್ಗೆ  ‘ಪ್ರಜಾವಾಣಿ’ ವರದಿ ಸಹ ಪ್ರಕಟಿಸಿತ್ತು. ವರದಿಗೆ ಸ್ಪಂದಿಸಿದ್ದ ಜಿ.ಪಂ. ಸಿಇಓ ಅಂಜನ್ ಕುಮಾರ್, ಕಿತ್ತಳೆ ಗಿಡಗಳ ಸರಬರಾಜು ಮಾಡಿದ ಗುತ್ತಿಗೆದಾರರಿಗೆ ಹಣ ಪಾವತಿಗೆ ತಡೆ ನೀಡಿದ್ದರು.

ಆದರೆ, ಸಿಇಓ ಗಮನಕ್ಕೆ ಬಾರದಂತೆ ಮಕ್ಕಿಹಳ್ಳಿ ಗ್ರಾಮದ 50 ಮಂದಿ ಫಲಾನುಭವಿಗಳ ಜಮೀನಿ ನಲ್ಲಿ ಕಿತ್ತಳೆ ಗಿಡ ನೆಡುವುದಕ್ಕೆ ಎಸ್‌ಆರ್‌ಎಸ್ ನರ್ಸರಿ ಫಾರ್ಮಸ್ ಅಂಡ್ ಪ್ರೂಟ್ಸ್‌ಗೆ ಫೆ.15ರಂದು (ಬಿಲ್ ಸಂಖ್ಯೆ 147) ಗಿಡಕ್ಕೆ ರೂ. 22ನಂತೆ 4250 ಗಿಡಗಳಿಗೆ ಒಟ್ಟು ರೂ. 93500 ಪಾವತಿ ಮಾಡಲಾಗಿದೆ.

ಬೆಳಗೋಡು ಗ್ರಾ.ಪಂ. ವ್ಯಾಪ್ತಿಯ ಬೆಳಗೋಡು ಗ್ರಾಮದ 25 ಮಂದಿ ರೈತರ ಜಮೀನು ಅಭಿವೃದ್ಧಿಗೆ ಎಸ್‌ಆರ್‌ಎಸ್ ನರ್ಸರಿ  ಫಾರಮ್ಸ್ ಅಂಡ್ ಪ್ರೂಟ್ಸ್ ಹೆಸರಿಗೆ ಜ.31ರಂದು 1800 ಗಿಡಗಳ ಖರೀದಿಗೆ ರೂ. 39600 ರೂ. ನೀಡಲಾಗಿದೆ. ಉದೇವಾರ ಗ್ರಾ.ಪಂ.ಯಲ್ಲಿ ಬಾಳಗೋಡು ಗ್ರಾಮದ 27 ಮಂದಿ ರೈತರ ಜಮೀನಿನಲ್ಲಿ ಕಿತ್ತಳೆ ಗಿಡಗಳನ್ನು ಬೆಳೆಸುವುದಕ್ಕೆ ಕಳೆದ ತಿಂಗಳು (ಬಿಲ್ ಸಂಖೆ 131) 65340, ಕೆಸಗುಲಿ ಗ್ರಾಮಕ್ಕೆ ರೂ. 7260 (ಬಿಲ್ ಸಂಖ್ಯೆ 133), ಉದೇವಾರ ಗ್ರಾಮಕ್ಕೆ ರೂ. 12100 (ಬಿಲ್ ಸಂಖ್ಯೆ 132) ಸೇರಿದಂತೆ ಒಟ್ಟು ರೂ. 8,4,700 ಹಣ ಪಾವತಿ ಮಾಡಿರುವುದು ದೃಢಪಟ್ಟಿದೆ.

