ADVERTISEMENT

ಕುಡಿಯುವ ನೀರು ಪೂರೈಕೆಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 4 ಮಾರ್ಚ್ 2011, 4:45 IST
Last Updated 4 ಮಾರ್ಚ್ 2011, 4:45 IST

ಚನ್ನರಾಯಪಟ್ಟಣ:  ಪಟ್ಟಣದಲ್ಲಿ  ಚಂದ್ರಮೌಳೇಶ್ವರ ಸ್ವಾಮಿಯ ದನಗಳ ಜಾತ್ರೆ ಅಂಗವಾಗಿ ಏರ್ಪಡಿಸಿದ್ದ ವಸ್ತು ಪ್ರದರ್ಶನ, ಕೃಷಿ ಮೇಳಕ್ಕೆ 6.87 ಲಕ್ಷ ರೂ. ವೆಚ್ಚ ಮಾಡಲಾಗಿದೆ ಎಂದು ಪುರಸಭೆ ಅಧಿಕಾರಿಗಳು ಗುರುವಾರ ತಿಳಿಸಿದರು.ಪುರಸಭಾಧ್ಯಕ್ಷೆ ಭಾಗ್ಯಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಸದಸ್ಯರಾದ ಕಲ್ಪನ, ನಂಜುಂಡ ಮೈಮ್, ಈ ಸಲ ನಡೆದ ಜಾತ್ರೆಯ ಲೆಕ್ಕ ಮತ್ತು ಕಳೆದ ವರ್ಷದ ಲೆಕ್ಕವನ್ನು ಕೊಡಬೇಕು ಎಂದು ಒತ್ತಾಯಿಸಿದರು.

ಉಪಾಧ್ಯಕ್ಷ ಸಿ.ಎನ್. ಮೂರ್ತಿ ಮಾತನಾಡಿ, ಕಳೆದ ವರ್ಷದ ಲೆಕ್ಕಪತ್ರವನ್ನು ಮುಂದಿನ ಸಭೆಯಲ್ಲಿ ನೀಡಲಾಗುವುದು. ಈ ವರ್ಷದ ಲೆಕ್ಕವನ್ನು ಈಗ ನೀಡಲಾಗುವುದು ಎಂದರು.
ನಂತರ ಅಧಿಕಾರಿಗಳು ಖರ್ಚಿನ ವಿವರ ಓದಿದರು. ಸದಸ್ಯ ಕೆ.ಜೆ. ನಾಗೇಶ್ ಮಾತನಾಡಿ, ಕೃಷಿ ಮೇಳದಲ್ಲಿ ತಾತ್ಕಾಲಿಕ ಟೆಂಟ್, ಶಾಮಿಯಾನ, ಕುರ್ಚಿ, ವೇದಿಕೆ ನಿರ್ಮಿಸಲು 2,47 ಲಕ್ಷ ರೂ. ನೀಡಿರುವುದು ಜಾಸ್ತಿಯಾಯಿತು. ಫ್ಲೆಕ್ಸ್, ಬ್ಯಾನರ್ ಹಾಕಲು 60 ಸಾವಿರ ರೂ. ಪಾವತಿಸಿರುವುದು ಸರಿಯಲ್ಲ ಎಂದರು.

ವಸ್ತು ಪ್ರದರ್ಶನ, ಕೃಷಿಮೇಳಕ್ಕೆ ಸಾಮಗ್ರಿ ಸರಬರಾಜು ಮಾಡಿದ ವಿವರಗಳು, ಯಾರ್ಯಾರು ಟೆಂಡರ್ ಹಾಕಿದ್ದಾರೆ ಈ ಬಗ್ಗೆ ಸಭೆಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಸದಸ್ಯ ಬಿ.ಎಸ್. ಶಿವಲಿಂಗಪ್ಪ ಆಗ್ರಹಿಸಿದರು. ಬೇಸಿಗೆ ಸಮೀಪಿಸುತ್ತಿರುವುದರಿಂದ ಎಲ್ಲ ವಾರ್ಡ್‌ಗಳಲ್ಲಿ ಕುಡಿಯುವ ನೀರು ಒದಗಿಸಲು ಆದ್ಯತೆ ನೀಡಬೇಕು ಎಂದು  ಸದಸ್ಯ ಎ. ಮಂಜುನಾಥ್ ಸಭೆಯ ಗಮನ ಸೆಳೆದರು.

ಕೆಲ ಗುತ್ತಿಗೆದಾರರಿಗೆ ಟೆಂಡರ್ ಫಾರಂ ನೀಡುತ್ತಿಲ್ಲ ಎಂದು  ಸದಸ್ಯ ಸಿ.ವೈ. ಸತ್ಯನಾರಾಯಣ್ ಮಾಡಿದ ಆರೋಪಕ್ಕೆ  ಉತ್ತರ ನೀಡಿದ ಉಪಾಧ್ಯಕ್ಷ ಮೂರ್ತಿ, ಯಾವ ಗುತ್ತಿಗೆದಾರರಿಗೆ ಫಾರಂ ನೀಡಿಲ್ಲ ಎಂಬುದನ್ನು ಬಹಿರಂಗಪಡಿಸಿ, ಅನಗತ್ಯ ವಿವಾದ ಸೃಷ್ಟಿಸಬೇಡಿ ಎಂದರು.50 ಗುತ್ತಿಗೆದಾರರು ಟೆಂಡರ್ ಫಾರಂ ಸಲ್ಲಿಸಲು ಬಂದರೆ ಅವರ ಜೊತೆ 150 ಜನ ಬರುತ್ತಾರೆ. ಪುರಸಭೆಯಲ್ಲಿ ಗೊಂದಲ ಸೃಷ್ಟಿಯಾಗುತ್ತದೆ. ಕೆಲವರು ಸಭಾಂಗಣದಲ್ಲಿ ಕಾಂಪ್ರಮೈಸ್ ವ್ಯವಹಾರ ಕುದುರಿಸುತ್ತಾರೆ. ಕೆಲ ಸದಸ್ಯರು ಸಹ ತಪ್ಪು ಮಾಡುತ್ತಿದ್ದಾರೆ. ಈ ಅಭಾಸ ತಪ್ಪಬೇಕು. ಹಾಗಾಗಿ ಫಾರಂ ನೀಡಿ ಹೊರ ಕಳುಹಿಸಿ ಎಂದು ಮಂಜುನಾಥ್ ಸಲಹೆ ನೀಡಿದರು. ಸ್ಥಾಯಿ ಸಮಿತಿ ಅಧ್ಯಕ್ಷ ಮಹಮದ್ ಗೌಸ್, ಮುಖ್ಯಾಧಿಕಾರಿ ಎಚ್.ಎಸ್. ಚಂದ್ರಶೇಖರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.