ADVERTISEMENT

ಬೆಳೆಗಳಿಗೆ ವೈಜ್ಞಾನಿಕ ಬೆಲೆ ಅಗತ್ಯ: ಸತ್ಯನಾರಾಯಣ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2012, 8:30 IST
Last Updated 11 ಫೆಬ್ರುವರಿ 2012, 8:30 IST

ಅರಕಲಗೂಡು :  ಕೃಷಿ ಉತ್ಪನ್ನಗಳಿಗೆ ಸಹಾಯ ಧನ ನೀಡುವ ಬದಲು ಬೆಳೆಗಳಿಗೆ ವೈಜ್ಞಾನಿಕ ಬೆಲೆ ಹಾಗೂ ಮಾರುಕಟ್ಟೆ ಒದಗಿಸಿ ಕೊಡುವುದು ಅಗತ್ಯ ಎಂದು ಜಿಲ್ಲಾ ಪಂಚಾಯತಿ ಅಧ್ಯಕ್ಷ ಬಿ.ಆರ್. ಸತ್ಯನಾರಾಯಣ ತಿಳಿಸಿದರು.

ಪಟ್ಟಣದ ಜಿಲ್ಲಾ ಕೃಷಿ ತರಭೇತಿ ಕೇಂದ್ರದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ  ಕುರಿತ ಕಾರ್ಯಾಗಾರದಲ್ಲಿ ಪಾಲ್ಗೊಂಡು ಮಾತನಾಡಿದರು. ಕಂಪನಿಗಳೊಂದಿಗೆ ಶಾಮೀಲಾಗಿ ಹೆಚ್ಚಿನ ದರದ ಕೃಷಿ ಪರಿಕರಗಳನ್ನು ಕೊಳ್ಳಲು ಒಪ್ಪಂದ ಮಾಡಿಕೊಂಡು ಅವುಗಳಿಗೆ ಸಹಾಯ ಧನ ನೀಡುವ ಹೆಸರಿನಲ್ಲಿ ರೈತರನ್ನು ವಂಚಿಸಲಾಗುತ್ತಿದೆ.

ಇಂತಹ ವಂಚನೆಯ ರಾಜಕಾರಣವನ್ನು ಬದಿಗಿರಿಸಿ ಸರಿಯಾದ ಮಾರುಕಟ್ಟೆ, ವೈಜ್ಞಾನಿಕ ಬೆಲೆ ನೀಡಿದರೆ ಸಹಾಯ ಧನವನ್ನು ಸ್ವಾಭಿಮಾನಿ ರೈತರು ತಿರಸ್ಕ ರಿಸುತ್ತಾರೆ. ಅದೇ ರೀತಿ ಜಿಲ್ಲೆಯ ಪ್ರಮುಖ ಬೆಳೆಗಳಾದ ಆಲೂಗೆಡ್ಡೆ, ಟೊಮ್ಯಾಟೊ, ಹಸಿರು ಮೆಣಸಿನಕಾಯಿ ಬೆಳೆಗಳನ್ನು ಸಂಸ್ಕರಿಸಿ ಪರ್ಯಾಯ ಉತ್ಪನ್ನಗಳ ತಯಾರಿಕೆಗೆ ಕ್ರಮ ಕೈಗೊಂಡಾಗ ರೈತರು ನಷ್ಟ ಅನುಭವಿಸುವುದು ತಪ್ಪುತ್ತದೆ ಎಂದರು.

ಜಂಟಿ ಕೃಷಿ ನಿರ್ದೇಶಕ ಬಿ. ಶಿವರಾಜ್ ಮಾತನಾಡಿ, ದೇಶದಲ್ಲಿ 210 ದಶಲಕ್ಷ ಟನ್ ಆಹಾರ ಧಾನ್ಯ ಹಾಗೂ 150 ದಶಲಕ್ಷ ಟನ್ ಹಣ್ಣು ಮತ್ತು ತರಕಾರಿಗಳು ಉತ್ಪಾದನೆ ಯಾಗುತ್ತಿದ್ದರೂ ಇದರಲ್ಲಿ ಶೇ. 7ರಷ್ಟು ಮಾತ್ರ ಸಂಸ್ಕರಣೆಯಾಗುತ್ತಿದೆ. ವಿದೇಶದಲ್ಲಿ ಇದರ ಪ್ರಮಾಣ ಶೇ. 90 ರಷ್ಟಿದೆ ಎಂದರು.

ಜಿ.ಪಂ. ಸದಸ್ಯ ವಿ.ಎ.ನಂಜುಂಡ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿ ದರು. ಮಧ್ಯಾಹ್ನ ನಡೆದ ತಾಂತ್ರಿಕ ಅಧಿವೇಶನದಲ್ಲಿ ಕೃಷಿ ಉತ್ಪನ್ನಗಳ ಸಂಸ್ಕರಣೆ ಮತ್ತು ಮಾರುಕಟ್ಟೆ ಕುರಿತು ಹಾಸನ ಕೃಷಿ ಮಹಾವಿದ್ಯಾಲಯದ ಕೃಷಿ ತಜ್ಞ ಡಾ. ಎಂ.ಎ.ಶಂಕರ್,  ಹಾಸನದ ಲೀಡ್ ಬ್ಯಾಂಕ್ ವ್ಯವಸ್ಥಾಪಕ ಹೊಸಮಠ್,  ಮಂಡ್ಯದ ಸಹಾಯಕ ಕೃಷಿ ನಿರ್ದೇಶಕ ರವೀಂದ್ರ,  ಮಂಡ್ಯದ ವಿಕಸನ ಸಂಸ್ಥೆಯ ಮಹೇಶ್ ಚಂದ್ರಗುರು ಮಾಹಿತಿ ನೀಡಿದರು.

ಹಾಸನ ತಾಲ್ಲೂಕು ರಾಗಿ ಬೆಳೆ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಹೂವಿನಹಳ್ಳಿಯ ಮಂಜುಳ  (ಹೆಕ್ಟೇರ್‌ಗೆ 34.12.ಕ್ವಿ) ದ್ವಿತೀಯ ಬಹುಮಾನ ಪಡೆದ ನಿಟ್ಟೂರಿನ ಮಂಜಯ್ಯ (ಹೆಕ್ಟೇರ್‌ಗೆ 31.2 ಕ್ವಿ) ಮೂರನೆ ಬಹುಮಾನ ಪಡೆದ ಡಣಾಯಕನಹಳ್ಳಿಯ ಪುಟ್ಟಯ್ಯ (ಹೆಕ್ಟೇರ್‌ಗೆ 29.1ಕ್ವಿ) ಹಾಗೂ ಜಿಲ್ಲಾ ಮಟ್ಟದ ಸ್ಪರ್ಧೆಯಲ್ಲಿ ಎರಡನೆ ಬಹುಮಾನ ಪಡೆದ ಡಣಾಯಕನ ಹಳ್ಳಿಯ ರಾಜಯ್ಯ (ಹೆ 37.3 ಕ್ವಿ) ಅವರನ್ನು ಗೌರವಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.