ADVERTISEMENT

ಭತ್ತದ ಆಸಕ್ತಿ ಕ್ಷೀಣ: ಮುಸುಕಿನ ಜೋಳದತ್ತ ರೈತರ ಚಿತ್ತ

​ಪ್ರಜಾವಾಣಿ ವಾರ್ತೆ
Published 15 ಜೂನ್ 2013, 6:06 IST
Last Updated 15 ಜೂನ್ 2013, 6:06 IST

ಹೊಳೆನರಸೀಪುರ: ತಾಲ್ಲೂಕಿನಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ಮೇ ಅಂತ್ಯದವರೆಗೆ 250 ಮಿಮೀ ಮಳೆ ಆಗಿದೆ ಎಂದು ತಾಲ್ಲೂಕು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಭಾನುಪ್ರಕಾಶ್ ತಿಳಿಸಿದ್ದಾರೆ.

ಕೆಲವು ಭಾಗಗಗಳಲ್ಲಿ ಭತ್ತದ ನಾಟಿಗೆ ಸಸಿಮಡಿ ತಯಾರಿಕೆ ಕಾರ್ಯ, ಮುಸುಕಿನಜೋಳದ ಬೆಳೆಗೆ ಬಿತ್ತನೆ ಮತ್ತು ಅಂತರ ಬೇಸಾಯ ಕಾರ್ಯ ಪ್ರಾರಂಭವಾಗಿದೆ. ಕಬ್ಬಿನ ನಾಟಿ ಮತ್ತು ಅಂತರ ಬೇಸಾಯ ಕಾರ್ಯ, ಹಾಗೂ ತಂಬಾಕು ಬೆಳೆಯಲ್ಲೂ ಅಂತರ ಬೇಸಾಯ ಮತ್ತು ಮೇಲು ಗೊಬ್ಬರ ಹಾಕುವ ಕಾರ್ಯ ಚುರುಕುಗೊಂಡಿದೆ.

ಇದುವರೆಗೂ ತಾಲ್ಲೂಕಿನಲ್ಲಿ 2190 ಹೆಕ್ಟೆರ್‌ನಲ್ಲಿ ದ್ವಿದಳಧಾನ್ಯಗಳು, 1350 ಹೆಕ್ಟರ್‌ನಲ್ಲಿ ಮುಸುಕಿನ ಜೋಳ, 2250 ಹೆಕ್ಟೇರ್‌ನಲ್ಲಿ ತಂಬಾಕು 250 ಹೆಕ್ಟೇರ್‌ನಲ್ಲಿ ಕಬ್ಬು ಹಾಗೂ ಇತರೆ ಬೆಳೆಗಳ ಬಿತ್ತನೆ ಹಾಗೂ ನಾಟಿ ಕಾರ್ಯ ಪೂರ್ಣಗೊಂಡಿದೆ. ಈ ಹಂಗಾಮಿನಲ್ಲಿ ರಾಗಿ ಮತ್ತು ನೀರಾವರಿ ಭತ್ತಕ್ಕಿಂತ ಹೆಚ್ಚು ಜನರು ಮುಸುಕಿನ ಜೋಳ ಬೆಳೆಯಲು ಆಸಕ್ತರಾಗಿದ್ದಾರೆ.

ರೈತರು ಯಾವುದೇ ಬೆಳೆಯ ಬಿತ್ತನೆ ಹಾಗೂ ನಾಟಿಗೆ ಮುಂಚಿತವಾಗಿ ಪ್ರತಿ ಎಕರೆಗೆ 100 ಕೆಜಿ ಜಿಪ್ಸಂ, 5ಕೆಜಿ ಜಿಂಕ್‌ಸಲ್ಫೇಟ್  ಮತ್ತು 2ಕೆಜಿ ಬೋರಾಕ್ಸ್ ಲಘು ಪೊಷಕಾಂಶ ಗೊಬ್ಬರಗಳನ್ನು ಉಪಯೋಗಿಸ ಬೇಕು. ಹಾಗೂ ಅವುಗಳನ್ನು ಕೃಷಿ ಇಲಾಖೆಯ ರೈತ ಸಂಪರ್ಕ ಕೇಂದ್ರಗಳಲ್ಲಿ ಸಬ್ಸಿಡಿ ದರದಲ್ಲಿ ನೀಡಲಾಗುತ್ತಿದೆ.

