ADVERTISEMENT

ಬೇಲೂರಿನ 40 ಕೆರೆಗೆ ಎತ್ತಿನಹೊಳೆ ನೀರು

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2017, 6:40 IST
Last Updated 4 ಅಕ್ಟೋಬರ್ 2017, 6:40 IST
ಎ.ಮಂಜು
ಎ.ಮಂಜು   

ಹಾಸನ: ಬೇಲೂರು ತಾಲ್ಲೂಕಿನ 4೦ ಕೆರೆಗಳಿಗೆ ಎತ್ತಿನಹೊಳೆ ಯೋಜನೆ ಯಿಂದ ನೀರು ಹರಿಸಲಾಗುವುದು ಎಂದು ಪಶುಸಂಗೋಪನೆ ಸಚಿವ ಎ.ಮಂಜು ತಿಳಿಸಿದರು. ಹಳೇಬೀಡು ಹೋಬಳಿಯ ಮಾದಿಹಳ್ಳಿ ಮತ್ತು ಜಾವಗಲ್ ಭಾಗಕ್ಕೆ ಕುಡಿಯುವ ನೀರು ಪೂರೈಸಲು ಅಧಿಕಾರಿಗಳ ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಗಿದೆ.

ಮಾದಿಹಳ್ಳಿಯ 3, ಹಳೇಬೀಡಿನ 21 ಹಾಗೂ ಜಾವಗಲ್‌ನ 16 ಕೆರೆಗೆ ನೀರು ತುಂಬಿಸಲು ಎತ್ತಿನ ಹೊಳೆ ಯೋಜನೆ ವ್ಯಾಪ್ತಿಗೆ ಸೇರಿಸಿ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಅ.4ರಂದು ಮುಖ್ಯಮಂತ್ರಿ ಅಧ್ಯಕ್ಷತೆಯಲ್ಲಿ ನಡೆಯುವ ನೀರಾವರಿ ಸಲಹಾ ಸಮಿತಿಯಲ್ಲಿ ಒಪ್ಪಿಗೆ ಪಡೆಯಲಾಗುವುದು. ಆದ್ದರಿಂದ
ಶಾಶ್ವತ ಕುಡಿಯುವ ನೀರಿಗೆ ಆಗ್ರಹಿಸಿ ಮಠಾಧೀಶರು ನಡೆಸಲು ಉದ್ದೇಶಿಸಿರುವ ಪ್ರತಿಭಟನೆಯನ್ನು ವಾಪಸ್‌ ಪಡೆಯಬೇಕು ಎಂದು ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮನವಿ ಮಾಡಿದರು.

₹12,912 ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಯಲ್ಲಿ 24 ಟಿಎಂಸಿ ನೀರು ಲಭ್ಯವಿದ್ದು, ಕುಡಿಯುವ ನೀರಿಗಾಗಿ 42 ತಾಲ್ಲೂಕಿನ ಕೆರೆ ತುಂಬಿಸುವ ಉದ್ದೇಶ ಇದೆ. ಚಿಕ್ಕಬಳ್ಳಾಪುರ–196, ಕೋಲಾರ 138, ತಮಕೂರು–113, ಬೆಂಗಳೂರು ಗ್ರಾಮಾಂತರ–46, ಅರಸೀಕೆರೆ–34 ಕೆರೆಗಳಿಗೆ ನೀರು ತುಂಬಿಸಲಾಗುವುದು. ನೀರಿನ ಸಮಸ್ಯೆ ಬಗೆಹರಿಸಲು ಹೊಸದಾಗಿ ಬೇಲೂರು ತಾಲ್ಲೂಕಿನ 40 ಕೆರೆಗಳನ್ನು ಸೇರಿಸಲಾಗಿದೆ. ಜನವರಿ ಅಂತ್ಯಕ್ಕೆ ಎತ್ತಿನಹೊಳೆ ಯೋಜನೆಯಿಂದ ನೀರು ಮೇಲೆತ್ತುವ ಕಾರ್ಯ ಆರಂಭಗೊಳ್ಳಲಿದೆ ಎಂದು ಹೇಳಿದರು.

