ADVERTISEMENT

ದಕ್ಷಿಣ ವಲಯ ಐಜಿಪಿ ಕಾಂಗ್ರೆಸ್ ಏಜೆಂಟ್‌

ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಶಾಸಕ ಎಚ್.ಡಿ. ರೇವಣ್ಣ ಗಂಭೀರ ಆರೋಪ

​ಪ್ರಜಾವಾಣಿ ವಾರ್ತೆ
Published 12 ಮೇ 2018, 9:19 IST
Last Updated 12 ಮೇ 2018, 9:19 IST

ಹಾಸನ: ‘ದಕ್ಷಿಣ ವಲಯ ಐಜಿಪಿ ಸೌಮೇಂದ್ರ ಮುಖರ್ಜಿ ಕಾಂಗ್ರೆಸ್‌ ಏಜೆಂಟ್‌ರಂತೆ ಕೆಲಸ ಮಾಡುತ್ತಿದ್ದು, ಪೊಲೀಸ್ ಇಲಾಖೆಯನ್ನು ನಿವೃತ್ತ ಅಧಿಕಾರಿ ಕೆಂಪಯ್ಯ ನಿಯಂತ್ರಿಸುತ್ತಿದ್ದಾರೆ’ ಎಂದು ಹೊಳೆನರಸೀಪುರ ಕ್ಷೇತ್ರದ ಶಾಸಕ ಹಾಗೂ ಜೆಡಿಎಸ್ ಅಭ್ಯರ್ಥಿ ಎಚ್.ಡಿ. ರೇವಣ್ಣ ಆರೋಪಿಸಿದರು.

‘ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಅಕ್ರಮವಾಗಿ ಮದ್ಯ ಸಾಗಿಸುತ್ತಿದ್ದ ಆರೋಪಿಯನ್ನು ಕಾರ್ಯಕರ್ತರು ಸಾಕ್ಷಿ ಸಮೇತ ಪೊಲೀಸರಿಗೆ ಒಪ್ಪಿಸಿದರೂ ಕ್ರಮ ಕೈಗೊಂಡಿಲ್ಲ. ಅಬಕಾರಿ ಜಿಲ್ಲಾಧಿಕಾರಿ ಕಾಂಗ್ರೆಸ್‌ ಪರವಾಗಿ ಕೆಲಸ ಮಾಡುತ್ತಿದ್ದು, ಕೂಡಲೇ ಅವರನ್ನು ಕರ್ತವ್ಯದಿಂದ ವಜಾ ಮಾಡಬೇಕು. ಚುನಾವಣೆ ಅಕ್ರಮಗಳು ನಡೆಯುತ್ತಿದ್ದರೂ ಚುನಾವಣಾ ಆಯೋಗ ಕಣ್ಮುಚ್ಚಿ ಕುಳಿತಿದೆ’ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.

‘ಲಾರಿಯಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 84 ಬಾಕ್ಸ್ ಮದ್ಯವನ್ನು ಅಗ್ರಹಾರ ಗೇಟ್ ಬಳಿ ಪಕ್ಷದ ಕಾರ್ಯಕರ್ತರು ವಶಪಡಿಸಿಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಮದ್ಯ ಸಾಗಣೆ ಲಾರಿಗೆ ಬೆಂಗಾವಲಾಗಿ ಕಾರಿನಲ್ಲಿ ಬರುತ್ತಿದ್ದ ಕಾಂಗ್ರೆಸ್ ಮುಖಂಡರಾದ ಪ್ರಕಾಶ್, ಹೊನ್ನಿಕೊಪ್ಪಲು ಮಂಜುನಾಥ್‌ ಎಂಬುವರನ್ನು ಅಬಕಾರಿ ಇಲಾಖೆಗೆ ಒಪ್ಪಿಸಿದರೂ ಅಧಿಕಾರಿಗಳು ಒತ್ತಡಕ್ಕೆ ಮಣಿದು ಬಿಟ್ಟು ಕಳಿಸಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

