ಸಕಲೇಶಪುರ: ತಾಲ್ಲೂಕಿನ ಪಶ್ಚಿಮಘಟ್ಟದ ನಿತ್ಯ ಹರಿದ್ವರ್ಣ ಮಳೆ ಕಾಡುಗಳ ಅಂಚಿನಲ್ಲಿರುವ ತಾಲ್ಲೂಕಿನ ಜಗಾಟ ಗ್ರಾಮ, ರಸ್ತೆ, ಸಾರಿಗೆ, ಕುಡಿಯುವ ನೀರು ಸೇರಿದಂತೆ ಮೂಲ ಸೌಕರ್ಯಗಳಿಂದ ವಂಚಿತಗೊಂಡಿದೆ.
ತಾಲ್ಲೂಕು ಕೇಂದ್ರದಿಂದ ಸುಮಾರು 60 ಕಿ.ಮೀ. ದೂರದಲ್ಲಿ ಇರುವ ಈ ಗ್ರಾಮ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿದೆ. ಗ್ರಾಮಕ್ಕೆ ಹೊಂಗಡಹಳ್ಳದಿಂದ 4 ಕಿ.ಮೀ. ರಸ್ತೆಯಿದ್ದು, ನಡೆದುಕೊಂಡು ಹೋಗಲು ಯೋಗ್ಯವಾಗಿಲ್ಲ. ಬೇಸಿಗೆಯಲ್ಲಿ ಜೀಪುಗಳನ್ನು ಬಿಟ್ಟರೆ ಯಾವುದೇ ವಾಹನಗಳು ಹೋಗುವುದಕ್ಕೆ ರಸ್ತೆ ವ್ಯವಸ್ಥೆ ಇಲ್ಲ. 10 ವರ್ಷಗಳ ಹಿಂದೆ ಹೊಂಗಡಹಳ್ಳ ಗ್ರಾಮ ಪಂಚಾಯಿತಿ ವತಿಯಿಂದ ರಸ್ತೆಗೆ ಜಲ್ಲಿ ಹಾಕಿದ್ದು ಬಿಟ್ಟರೆ, ಇದುವರೆಗೆ ಕಾಮಗಾರಿ ನಡೆದಿಲ್ಲ ಎಂದು ಗ್ರಾಮದ ಜೆ.ಕೆ. ಪ್ರಸನ್ನಕುಮಾರ್ ದೂರುತ್ತಾರೆ.
ಗರ್ಭಿಣಿಯರು, ವಯಸ್ಸಾದವರು, ಮಕ್ಕಳು ಆಸ್ಪತ್ರೆ ಅಥವಾ ಯಾವುದೇ ಊರಿಗೆ ಹೋಗಬೇಕಾದರೂ, 4 ಕಿ.ಮೀ. ನಡೆದು ಹೊಂಗಡಹಳ್ಳದಿಂದ ಬಸ್ಸಿನಲ್ಲಿ ಪ್ರಯಾಣ ಮಾಡಬೇಕು. ಗ್ರಾಮಕ್ಕೆ ಒಂದು ವ್ಯವಸ್ಥಿತವಾದ ರಸ್ತೆ, ಸಾರಿಗೆ ವ್ಯವಸ್ಥೆ ಆಗಬೇಕು ಎಂಬುದು ಗ್ರಾಮಸ್ಥರ ಶತಮಾನಗಳ ಬೇಡಿಕೆಯಾಗಿದೆ. ಜನಪ್ರತಿನಿಧಿಗಳಿಗೆ ಚುನಾವಣೆ ಸಂದರ್ಭದಲ್ಲಿ ಮಾತ್ರ ಮೂಲಸೌಲಭ್ಯಗಳಿಂದ ವಂಚಿತ ಈ ಗ್ರಾಮಗಳು ನೆನಪಿಗೆ ಬರುವುದು ಬಿಟ್ಟರೆ, ಪುನಃ ನೆನಪಾಗುವುದು ಮತ್ತೊಂದು ಚುನಾವಣೆ ಸಂದರ್ಭದಲ್ಲಿ ಎಂದು ಪ್ರಸನ್ನ `ಪ್ರಜಾವಾಣಿಗೆ'ಯೊಂದಿಗೆ ಸಮಸ್ಯೆಯನ್ನು ಬಿಚ್ಚಿಟ್ಟರು.
