ADVERTISEMENT

ಜನಾರ್ದನ ರೆಡ್ಡಿ ಟಿಕೆಟ್‌ ಕೇಳಿಲ್ಲ

ಜನಾರ್ದನ ರೆಡ್ಡಿ ಟಿಕೆಟ್‌ ಕೇಳಿಲ್ಲ; ಕೊಟ್ಟಿಲ್ಲ: ಬಿ.ಎಸ್‌. ಯಡಿಯೂರಪ್ಪ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2018, 10:32 IST
Last Updated 28 ಏಪ್ರಿಲ್ 2018, 10:32 IST

ಹಾಸನ: ‘ಜನಾರ್ದನ ರೆಡ್ಡಿಗೆ ಸೀಟು ಕೊಟ್ಟಿಲ್ಲ, ಅವರೂ ಕೇಳಿಯೂ ಇಲ್ಲ. ಆದರೆ ಅವರ ಸಹಾಯದಿಂದ 10 ರಿಂದ 15 ಸೀಟು ಗೆಲ್ಲುತ್ತೇವೆ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಹೇಳಿದರು.

ಬಿಜೆಪಿ ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗೀಲೆ ಯೋಗೇಶ್‌ ಅವರ ಮನೆಗೆ ಭೆಟಿ ನೀಡಿ ಸಮಾಲೋಚನೆ ನಡೆಸಿದ ಬಳಿಕ ಸುದ್ದಿಗಾರರೋಂದಿಗೆ ಮಾತನಾಡಿದರು.

‘ನಮಗೆ ಅನುಕೂಲ ಆಗುವುದಾದರೆ ವಿರೋಧಿಗಳ ನೆರವು ಪಡೆಯಿರಿ ಎಂದು ಅಮಿತ್‌ ಶಾ ಹೇಳಿದ್ದಾರೆ. ವಾಲ್ಮೀಕಿ ಜನಾಂಗ ಪ್ರಮುಖ ನಾಯಕ ಬಿ.ಶ್ರೀರಾಮುಲು ಅವರು ಬಾದಾಮಿ ಕ್ಷೇತ್ರದಲ್ಲಿ ಗೆಲುವು ಸಾಧಿಸುತ್ತಾರೆ’ ಎಂದರು.

ADVERTISEMENT

ಸಿದ್ದರಾಮಯ್ಯ ಲಜ್ಜೆಗೆಟ್ಟ ಮುಖ್ಯಮಂತ್ರಿ ಮತ್ತು ಲೂಟಿಕೋರ. ಕಾಂಗ್ರೆಸ್‌ನ ಕೊನೆಯ ಮುಖ್ಯಮಂತ್ರಿ. ಭ್ರಷ್ಟಚಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಅವರು ಸೋಲುವ ಭೀತಿಯಿಂದ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧಿಸದೆ ಬಾದಾಮಿಯಲ್ಲಿ ಸ್ಪರ್ಧಿಸುತ್ತಿದ್ದಾರೆ. ಅವರು ಎರಡು ಕಡೆಯೂ ಸೋಲುತ್ತಾರೆ’ ಎಂದು ಭವಿಷ್ಯ ನುಡಿದರು.

‘ರಾಜ್ಯದ 224 ಕ್ಷೇತ್ರದಲ್ಲೂ ಬಿಜೆಪಿ ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. 150 ಸ್ಥಾನ ಪಡೆಯುವ ಮೂಲಕ ಸ್ವಂತ ಬಲದಿಂದ ಅಧಿಕಾರ ಹಿಡಿಯಲಿದ್ದೇವೆ’ ಎಂದರು.

‘ರಾಜ್ಯದಲ್ಲಿ ಐದು ವರ್ಷ ಆಡಳಿತ ನಡೆಸಿರುವ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಆಡಳಿತ ವಿರೋಧಿ ಅಲೆ ಇದ್ದು, ಅವರು ಬಿಡುಗಡೆ ಮಾಡಿರುವ ಚುನಾವಣೆ ಪ್ರಣಾಳಿಕೆಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲ. ಏ. 30ಕ್ಕೆ ಪಕ್ಷದ ಪ್ರಣಾಳಿಕೆ ಬಿಡುಗಡೆ ಆಗಲಿದೆ. ಪ್ರಣಾಳಿಕೆಯಲ್ಲಿ ರೈತರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು’ ಎಂದು ಹೇಳಿದರು.

‘ನಾನು ಸಿ.ಎಂ ಅಭ್ಯರ್ಥಿ ಎಂದು ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ವಿಜಯೇಂದ್ರ ಸ್ಪರ್ಧೆ ಬೇಡ ಎಂದು ರಾಷ್ಟ್ರ ನಾಯಕರು ತೀರ್ಮಾನ ಮಾಡಿದ್ದಾರೆ. ವಿಜಯೇಂದ್ರ ಈಗಲೂ ಕ್ಷೇತ್ರದಲ್ಲಿ ಪ್ರಚಾರದಲ್ಲಿ ತೊಡಗಿದ್ದಾರೆ. ಉತ್ತರ ಪ್ರದೇಶ ಚುನಾವಣಾ ಫಲಿತಾಂಶ ರಾಜ್ಯದಲ್ಲೂ ಪುನರಾವರ್ತನೆಯಾಗಲಿದೆ. ಪ್ರಧಾನಿ ಮೋದಿ ಸೇರಿ ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಪ್ರಚಾರಕ್ಕೆ ಬರಲಿದ್ದಾರೆ. ಜಿಲ್ಲೆಯಲ್ಲಿ 3–4 ಸ್ಥಾನ ಗೆಲ್ಲುತ್ತೇವೆ’ ಎಂದು ನುಡಿದರು.

‘ಪ್ರಧಾನ ಮಂತ್ರಿ ರಾಜ್ಯಕ್ಕೆ ಬಂದರೆ ರಾಜ್ಯದಲ್ಲಿ ಕಾಂಗ್ರೆಸ್ ನೆಲಸಮ ಆಗಲಿದೆ. ದೇವೇಗೌಡರ ಬಗ್ಗೆ ನನಗೆ ಗೌರವ ಇದೆ. ದೇವೇಗೌಡರಿಗೂ ಪ್ರಧಾನಿ ಅವರ ಮೇಲೆ ಅಪಾರ ಗೌರವ ಹಾಗೂ ವಿಶ್ವಾಸ ಹೊಂದಿದ್ದಾರೆ. ಕಾಂಗ್ರೆಸ್‌ ಕೋಮುವಾದಿ ಸರ್ಕಾರವೇ ಹೊರತು ಬಿಜೆಪಿ ಅಲ್ಲ’ ಎಂದು ಪ್ರಶ್ಯೆಯೊಂದಕ್ಕೆ ಉತ್ತರಿಸಿದರು.

ಹಾಸನ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರೀತಂ ಜೆ.ಗೌಡ, ಮುಖಂಡರಾದ ಬಿ.ವಿ. ಕರಿಗೌಡ, ನವಿಲೆ ಅಣ್ಣಪ್ಪ, ಗ್ರಾಮಾಂತರ ಮಂಡಲದ ಅಧ್ಯಕ್ಷ ಅಗಿಲೆ ಯೋಗೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.