‘ರಾತ್ರಿ ಮದ್ಯ ಸಾಗಾಣೆ ತಡೆಗೆ ಸಹಕರಿಸಿದ ಕೋಡಿಹಳ್ಳಿ ಗ್ರಾಮದ ಅನಂತ್‌ ಮೇಲೆ ಚನ್ನರಾಯಪಟ್ಟಣದ ‘ಎ ಟು ಬಿ’ ಹೋಟೆಲ್‌ ನಲ್ಲಿ ಚಾಕೇನಹಳ್ಳಿ ಪ್ರಕಾಶ್, ಹೊನ್ನಿಕೊಪ್ಪಲು ಮಂಜ, ಜಲೇಂದ್ರ, ಸುದರ್ಶನ್‌ ಬಾಬು ಸುಮಾರು 30 ಜನರ ಗುಂಪು ಕಟ್ಟಿಕೊಂಡು ಬಂದು ಅನಂತ್‌ಮೇಲೆ ಹಲ್ಲೆ ನಡೆಸಿರುವುದು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ’ ಎಂದು ಹೇಳಿದರು.

‘ಜಿಲ್ಲೆಯಲ್ಲಿ ಅಬಕಾರಿ ಇಲಾಖೆ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಅಕ್ರಮವಾಗಿ ಸಾಗಿಸುವ ಮದ್ಯವನ್ನು ಕಾರ್ಯಕರ್ತರೇ ಹಿಡಿಯುವ ಪರಿಸ್ಥಿತಿ ಬಂದಿದೆ. ಹಿಂದಿನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಇದ್ದಿದ್ದರೇ ಇದಕ್ಕೆ ಆಸ್ಪದ ನೀಡುತ್ತಿರಲಿಲ್ಲ. ಪ್ರಾಮಾಣಿಕ ಅಧಿಕಾರಿ ಕಾಂಗ್ರೆಸ್‌ಗೆ ಬೇಕಾಗಿಲ್ಲ.’ ಎಂದು ಕಿಡಿ ಕಾರಿದರು.

‘ಚನ್ನರಾಯಪಟ್ಟಣದ ಪ್ರಕೃತಿ ಬಾರ್‌ನಲ್ಲಿ 2400 ಬಾಕ್ಸ್, ಚಾಕೇನಹಳ್ಳಿ ಬಳಿ 10 ಬಾಕ್ಸ್, ಅಗ್ರಹಾರ ಗೇಟ್ ಬಳಿ 84 ಬಾಕ್ಸ್ ಮದ್ಯವನ್ನು ಅಬಕಾರಿ ಇಲಾಖೆ ವಶಕ್ಕೆ ಒಪ್ಪಿಸಲಾಗಿದೆ. ಮದ್ಯದ ಬಾಟಲ್ ಮೇಲೆ ಯಾವ ಬಾರ್ ನಿಂದ ಸರಬರಾಜು ಆಗಿದೆ ಎಂಬ ಮಾಹಿತಿ ಇರುತ್ತದೆ. ತನಿಖೆ ನಡೆಸಿ ಸಂಬಂಧಪಟ್ಟ ಬಾರ್‌ ಪರವಾನಗಿ ರದ್ದು ಮಾಡಬೇಕು’ ಎಂದು ಒತ್ತಾಯಿಸಿದರು.

‘ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ನಿಂದ ಕ್ಷೇತ್ರದಲ್ಲಿ ಕಣಕ್ಕಿಳಿಸಲು ಯಾವ ಅಭ್ಯರ್ಥಿಯೂ ಸಿಗಲಿಲ್ಲವೇ? ಇಂತಹ ಭ್ರಷ್ಟ ವ್ಯಕ್ತಿಯನ್ನು ತಂದು ನಿಲ್ಲಿಸಿದ್ದಾರೆ. ಇಂತಹವರ ಪರ ಪ್ರಚಾರ ಮಾಡಲು ರಾಹುಲ್ ಗಾಂಧಿಗೆ ನಾಚಿಕೆ ಆಗಬೇಕು. ಯಾವ ನೈತಿಕತೆ ಇಟ್ಟುಕೊಂಡು ಜೆಡಿಎಸ್ ಅನ್ನು ಬಿಜೆಪಿಯ ಬಿ’ಟೀಂ ಎನ್ನುತ್ತಾರೆ. ದೇವೇಗೌಡರು ರಾಹುಲ್ ಗಾಂಧಿಯಿಂದ ರಾಜಕೀಯ ಕಲಿಯಬೇಕಾಗಿಲ್ಲ’ ಎಂದು ಹರಿಹಾಯ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.