ಕಾಡಾನೆ ದಾಳಿ
ಪಶ್ಚಿಮಘಟ್ಟದ ಕಾಡುಗಳನ್ನು ನಾಶ ಮಾಡಿ ಜಲವಿದ್ಯುತ್ ಯೋಜನೆಗಳನ್ನು ಮಾಡಿದ ನಂತರ ಕಾಡಿನಲ್ಲಿ ಇದ್ದ ಕಾಡಾನೆಗಳು, ಕಾಟಿಗಳು ಆಹಾರ ಹುಡುಕಿಕೊಂಡು ನಿತ್ಯ ಗ್ರಾಮಕ್ಕೆ ದಾಳಿ ಇಡುತ್ತಿವೆ. ರೈತರು ಬೆಳೆದ ಬತ್ತ, ಏಲಕ್ಕಿ, ಹಸಿರು ಮೆಣಸಿನಕಾಯಿ ಎಲ್ಲ ಬೆಳೆಗಳನ್ನು ಈ ಕಾಡು ಪ್ರಾಣಿಗಳು ತಿಂದು, ತುಳಿದು ನಾಶ ಮಾಡುತ್ತಿರುವುದರಿಂದ ಕಳೆದ ನಾಲ್ಕು ವರ್ಷಗಳಿಂದ ಯಾವುದೇ ಬೆಳೆ ಬೆಳೆಯುತ್ತಿಲ್ಲ. ಈ ಗ್ರಾಮದಲ್ಲಿ ಎಷ್ಟೇ ಸಮಸ್ಯೆ ಇದ್ದರೂ, ವರ್ಷದ ಕೂಳಿಗಾಗಿ ಬತ್ತ ಬೆಳೆಯುತ್ತಿದ್ದ ಅವರು ಅಂಗಡಿಯಿಂದ ಅಕ್ಕಿಯನ್ನು ಕೊಂಡು ತರಬೇಕಾದ ಸ್ಥಿತಿ ನಿರ್ಮಾಣ ಆಗಿದೆ. ಕಾಡಾನೆಗಳ ಹಾವಳಿ ತಪ್ಪಿಸಲು ಸರ್ಕಾರ ಸೋಲಾರ್ ಬೇಲಿ ವ್ಯವಸ್ಥೆ ಮಾಡುವಂತೆ ಹಿಂದಿನ ಮುಖ್ಯಮಂತ್ರಿವರೆಗೂ ಮನವಿ ಸಲ್ಲಿಸಿದ್ದು, ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗಿಲ್ಲ ಎನ್ನುತ್ತಾರೆ.
`ಈ ಗ್ರಾಮದಿಂದ ಆಚೆ ಕುರ್ಕಾ ಮನೆ ಹ್ಯಾಮ್ಲೇಟ್ ಗ್ರಾಮ, ಹಾಗೂ ಜಮೀನುಗಳು ಆ ಭಾಗದಲ್ಲಿವೆ. ಅಲ್ಲಿಗೆ ಹೋಗುವುದಕ್ಕೆ ರಸ್ತೆ ಇಲ್ಲ, ಮಧ್ಯದಲ್ಲಿ ಇರುವ ಹಳ್ಳ ದಾಟುವುದಕ್ಕೂ ಯಾವುದೇ ವ್ಯವಸ್ಥೆ ಇಲ್ಲ. ಗ್ರಾಮಸ್ಥರೇ ಮರದ ದಿಮ್ಮಿಗಳನ್ನು ಹಾಕಿಕೊಂಡು ಅತ್ತಿಂದಿತ್ತ ಹೋಗಬೇಕಾದ ಕಷ್ಟದ ಪರಿಸ್ಥಿತಿ ಇದೆ. ಮಳೆಗಾಲದಲ್ಲಿ ಹೊಳೆ ಭರ್ತಿಯಾಗಿ ಹರಿಯುವ ಸಂದರ್ಭದಲ್ಲಿ ಮರದ ದಿಮ್ಮಿಯಿಂದ ದಾಟುವುದು ತೀರಾ ಅಪಾಯ' ಎಂದು ಗ್ರಾಮದ ಜೆ.ಎಂ.ಯತೀಶ್ ಹೇಳುತ್ತಾರೆ.
ಗ್ರಾಮಸ್ಥರ ಬೇಡಿಕೆಗಳು
ಹೊಂಗಡಹಳ್ಳದಿಂದ 4 ಕಿ.ಮೀ. ರಸ್ತೆ ವಿಸ್ತರಣೆಗೊಂಡು ಡಾಂಬರೀಕರಣ ಆಗಬೇಕು, ಸಾರಿಗೆ ಸೌಲಭ್ಯ ಹಾಗೂ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.
ವಿದ್ಯುತ್ ಸಂಪರ್ಕದ ಮಾರ್ಗದಲ್ಲಿ ಬೀಳುವ ಹಂತದಲ್ಲಿ ಇರುವ ವಿದ್ಯುತ್ ಕಂಬಗಳನ್ನು ಬದಲಿಸಬೇಕು, ಹೊಸ ಟ್ರಾನ್ಸ್‌ಫಾರ್ಮರ್ ಅಳವಡಿಸಬೇಕು. ಕಾಡು ಪ್ರಾಣಿಗಳು ರೈತರ ಬೆಳೆ ಹಾನಿ ಮಾಡದಂತೆ ಸೋಲಾರ್ ಬೇಲಿ ವ್ಯವಸ್ಥೆ ಮಾಡಬೇಕು. ಕುರ್ಕಾಮನೆಗೆ ಹೋಗುವ ಮಾರ್ಗದಲ್ಲಿರುವ ಕಿರು ಹಳ್ಳಕ್ಕೆ ಕಿರು ಸೇತುವೆ ನಿರ್ಮಾಣ ಆಗಬೇಕು ಎಂಬ ಬೇಡಿಕೆಗಳ ಬಗ್ಗೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಗಮನ ಹರಿಸಬೇಕಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.