ಕಬ್ಬಿನ ಬೆಳೆಯಲ್ಲಿ ಬಿಳಿಉಣ್ಣೆ ಬಾದೆ ಇದ್ದ್ಲುಕೋರ‌್ಲೊಪೈರಿಫಾಸ್ 2 ಮಿ.ಲೀ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಅಲಸಂದೆ ಬೆಳೆಯಲ್ಲಿ ಹೇನು ಬಾಧೆ ಹೆಚ್ಚಾಗಿದ್ದು ಹತೋಟಿಗೆ 1.5 ಮಿ.ಲೀ ರೋಗಾರ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ತಂಬಾಕು ಬೆಳೆಯಲ್ಲಿ ಹೆಚ್ಚಾಗಿರುವ ಹೇನು ಬಾದೆಗೆ 2 ಗ್ರಾಂ ಅಸಿಫೇಟ್ ಮತ್ತು ಬೇರು ಗಂಟು ಕೊಳೆ ರೋಗಕ್ಕೆ 2 ಗ್ರಾಂ ರಿಡೊಮಿಲ್ ಅನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಹೋಬಳಿಯ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಮತ್ತು ಮುಸುಕಿನ ಜೋಳದ ಬೆಳೆಯ ವಿವಿಧ ಖಾಸಗಿ ಹೈಬ್ರಿಡ್ ಬಿತ್ತನೆ ಬೀಜಗಳು ಹಾಗೂ ಬಲರಾಂ ನೇಗಿಲು ಮತ್ತು ಇತರೆ ಪರಿಕರಗಳು ಲಭ್ಯವಿದ್ದು ರೈತರು ಅವುಗಳನ್ನು ಸಹಾಯಧನದಲ್ಲಿ ಖರೀದಿಸಬಹುದು ಎಂದು ತಿಳಿಸಿದ್ದಾರೆ.

ರೈತರು ಬೆಳೆಗಳಿಗೆ ಯೂರಿಯಾ ಗೊಬ್ಬರ ಬಳಕೆಯನ್ನು ಕಡಿಮೆಗೊಳಿಸಿ ಸಾವಯವ ಗೊಬ್ಬರ ಹಾಗೂ ರಂಜಕ ಮತ್ತು ಪೊಟ್ಯಾಷ್‌ಯುಕ್ತ ಗೊಬ್ಬರಗಳನ್ನು ಸಮವಾಗಿ ಬಳಸಬೇಕು ಎಂದಿದ್ದಾರೆ.

ಈಗಾಗಲೇ ಬಿತ್ತನೆ ಕಾರ್ಯ ನಡೆಯುತ್ತಿರುವುದರಿಂದ ಖಾಸಗಿ ಅಂಗಡಿಗಳಲ್ಲಿ ಮತ್ತು ಸಹಕಾರ ಸಂಘಗಳಲ್ಲಿ ರೈತರು ರಸಗೊಬ್ಬರ ಖರಿದಿಸುತ್ತಿದ್ದು ಕಡ್ಡಾಯವಾಗಿ                  ರಸೀದಿ ಪಡೆಯಲು ಸೂಚಿಸಿದ್ದಾರೆ. ನಿಗದಿತ ದರಕ್ಕಿಂತ (ಎಂ.ಆರ್.ಪಿ) ಹೆಚ್ಚಿನ ದರಕ್ಕೆ ರಸಗೊಬ್ಬರ ಮಾರಾಟ ಮಾಡಿದಲ್ಲಿ ಕೃಷಿ ಇಲಾಖೆಗೆ ದೂರು ನೀಡಲು ತಿಳಿಸಿದ್ದಾರೆ.

ತಾಲ್ಲೂಕಿನಲ್ಲಿ ರಸಗೊಬ್ಬರ ಮಾರಾಟ ಮಾಡುವ ಎಲ್ಲಾ ಸಹಕಾರ ಸಂಘಗಳು ಹಾಗೂ ಖಾಸಗಿ ಮಾರಾಟಗಾರರು ಕಡ್ಡಾಯವಾಗಿ ರಸಗೊಬ್ಬರ ಖರೀದಿ ಮಾಡುವ ರೈತರಿಗೆ ರಸೀದಿ ನೀಡಬೇಕು. ರಸಗೊಬ್ಬರಗಳ ಬೆಲೆಗಳನ್ನು ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸಬೇಕು ಹಾಗೂ ಪ್ರತೀ ದಿನ ಮಾರಾಟದ ವಿವರಗಳನ್ನು ತಪ್ಪದೇ ಕೃಷಿ ಇಲಾಖೆಗೆ ನೀಡಬೇಕು ಎಂದು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.