‘ಕಿತ್ತಲೆ ಗಿಡಗಳಿಗೆ ಕಳೆದ 6 ತಿಂಗಳಿಂದ ಬಿಲ್ ಪಾವತಿ ಮಾಡಿರಲಿಲ್ಲ, ತಾ.ಪಂ. ಸಿಇಓ ಸಿದ್ದರಾಜು ಅವರು ಗ್ರಾಮದ ಯು.ಪಿ ದೇವಪ್ಪಗೌಡ ಅವರ ತೋಟಕ್ಕೆ ಬಂದು ಕಿತ್ತಳೆ ಗಿಡ ಪರಿಶೀಲನೆ ನಡೆಸಿ ಹೋದರು. ಮರುದಿನ ಪಂಚಾಯ್ತಿ ಕಚೇರಿಯಲ್ಲಿ ಮಾಸಿಕ ಸಭೆ ನಡೆಯುತ್ತಿದ್ದ ಸಂದರ್ಭದಲ್ಲಿ ಗ್ರಾ.ಪಂ. ಕಾರ್ಯಾಲಯಕ್ಕೆ ಬಂದು ಎಲ್ಲ ಸದಸ್ಯರ ಸಮ್ಮುಖದಲ್ಲೇ ಕಿತ್ತಳೆ ಗಿಡಗಳಿಗೆ ಬಿಲ್ ನೀಡಿ ಎಂದು ಹೇಳಿದರು. ತೋಟಗಾರಿಕಾ ಇಲಾಖೆಯ ಅಧಿಕಾ ರಿಗಳು ಎಂ.ಬಿ. ಕೊಟ್ಟ ಮೇಲೆ ಬಿಲ್ ನೀಡಿದ್ದೇವೆ’ ಎಂದು ಉದೇವಾರ ಗ್ರಾ.ಪಂ. ಅಧ್ಯಕ್ಷ ಸೈಯದ್ ಪೈರೋಜ್ ಹಾಗೂ ಕಾರ್ಯದರ್ಶಿ ಗಣೇಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಜಿ.ಪಂ. ಸಿಎಸ್ ಹೇಳಿದ್ದು: ಕಿತ್ತಳೆ ಗಿಡ ವೊಂದಕ್ಕೆ 22 ರೂಪಾಯಿ ಬೆಲೆ ಹೆಚ್ಚಾಗಿದೆ ಎಂಬ ಕಾರಣಕ್ಕೆ ಗುತ್ತಿಗೆದಾರರಿಗೆ ಬಿಲ್ ತಡೆಹಿಡಿಯುವಂತೆ ಸೂಚಿಸಲಾಗಿತ್ತು. ಸದರಿ ಗಿಡಗಳಿಗೆ ಗ್ರಾ.ಪಂ. ಯಿಂದ ಹಣ ಪಾವತಿ ಮಾಡಿರುವುದು ತಮ್ಮ ಗಮನಕ್ಕೆ ಬಂದಿಲ್ಲ. ಕೂಡಲೆ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಜಿ.ಪಂ. ಕಾರ್ಯ ನಿರ್ವಾಹಕ ಅಧಿಕಾರಿ ಅಂಜನ್‌ಕುಮಾರ್ ಬುಧವಾರ ‘ಪ್ರಜಾವಾಣಿ’ಗೆ ಹೇಳಿದರು.

‘ಕಿತ್ತಲೆ ಗಿಡಗಳಿಗೆ ಬಿಲ್ ನೀಡಿ ಎಂದು ಪಂಚಾಯ್ತಿ ಆಡಳಿತಕ್ಕೆ ಹೇಳಿಲ್ಲ. ಖಾತ್ರಿ ಯೋಜ ನೆಯ ಕಾಮಗಾರಿಗಳಿಗೆ ಬಿಲ್ ನೀಡಿ ಎಂದು ಮಾತ್ರ ಹೇಳಿದ್ದೇವೆ. ತೋಟಗಾರಿಕಾ ಇಲಾಖೆಯವರು ಎಂ.ಬಿ. ನೀಡಿದರೆ ಗ್ರಾ.ಪಂ.ಯಿಂದ ಬಿಲ್ ಮಾಡುತ್ತಾರೆ. ಇದರಲ್ಲಿ ನಮ್ಮ ಹಸ್ತಕ್ಷೇಪವಿಲ್ಲ’ ಎಂದು ತಾ.ಪಂ. ಇಓ ಸಿದ್ದರಾಜು ಹೇಳುತ್ತಾರೆ.

‘ರೈತರಿಂದ ದಾಖಲೆ ಪಡೆದಿಲ್ಲ, ಇತ್ತೀಚೆಗೆ ಜಿ.ಪಂ. ಡಿಎಸ್ 2 ಹಾನುಬಾಳು ಗ್ರಾ.ಪಂ. ವ್ಯಾಪ್ತಿಯಲ್ಲಿ ಕಿತ್ತಳೆ ಗಿಡ ನೋಡಿಕೊಂಡು ಹೋಗಿದ್ದರು. ಬಿಲ್ ನೀಡುವಂತೆ ಅವರು ಲಿಖಿತ ಆದೇಶ ನೀಡಿಲ್ಲ. ಆದ್ದರಿಂದ ನಮ್ಮ ಇಲಾಖೆಯಿಂದ ಎಂ,ಬಿ. ಬರೆದಿಲ್ಲ. ಕೆಳಗಿನ ಅಧಿಕಾರಿಗಳು ಗಮನಕ್ಕೆ ಬರದಂತೆ ಎಂ.ಬಿ. ಬರೆದಿದ್ದಾರೊ ಏನೋ ಗೊತ್ತಿಲ್ಲ’ ಎಂದು ಹಿರಿಯ ಸಹಾಯಕ ತೋಟಗಾರಿಕಾ ಅಧಿಕಾರಿ ಕೃಷ್ಣಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.