ADVERTISEMENT

ಬೇಲೂರಿನಲ್ಲಿ ಯಗಚಿ ಜಲಾಶಯ ಕಟ್ಟಿದ ಮಹಾನುಭಾವರು ಆ ತಾಲ್ಲೂಕಿಗೆ ನೀರು ಕಲ್ಪಿಸಲು ಮುಂದಾಗಲಿಲ್ಲ ಏಕೆ ಎಂದು ಪ್ರಶ್ನಿಸಿದರು. ಯಗಚಿ ನೀರು ಹೊಳೆನರಸೀಪುರಕ್ಕೆ ಹೋಗುತ್ತಿದೆ. ಅಲ್ಲದೇ ಮಠಾಧೀಶರು ನಡೆಸುವ ಪ್ರತಿಭಟನೆಗೆ ಬೆಂಬಲ ನೀಡುವುದಾಗಿ ಶಾಸಕ ಎಚ್‌.ಡಿ.ರೇವಣ್ಣ ಹೇಳಿಕೆ ನೀಡಿ ರಾಜಕೀಯ ಮಾಡುತ್ತಿದ್ದಾರೆ ಎಂದು ಜೆಡಿಎಸ್‌ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಚನ್ನಪಟ್ಟಣ ಕೆರೆ ಮುಚ್ಚಿ ಬಸ್‌ ನಿಲ್ದಾಣ ಮಾಡಿದರು. ಇಂದು ನಗರದಲ್ಲಿ 700 ಅಡಿ ಆಳ ಕೊರೆದರೂ ನೀರು ಸಿಗುತ್ತಿಲ್ಲ. ಇದಕ್ಕೆಲ್ಲಾ ಕಾರಣ ಯಾರು ಎಂದು ಜೆಡಿಎಸ್‌ ನಾಯಕರನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು. ರಾಜ್ಯದಲ್ಲಿ 550 ವೈದ್ಯರನ್ನು ಮೆರಿಟ್‌ ಆಧಾರದ ಮೇಲೆ ನೇರ ನೇಮಕಾತಿ ಮಾಡಿಕೊಳ್ಳಲಾಗಿದೆ. 371 ಜೆ ಅನ್ವಯ 114 ವೈದ್ಯರ ನೇಮಕಾತಿ ಪ್ರಕ್ರಿಯೆಯೂ ಆಗಲಿದೆ. ಕನ್ನಡ ಪರೀಕ್ಷೆಯನ್ನು ಕೆಲವರು ಪಾಸ್‌ ಮಾಡಿರಲಿಲ್ಲ. ಹಾಗಾಗಿ ವಿಳಂಬವಾಯಿತು. ವೈದ್ಯರ ನೇಮಕಾತಿಯಿಂದ ರಾಜ್ಯದ ಎಲ್ಲಾ ಆಸ್ಪತ್ರೆಗಳಲೂ ಪಶು ವೈದ್ಯರು ಲಭ್ಯ ಇರುತ್ತಾರೆ ಎಂದು ನುಡಿದರು.

ಅ.9ರಂದು ಹಾಸನದ ಕೋರವಂಗಲ, ಗುಂಡ್ಲುಪೇಟೆ ಹಾಗೂ ಯಾದಗಿರಿಯಲ್ಲಿ ಡಿಪ್ಲೊಮಾ ಕಾಲೇಜು ಆರಂಭಿಸಲಾಗುತ್ತಿದೆ. ಮೆರಿಟ್‌ ಆಧಾರದ ಮೇಲೆ ಸೀಟು ದೊರೆಯಲಿದೆ. ಕೋರವಂಗಲದಲ್ಲಿ ಮೀಟ್‌ ಟೆಕ್ನಾಲಜಿ ಕೋರ್ಸ್‌ ಅನ್ನು ಸಾರಿಗೆ ಸಚಿವ ಎಚ್‌.ಎಂ.ರೇವಣ್ಣ ಉದ್ಘಾಟಿಸುವರು ಎಂದರು.

ಹೊಸ ಬಸ್ ನಿಲ್ದಾಣ ಬಳಿ ರೈಲ್ವೆ ಮೇಲ್ಸೆತುವೆ ಕಾಮಗಾರಿ ಅಂದಾಜು ವೆಚ್ಚ ₹ 45.45 ಕೋಟಿ ಆಗಿದ್ದು, ಇದರಲ್ಲಿ ಅರ್ಧ ಹಣವನ್ನು ರಾಜ್ಯ ಭರಿಸಲಿದೆ. ಮುಂದಿನ ಸಚಿವ ಸಂಪುಟದಲ್ಲಿ ಮಂಡಿಸಿ ಅನುಮತಿ ಪಡೆದುಕೊಳ್ಳಲಾಗುವುದು ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.