ADVERTISEMENT

ಚುನಾವಣಾ ಪ್ರಚಾರಕ್ಕೆ ಮಾಯಾವತಿ

ಸಂದೇಶ್‌ ನಾಗರಾಜ್‌ ಪಕ್ಷ ತೊರೆಯುವುದಿಲ್ಲ: ದೇವೇಗೌಡ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2018, 10:54 IST
Last Updated 30 ಮಾರ್ಚ್ 2018, 10:54 IST
ಎಚ್‌.ಡಿ.ದೇವೇಗೌಡ
ಎಚ್‌.ಡಿ.ದೇವೇಗೌಡ   

ಹಾಸನ: ಮುಂಬೈ, ಹೈದರಬಾದ್‌ ಕರ್ನಾಟಕ ಮತ್ತು ಹಳೇ ಮೈಸೂರು ಭಾಗದಲ್ಲಿ ಚುನಾವಣೆ ಪ್ರಚಾರಕ್ಕೆ ಬಿಎಸ್ ಪಿ ನಾಯಕಿ ಮಾಯಾವತಿ ಭಾಗವಹಿಸುವರು ಎಂದು ಸಂಸದ ಎಚ್‌.ಡಿ.ದೇವೇಗೌಡ ಹೇಳಿದರು.ಬಿಎಸ್‌ಪಿ ಜತೆ ಹೊಂದಾಣಿಕೆ ಮಾಡಿಕೊಂಡು ರಾಜ್ಯದಲ್ಲಿ ಕೆಲ ಕ್ಷೇತ್ರಗಳನ್ನು ಬಿಟ್ಟು ಕೊಡಲಾಗಿದೆ. ಹಾಗಾಗಿ ಏಪ್ರಿಲ್‌, 2, 3 ರಂದು ರಾಜ್ಯಕ್ಕೆ ಭೇಟಿ ನೀಡುವರು ಎಂದು ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಎನ್‌ಡಿಎ ವಿರುದ್ಧ ಹೋರಾಟಕ್ಕೆ ಜಾತ್ಯತೀತ ಪಕ್ಷಗಳು ಒಂದಾಗಬೇಕು ಎಂದು ಆಂದ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು, ತೆಲಂಗಾಣದ ಚಂದ್ರಶೇಖರ್‌ ರಾವ್‌, ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಹೇಳಿದ್ದಾರೆ. ಇದಕ್ಕೆ ನನ್ನ ಸಹಕಾರ ಇದೆ. ಆದರೆ ಸದ್ಯ ರಾಜ್ಯದಲ್ಲಿ ಚುನಾವಣೆ ಮುಗಿಯುವವರೆಗೆ ಒಕ್ಕೂಟ ಸೇರುವುದಿಲ್ಲ. ಮೇ 18ರ ಬಳಿಕ ತೀರ್ಮಾನ ಕೈಗೊಳ್ಳಲಾಗುವುದು. ಎರಡೂ ರಾಷ್ಟ್ರೀಯ ಪಕ್ಷಗಳಿಂದ ರಾಜ್ಯಕ್ಕಾಗಿರುವ ಪೆಟ್ಟು ಸರಿಪಡಿಸುವುದು ಮೊದಲ ಗುರಿ. ಏಕಾಂಗಿಯಾಗಿ ಹೋರಾಟ ಮಾಡುತ್ತೇನೆ. ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಮಾತಿಲ್ಲ ಎಂದು ನುಡಿದರು.

ಚುನಾವಣೆ ಬಂದಾಗ ಅಡಿಕೆ ಸಮಸ್ಯೆ ಮಾತ ನಾಡುವವರು ಇಲ್ಲಿಯವರೆಗೆ ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಗೌಡರು, ಜನರು ಎಲ್ಲವನ್ನು ಅರ್ಥ ಮಾಡಿಕೊಳ್ಳು ತ್ತಾರೆ. ಮೋಸ ಮಾಡಲು ಸಾಧ್ಯವಿಲ್ಲ. ಪ್ರದೇಶಿಕ ಪಕ್ಷ ಉಳಿಯಲು ನಾಡಿನ ಜನತೆ ಆಶೀರ್ವಾದ ಮಾಡಬೇಕಾಗಿದೆ. ಏಪ್ರಿಲ್‌ 2ರಂದು ಹಾಸನ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯುವ ಸಮಾವೇಶಕ್ಕೆ 1 ಲಕ್ಷಕ್ಕೂ ಹೆಚ್ಚು ಕಾರ್ಯಕರ್ತರು ಭಾಗವಹಿಸುವ ನಿರೀಕ್ಷೆ ಇದೆ. ಸಮಾವೇಶದ ನಂತರ ಅಗತ್ಯವಿರುವ ಕ್ಷೇತ್ರಗಳಿಗೆ ಪ್ರವಾಸ ಕೈಗೊಳ್ಳಲಾಗುವುದು. ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದ್ದು, ಯಾವುದೇ ಗೊಂದಲ ಇಲ್ಲ ಎಂದು ವಿವರಿಸಿದರು.

ADVERTISEMENT

ಸಂದೇಶ್‌ ನಾಗರಾಜ್‌ ಅವರು ಜೆಡಿಎಸ್ ತೊರೆಯುವುದಿಲ್ಲ. ಬೆಳಿಗ್ಗೆ ಅವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದೇನೆ. ಪಕ್ಷ ತೊರೆಯುತ್ತಾರೆ ಎಂಬುದು ವದಂತಿ. ಏಪ್ರಿಲ್‌ 4, 5 ರಂದು ಎಚ್‌.ಡಿ.ಕೋಟೆಗೆ ನನ್ನ ಜತೆ ಪ್ರಚಾರಕ್ಕೆ ಬರಲಿದ್ದಾರೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.