ADVERTISEMENT

`ಟ್ಯಾಂಕರ್ ಮೂಲಕ ನೀರು ಸೌಲಭ್ಯ'

ಹಿರೀಸಾವೆ: ಬೂಕನಬೆಟ್ಟದ ದನಗಳ ಜಾತ್ರೆ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 6:53 IST
Last Updated 20 ಡಿಸೆಂಬರ್ 2012, 6:53 IST

ಹಿರೀಸಾವೆ: ಬೂಕನಬೆಟ್ಟದ ದನಗಳ ಜಾತ್ರೆಗೆ ಕುಡಿಯುವ ನೀರನ್ನು ಹತ್ತು ಟ್ಯಾಂಕರ್‌ಗಳ ಮೂಲಕ ಒದಗಿಸಲಾಗುವುದು ಎಂದು ತಹಶೀಲ್ದಾರ್ ಸತೀಶ್‌ಬಾಬು ಬುಧವಾರ ಹೇಳಿದರು.ಹಿರೀಸಾವೆಯ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಜಾತ್ರೆಯ ಸುಂಕದ ಹರಾಜು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು, ಎರಡು ಬೊರ್‌ವೆಲ್‌ಗಳನ್ನು ಕೊರೆಸಿದ್ದರೂ ನೀರು ಬಂದಿಲ್ಲ. ರೈಲ್ವೆ ಮತ್ತು ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯವರ ಹಾಗೂ ಲೋಕೋಪಯೋಗಿ ಇಲಾಖೆಯ ಟ್ಯಾಂಕರ್‌ಗಳ ಮೂಲಕ ನೀರು ಸರಬರಾಜು ಮಾಡಲಾಗುವುದು, ರೈತರು ಆಡಳಿತ ಮಂಡಳಿಯೊಡನೆ ಸಹಕರಿಸಬೇಕು ಎಂದು ಮನವಿ ಮಾಡಿದರು.

ಜನವರಿ 10ರಿಂದ 22ರ ವರೆಗೆ ಜಾತ್ರೆ ನಡೆಯಲ್ಲಿದ್ದು 19 ರಂದು ರಂಗನಾಥ ಸ್ವಾಮಿಯ ರಥೋತ್ಸವ ನಡೆಯಲಿದೆ. ಗ್ರಾಮೀಣ ಕ್ರೀಡೆಗಳಾದ ಹಗ್ಗ-ಜಗ್ಗಾಟ, ತೆಂಗಿನ ಕಾಯಿ ಸುಲಿಯುವುದು ಮತ್ತು ಮಹಿಳೆಯರಿಗೆ ರಂಗೋಲಿ, ಹೂ ಕಟ್ಟುವ ಸ್ಪರ್ಧೆಗಳನ್ನು ನಡೆಸಲಾಗುವುದು ಮತ್ತು ಕೃಷಿ ಮೇಳವನ್ನು ಏರ್ಪಡಿಸಲಾಗಿದ್ದು ವಿವಿಧ ಇಲಾಖೆಗಳು ಮತ್ತು ಕಂಪೆನಿಗಳು ಮೇಳದಲ್ಲಿ ಭಾಗವಹಿಸಲಿವೆ ಎಂದು ಹೇಳಿದರು.

  ಅಂಗಡಿಗಳ ಸುಂಕವು 2,70,000 ರೂಪಾಯಿ, ಜಾನುವಾರುಗಳ ಸುಂಕವು 20,600 ರೂಪಾಯಿ ಮತ್ತು ಜಾತ್ರೆ ಆವರಣದಲ್ಲಿ ಬಿದ್ದ ಗೊಬ್ಬರವು 36 ಸಾವಿರ ರೂಪಾಯಿಗಳಿಗೆ ಹರಾಜಾಯಿತು. ಪುನರ್ ನಿರ್ಮಾಣಗೊಂಡಿರುವ ದೇವಸ್ಥಾನವನ್ನು ಜಾತ್ರೆ ನಡೆಯುವ ದಿನಗಳಲ್ಲಿ ಉದ್ಘಾಟನೆ ಮಾಡುವ ಪ್ರಯತ್ನ ಮಾಡುತ್ತಿರುವುದಾಗಿ ದೇವಸ್ಥಾನದ ಸಮಿತಿ ತಿಳಿಸಿತು.

ಗ್ರಾಮ ಪಂಚಾಯಿತಿ ಅಧಕ್ಷರಾದ ಬಿ.ಕೇಶವ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಚ್.ಎಸ್.ರವಿಕುಮಾರ್,ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಎಚ್.ಜಿ.ರಾಮಕೃಷ್ಣ, ಗ್ರಾಮ ಪಂಚಾಯಿತಿ ಮಾಜಿ ಅಧಕ್ಷರಾದ ಮಂಜುನಾಥ್, ಎಚ್.ಎಸ್.ಶ್ರೀಧರ್, ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವಿಜಯಕುಮಾರ್, ಜಾತ್ರಾ ಸಮಿತಿಯ ಸದಸ್ಯರುಗಳು, ಗ್ರಾ.ಪಂ.ಸದಸ್ಯರುಗಳು, ಕಂದಾಯ ವೃತ್ತ ನಿರೀಕ್ಷಕರಾದ ರಾಮ್‌ಶೆಟ್ಟಿ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT