ADVERTISEMENT

ಮಂದಗತಿ ಕಾಮಗಾರಿ: ಜನಸಾಮಾನ್ಯರಿಗೆ ತೊಂದರೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2011, 5:55 IST
Last Updated 5 ನವೆಂಬರ್ 2011, 5:55 IST
ಮಂದಗತಿ ಕಾಮಗಾರಿ: ಜನಸಾಮಾನ್ಯರಿಗೆ ತೊಂದರೆ
ಮಂದಗತಿ ಕಾಮಗಾರಿ: ಜನಸಾಮಾನ್ಯರಿಗೆ ತೊಂದರೆ   

ಹಳೇಬೀಡು: ಅಭಿವೃದ್ಧಿ ಎಂಬುದು ಮಾತಿಗಷ್ಟೆ ಸೀಮಿತವಾಗಿದ್ದು, ಅಭಿವೃದ್ಧಿ ನೆಪದಲ್ಲಿ ಆಗುವ ಕೆಲಸಗಳಿಂದಲೇ ಜನ ಸಾಮಾನ್ಯರು ತೊಂದರೆ ಅನುಭವಿಸು ವಂತಾಗಿದೆ ಎಂಬುದಕ್ಕೆ ಹಳೇಬೀಡಿನ ಬೇಲೂರು-ಬಾಣಾವರ ರಸ್ತೆ ಹಾಗೂ ಹೊಯ್ಸಳ ದೇವಾಲಯ ರಸ್ತೆಯಲ್ಲಿ ನಡೆಯುತ್ತಿರುವ ಎರಡು ಬೃಹತ್ ಕಾಮಗಾರಿಗಳು ಸಾಕ್ಷಿಯಾಗಿವೆ.

ಹೊಯ್ಸಳ ದೇವಾಲಯ ರಸ್ತೆಯಲ್ಲಿ ಕರಿಯಮ್ಮ ಮಹಾದ್ವಾರದಿಂದ ಪುಷ್ಪಗಿರಿಯವರೆಗೆ ರೂ.4.5 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ಬೇಕಾಬಿಟ್ಟಿಯಾಗಿ ಸಾಗುತ್ತಿದೆ. ರಸ್ತೆಯ ಎರಡೂ ಬದಿಯಲ್ಲಿ ಜಲ್ಲಿ ಹಾಕಿ ಹಲವು ತಿಂಗಳು ಕಳೆದರೂ ಡಾಂಬರೀಕರಣ ನಡೆದಿಲ್ಲ. ರಸ್ತೆ ಬದಿಯಲ್ಲಿ ಓಡಾಡುವ ಪಾದಚಾರಿಗಳು ಸರ್ಕಸ್ ಮಾಡಿಕೊಂಡು ಓಡಾಡುವಂತಾಗಿದೆ. ಈ ರಸ್ತೆ ಗುಂಡಿಗಳಿಂದ ಕೂಡಿರು ವುದಲ್ಲದೆ, ರಸ್ತೆಯ ಎರಡೂ ಬದಿಯಲ್ಲಿ ಸರಕು ಸಾಗಾಣಿಕೆಯ ಆಟೋರಿಕ್ಷಾಗಳು ನಿಲ್ಲುತ್ತವೆ. ಆಗಾಗ್ಗೆ ಲಾರಿಗಳು ಸಹ ನಿಂತಿರುತ್ತವೆ ವಾಹನ ದಟ್ಟಣೆ ಹೆಚ್ಚಾದಾಗ ರಸ್ತೆ ಬದಿಗೆ ಕೆಲವು ವಾಹ ಗಳನ್ನು ಇಳಿಸಲು ಅವಕಾಶವೇ ಇಲ್ಲದಂತಾಗಿದೆ. ಕರಿಯಮ್ಮ ಮಹಾದ್ವಾರ ವೃತ್ತದಿಂದ ಬಸ್ ನಿಲ್ದಾಣದವರೆಗೂ ಅಲ್ಲಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಆಗುವುದು ಮಾಮೂಲಿಯಾಗಿದೆ. ಗುರುವಾರ ಸಂಜೆ ಶಾಲೆ ಬಿಟ್ಟ ಸಮಯದಲ್ಲಿ ಕರಿಯಮ್ಮ ಮಹಾದ್ವಾರ ವೃತ್ತದಲ್ಲಿ ಟ್ರಾಫಿಕ್ ಜಾಮ್ ಆಗಿತ್ತು. ಸರ್ಕಲ್ ದಾಟುತ್ತಿದ್ದ ಶಾಲೆಯ ಮಕ್ಕಳು ವಾಹನ ದಟ್ಟಣೆಯ ಚಕ್ರವ್ಯೆಹದಲ್ಲಿ ಸಿಲುಕಿದಂತಾಗಿತ್ತು. ರಸ್ತೆ ದಾಟಲಾಗದೆ ಮಕ್ಕಳು ಭಯದಿಂದ ಜೀವ ಬಿಗಿ ಹಿಡಿದು ಚಡಪಡಿಸುತ್ತಿದ್ದ ದೃಶ್ಯ ಕಂಡುಬಂತು.

