ADVERTISEMENT

ಜಾತಿ ರಾಜಕೀಯಕ್ಕೆ ಭವಿಷ್ಯವಿಲ್ಲ: ಸದಾನಂದಗೌಡ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 19:59 IST
Last Updated 20 ಡಿಸೆಂಬರ್ 2012, 19:59 IST

ಹಾಸನ: `ಜಾತಿಗಿಂತ ಮುಖ್ಯವಾಗಿ ನಾವು ಬದುಕುವ ವ್ಯವಸ್ಥೆ ಸುಧಾರಣೆಯಾಗಬೇಕು, ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳಾಗಬೇಕು ಎಂದು ಜನರು ಬಯಸುತ್ತಾರೆ. ಗುಜರಾತ್ ಚುನಾವಣಾ ಫಲಿತಾಂಶದಿಂದ ಇದು ಸ್ಪಷ್ಟವಾಗಿದೆ.

ರಾಜ್ಯದಲ್ಲೂ ಮುಂದಿನ ಚುನಾವಣೆಯಲ್ಲಿ ಜಾತಿ ರಾಜಕೀಯ ಮಾಡುವವರನ್ನು ಜನರು ದೂರ ಇಡುವುದರಲ್ಲಿ ಸಂದೇಹವೇ ಇಲ್ಲ' ಎಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಪರೋಕ್ಷವಾಗಿ ಯಡಿಯೂರಪ್ಪ ಅವರನ್ನು ಟೀಕಿಸಿದರು.
 
ಹಾಸನದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಲು ಬಂದಿದ್ದ ಅವರು ಪತ್ರಕರ್ತರೊಡನೆ ಮಾತನಾಡಿದರು.
 
`ಗುಜರಾತ್ ಚುನಾವಣೆ ಆ ರಾಜ್ಯಕ್ಕೆ ಮಾತ್ರವಲ್ಲ, ಇಡೀ ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದೆ. ಗುಜರಾತ್‌ನ ರಾಜಕೀಯಕ್ಕೂ ಇಲ್ಲಿನ ರಾಜಕೀಯಕ್ಕೂ ಹೆಚ್ಚಿನ ವ್ಯತ್ಯಾಸವಿಲ್ಲ. ಅಲ್ಲೂ ಬಿಜೆಪಿಯಿಂದ ಸಿಡಿದ ಒಬ್ಬ ನಾಯಕ ಜಾತಿ ರಾಜಕೀಯ ಮಾಡಿ ಜನರ ನಿರ್ಲಕ್ಷ್ಯಕ್ಕೆ ಒಳಗಾಗಿದ್ದಾರೆ. ಇಲ್ಲೂ ಅದೇ ಆಗಲಿದೆ' ಎಂದು ಹೆಸರು ಉಲ್ಲೇಖಿಸದೆ ನುಡಿದರು.

`ಜೈಲುಪಾಲಾಗುತ್ತಿದ್ದೆ'
ನನ್ನನ್ನು ಮುಖ್ಯಮಂತ್ರಿ ಮಾಡಿದವರು (ಯಡಿಯೂರಪ್ಪ) ಹೇಳಿದ ಎಲ್ಲ ಕಡತಗಳಿಗೆ       ಸಹಿ ಮಾಡಿದ್ದರೆ ನಾನು ಇಂದು ಜೈಲಿನಲ್ಲಿರಬೇಕಾಗಿತ್ತು. ಸಹಿ ಮಾಡದ ಕಾರಣಕ್ಕೆ ನಾನು ಅಧಿಕಾರ ಕಳೆದುಕೊಂಡೆ. ಅದಕ್ಕೆ ಬೇಸರವಿಲ್ಲ. ಇದ್ದ ಕೆಲವೇ ತಿಂಗಳಲ್ಲಿ ಉತ್ತಮ ಆಡಳಿತ ನೀಡಿದ ಸಮಾಧಾನವಿದೆ' ಎಂದು ಸದಾನಂದಗೌಡ ಹೇಳಿದರು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.