ADVERTISEMENT

ಗಡಿ ಗ್ರಾಮದ ಸಮಸ್ಯೆ ಕೇಳೋರ‌್ಯಾರು?

ಹಿ.ಕೃ.ಚಂದ್ರು
Published 17 ಜೂನ್ 2011, 6:50 IST
Last Updated 17 ಜೂನ್ 2011, 6:50 IST
ಗಡಿ ಗ್ರಾಮದ ಸಮಸ್ಯೆ ಕೇಳೋರ‌್ಯಾರು?
ಗಡಿ ಗ್ರಾಮದ ಸಮಸ್ಯೆ ಕೇಳೋರ‌್ಯಾರು?   

ಹಿರೀಸಾವೆ: ಮೂರು ತಿಂಗಳಿಂದ ವಿದ್ಯುತ್ ಇಲ್ಲ, ಕುಡಿಯವ ನೀರಿಗೆ ಅಲೆದಾಟ, ಸ್ವಚ್ಛತೆ ಎನ್ನುವುದು ಮರೀಚಿಕೆ, ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳ ಬಳಿ ಗ್ರಾಮಸ್ಥರು ಅಲೆದರೂ ಬಗೆಹರಿಯದ ಸಮಸ್ಯೆಗಳು...

ಇವು ಹೋಬಳಿಯ ಮತಿಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಮರವಳ್ಳಿ ಗ್ರಾಮದ ಜನತೆ ಎದುರಿಸುತ್ತಿರುವ ಸಮಸ್ಯೆಗಳು. ಹಾಸನ ಜಿಲ್ಲೆಯ ಗಡಿಯಲ್ಲಿರುವ 70 ಮನೆಗಳ ಗ್ರಾಮ.  400 ಜನಸಂಖ್ಯೆ ಹೊಂದಿದ್ದು, ಎಲ್ಲರು ಕೃಷಿಕರು. ಪ್ರಾಥಮಿಕ ಶಾಲೆ, ಅಂಗನವಾಡಿ ಕೇಂದ್ರಗಳನ್ನು ಹೊಂದಿದೆ, ಯಾವುದೇ ಸಾರಿಗೆ ಸೌಲಭ್ಯ ಈ ಗ್ರಾಮಕ್ಕೆ ಇಲ್ಲ.  ಚುನಾವಣೆ ಸಮಯದಲ್ಲಿ ಬಂದು ಮತ ಕೇಳಿದವರೂ, ಯಾವುದೇ ಸಮಸ್ಯೆಗಳನ್ನು ಬಗೆಹರಿಸಿಲ್ಲ.

ಮೂರು ತಿಂಗಳ ಹಿಂದೆ ಟ್ರಾನ್ಸ್‌ಫಾರ್ಮರ್ ಸುಟ್ಟು ಹೋಗಿದೆ. ಮಕ್ಕಳು ಸಂಜೆಯೊಳಗೆ ಓದು ಮುಗಿಸಬೇಕು, ಕತ್ತಲ್ಲೆಯಲ್ಲಿ ರಾತ್ರಿ ಕಳೆಯುತ್ತಿದ್ದಾರೆ. ಕೊಳವೆ ಬಾವಿಗೆ ವಿದ್ಯುತ್ ಇಲ್ಲದೆ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದೆ. ಗ್ರಾಮದಲ್ಲಿ ಎರಡು ಕೈ ಪಂಪ್‌ಗಳಿದ್ದು, ಒಂದು ಕೆಟ್ಟು ಹೋಗಿದೆ, ಮತ್ತೊಂದರ ನೀರು ಕುಡಿಯಲು ಯೊಗ್ಯವಾಗಿಲ್ಲ. ಪಕ್ಕದ ಗ್ರಾಮಗಳಾದ ಬ್ಯಾಡರಹಳ್ಳಿ ಮತ್ತು ಅಂತನಹಳ್ಳಿ ಗ್ರಾಮಗಳಿಂದ ಮನೆ ಮಂದಿಯೆಲ್ಲ ನೀರು ತರಬೇಕಾದ ಪರಿಸ್ಥಿತಿ ನಿಮಾರ್ಣವಾಗಿದೆ. 

 ಶಾಲೆಯಲ್ಲಿ ಅಕ್ಷರ ದಾಸೋಹಕ್ಕೆ ಗ್ಯಾಸ್ ಹದಿನೈದು ದಿನದಿಂದ ಬಂದಿಲ್ಲ. ಹಳೆಯ ಶಾಲಾ ಕಟ್ಟಡ ಬೀಳುವ ಸ್ಥಿತಿಯಲ್ಲಿದ್ದು, ಅದರಲ್ಲಿಯೇ  ಮೂರು ವರ್ಷಗಳಿಂದ ಅಂಗನವಾಡಿ ಕೇಂದ್ರ ನಡೆಯುತ್ತಿದೆ. ಹೊಸ ಅಂಗನವಾಡಿ ಕಟ್ಟಡದ ನಿರ್ಮಾಣ ಕೆಲಸವನ್ನು ಭೂಸೇನಾ ನಿಗಮದವರು ಅರ್ಧಕ್ಕೆ ನಿಲ್ಲಿಸಿ ಹಲವು ತಿಂಗಳುಗಳು ಕಳೆದಿವೆ.

20ಕ್ಕೂ ಹೆಚ್ಚು ನಾಗರಿಕರು ಮತದಾನದ ಪಟ್ಟಿಯಲ್ಲಿ ಹೆಸರಿಲ್ಲದೇ ಹಲವು ಚುನಾವಣೆಗಳಿಂದ ಮತದಾನವನ್ನೇ ಮಾಡಿಲ್ಲ. ಹಲವು ಮಂದಿಗೆ ವೃದ್ಧಾಪ್ಯ ವೇತನ ತಲುಪಿಲ್ಲ. ಆರು ತಿಂಗಳಿಂದ ಅಂಗವಿಕಲರಿಗೆ ಸರ್ಕಾರದ ಹಣ ತಲುಪಿಲ್ಲ. ಅಂಗವಿಕಲರೊಬ್ಬರು ಶೌಚಾಲಯ ನಿರ್ಮಾಣ ಮಾಡಲು ಸಹಾಯ ಧನ ಕೇಳಿದರೆ, ಗ್ರಾಮ ಪಂಚಾಯಿತಿಯಲ್ಲಿ ಯಾವುದೇ ಅನುದಾನವಿಲ್ಲ ಎಂಬ ಉತ್ತರವನ್ನು ಕಾರ್ಯದರ್ಶಿ ನೀಡುತ್ತಾರೆ. 

ಗಡಿ ಗ್ರಾಮವಾಗಿರುವುದೇ ದೊಡ್ಡ ಶಾಪವಾಗಿದೆ. ಗ್ರಾಮದಲ್ಲಿ ಯಾವುದೇ ಗ್ರಾಮ ಪಂಚಾಯಿತಿ ಸದಸ್ಯರಿಲ್ಲ. ಹಲವು ತಿಂಗಳಿಂದ ಯಾವುದೇ ಜನ ಪ್ರತಿನಿಧಿಗಳು ಮತ್ತು ಅಧಿಕಾರಿಗಳು ಹಳ್ಳಿಗೆ ಭೇಟಿ ನೀಡಿಲ್ಲ.  ಸಮಸ್ಯೆಗಳನ್ನು ಯಾರ ಬಳಿ ಹೇಳಬೇಕು ಎಂಬ ಚಿಂತೆ ಗ್ರಾಮಸ್ಥರನ್ನು ಕಾಡುತ್ತಿದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.