ADVERTISEMENT

ನೀರು; ಜೆಡಿಎಸ್‌– ಕಾಂಗ್ರೆಸ್‌ ಭಿನ್ನ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಸೆಪ್ಟೆಂಬರ್ 2016, 9:02 IST
Last Updated 28 ಸೆಪ್ಟೆಂಬರ್ 2016, 9:02 IST

ಕೊಣನೂರು: ತಮಿಳುನಾಡಿಗೆ ಕಾವೇರಿ ನದಿ ನೀರು ಹರಿಸುವ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್ ಭಿನ್ನ ಹೇಳಿಕೆ  ನೀಡುತ್ತಿದ್ದು, ಒಳಒಪ್ಪಂದ ಆದಂತೆ ಕಾಣುತ್ತಿದೆ. ಬಿಜೆಪಿ ತಮಿಳುನಾಡಿಗೆ ಒಂದು ಹನಿ ನೀರು ಬಿಡಬೇಡಿ ಎಂದೇ ಹೇಳುತ್ತಿದ್ದು, ಆ ಮಾತಿಗೆ ಬದ್ಧವಾಗಿದೆ  ಎಂದು ಸಂಸದ ಹಾಗೂ ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಪ್ರತಾಪಸಿಂಹ ಹೇಳಿದರು.

ರಾಮನಾಥಪುರದಲ್ಲಿ ಭಾಗ್ಯಶ್ರೀ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬಿಜೆಪಿ ಜಿಲ್ಲಾ ಯುವ ಮೋರ್ಚಾ ಏರ್ಪಡಿಸಿದ್ದ ಯುವ ಸಮಾವೇಶ ಹಾಗೂ ಜಿಲ್ಲಾ ಕಾರ್ಯಕಾರಿಣಿ ಸಭೆ ಉದ್ಘಾಟಿಸಿದ ಅವರು, ‘ತಮಿಳುನಾಡಿಗೆ ನೀರು ಹರಿಸುವ ಕುರಿತು ಕಾಂಗ್ರೆಸ್ ಮತ್ತು ಜೆಡಿಎಸ್‌ನ ಆರಂಭದ ನಿಲುವು ಖಂಡನಾರ್ಹ. ಕಾಂಗ್ರೆಸ್ ಸರ್ಕಾರ ಜನರ ಹಿತ ಕಾಪಾಡುವಲ್ಲಿ ವಿಫಲವಾಗಿದೆ ಎಂಬುದಕ್ಕೆ ನಿದರ್ಶನ’ ಎಂದರು.

ಪ್ರಧಾನಿ ನರೇಂದ್ರ ಮೋದಿ ದಿನಕ್ಕೆ 18 ಗಂಟೆ ಕೆಲಸ ಮಾಡುತ್ತಿದ್ದು, ವಿದೇಶ ಭೇಟಿಯ ಮೂಲಕ ಜಾಗತಿಕ ಮಟ್ಟದಲ್ಲಿಯೂ ದೇಶದ ಕೀರ್ತಿ ಹೆಚ್ಚಿಸಿದ್ದಾರೆ ಎಂದರು.
ರಾಜ್ಯ ಸರ್ಕಾರದ ವೈಫಲ್ಯ, ದ್ವಂದ್ವ ನಿಲುವು ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕು. ಈ ಮೂಲಕ ಬಿಜೆಪಿ ಬಲಪಡಿಸಬೇಕು. ಯಡಿಯೂರಪ್ಪ ಅವರನ್ನು ಸಿಎಂ ಮಾಡಲು ಈ ಜಿಲ್ಲೆಯಿಂದ ಕನಿಷ್ಠ ಪಕ್ಷದ ಆರು ಮಂದಿ ಆಯ್ಕೆಯಾಗಬೇಕು’ ಎಂದರು.

ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ,‘ಬಿಜೆಪಿ ಸಾಧನೆಯನ್ನು ಜನ ಸಾಮಾನ್ಯರಲ್ಲಿ ತಿಳಿ ಹೇಳಿ ಪಕ್ಷ ಕಟ್ಟುವ ಮಹತ್ತರ ಹೊಣೆ ಯುವಕರ ಮೇಲಿದೆ’ ಎಂದರು.
ಯಡಿಯೂರಪ್ಪ ನೇತ್ರತ್ವದ ಬಿಜೆಪಿಯನ್ನು ಮರಳಿ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಅವರಿಗೆ ಶಕ್ತಿ ತುಂಬುವ ಕೆಲಸ ನಮ್ಮೆಲ್ಲರದ್ದಾಗಬೇಕು. ಹಾಸನದಲ್ಲಿ ಕಾಂಗ್ರೆಸ್ ನೆಪ ಮಾತ್ರಕ್ಕೆ ಇದ್ದು ಬಿಜೆಪಿ ಗೆ ನಿಜವಾದ ಪ್ರತಿಸ್ಪರ್ಧಿ ಜೆಡಿಎಸ್ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯೋಗಾ ರಮೇಶ್,  ಹಾಲಿ ಸಚಿವರು ಅಭಿವೃದ್ಧಿಯನ್ನು ಮರೆತು ವರ್ತಿಸುತ್ತಿದ್ದಾರೆ. ಜಿಲ್ಲೆಗೆ ಕಾಂಗ್ರೆಸ್‌, ಜೆಡಿಎಸ್‌ ಪಕ್ಷಗಳ ಕೊಡುಗೆಯನ್ನು  ನಾವು ಪ್ರಶ್ನಿಸಬೇಕಾಗುತ್ತದೆ’ಎಂದರು.

ಜಿಲ್ಲಾ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ನಾಗೇಶ್, ಮೋರ್ಚಾದ  ತೇಜಸ್ವಿ ಸೂರ್ಯ ಮಾತನಾಡಿದರು. ಯುವ ಮೋರ್ಚಾ ರಾಜ್ಯ ಪ್ರಧಾನ ಕಾರ್ಯದರ್ಶಿ ತಮ್ಮೇಶ್ ಗೌಡ, ಪ್ರಧಾನ ಕಾರ್ಯದರ್ಶಿ ಬಸವರಾಜ್, ಕಾರ್ಯದರ್ಶಿ ಕರುಣಾಕರ್, ಜಿಲ್ಲಾ ನಿಕಟಪೂರ್ವ ಅಧ್ಯಕ್ಷ ಚನ್ನಕೇಶವ, ಜಿಲ್ಲಾ ಉಪಾಧ್ಯಕ್ಷ ಹೂವೇಂದ್ರ ಕುಮಾರ್, ವಿಶ್ವನಾಥ್, ಶಿವಕುಮಾರ್, ಕೋಶಾಧ್ಯಕ್ಷೆ ಸುಶೀಲಾ, ಭಿಮಾಸಾಗರ್ ಪಾಟೀಲ್, ಮಾಜಿ ಜಿ.ಪಂ ಸದಸ್ಯ ರಾಜೇಗೌಡ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.