ಅರಸೀಕೆರೆ ತಾಲ್ಲೂಕಿಗೆ ಬೇಲೂರು ಯಗಚಿ ನದಿಯಿಂದ ಶುದ್ಧ ಕುಡಿಯುವ ನೀರು ಪೂರೈಕೆ ಮಾಡುವ ಪೈಪ್‌ಲೈನ್ ಬೇಲೂರು-ಬಾಣಾವರ ರಸ್ತೆಯಲ್ಲಿ ಕರಿಯಮ್ಮ ಮಹಾದ್ವಾರ ವೃತ್ತದ ಮಧ್ಯದಲ್ಲಿಯೇ ಹಾದು ಹೋಗಿದೆ. ಈ ರಸ್ತೆಯಲ್ಲಿ ರಾಷ್ಟ್ರೀಯ ಹ್ದ್ದೆದಾರಿ ನಿರ್ಮಾಣಕ್ಕಾಗಿ ಸಿದ್ಧತೆ ನಡೆಯುತ್ತಿದೆ. ಹೆದ್ದಾರಿ ಕೆಲಸ ಆರಂಭವಾಗುವ ಮೊದಲೆ ರಸ್ತೆ ಮಧ್ಯದಲ್ಲಿಯೇ ಪೈಪ್‌ಲೈನ್ ಮಾಡಲಾಗಿದೆ. ಕಾಮಗಾರಿ ನಿರ್ವಹಿಸಿದ ಸಂದರ್ಭದಲ್ಲಿ ಮಳೆ ಬಿದ್ದಿದ್ದರಿಂದ ರಸ್ತೆಯಲ್ಲಿ ವಾಹನಗಳು ಹೂತುಕೊಂಡು ಚಾಲಕರು ಹಾಗೂ ಪ್ರಯಾಣಿಕರು ಪಡಬಾರದ ಕಷ್ಟ ಅನುಭವಿಸಿದರು. ನಂತರ ಕಾಮಗಾರಿ ನಿರ್ವಹಿಸುವವರು ರಸ್ತೆ ಭರ್ತಿ ಮಣ್ಣು ಹಾಕಿ ಕೈತೊಳೆದುಕೊಂಡರು. ಮಳೆ ಯಲ್ಲಿ ವಾಹನಗಳ ಚಕ್ರ ಹೂತುಕೊಂಡರೆ ಬಿಸಿಲು ಇದ್ದಾಗ ರಸ್ತೆ ದೂಳುಮಯವಾಗುತ್ತದೆ.

ಸರ್ಕಲ್ ಮಧ್ಯದಲ್ಲಿ ನಿರ್ಮಾಣ ವಾಗಿರುವ ಮಣ್ಣಿನ ದಿಬ್ಬದಲ್ಲಿ ವಾಹನ ಚಲಿಸಿದಾಗ ಒಂದು ಕಡೆಯಿಂದ ಮತ್ತೊಂದು ಕಡೆಗೆ ವಾಲುತ್ತವೆ. ಹಿಂದೆ ಮುಂದೆ ಬರುವ ವಾಹನಗಳು ಮುಂದೆ ಸಾಗಲು ಅವಕಾಶ ಇರುವುದಿಲ್ಲ. ಈ ಸಂದರ್ಭದಲ್ಲಿ ಟ್ರಾಫಿಕ್ ಜಾಮ್ ಆದರೆ ಬೇಲೂರು, ಬಾಣಾವರ, ಹೊಯ್ಸಳ ದೇವಾಲಯ ರಸ್ತೆಯಲ್ಲಿ ವಾಹನಗಳು ನಿಲ್ಲುತ್ತವೆ. ಸರ್ಕಲ್‌ನಲ್ಲಿ ಪ್ರಯಾಣಿಕರ ಆಟೋರಿಕ್ಷಾ ನಿಲುಗಡೆ  ಆಗುವುದ ರಿಂದಲೂ ಸಮಸ್ಯೆ ಹೆಚ್ಚಾಗುತ್ತಿದೆ.

ಬೇಲೂರು ಬಾಣಾವರ ರಸ್ತೆಯಲ್ಲಿ ಮಳೆ ಬಂದಾಗ ನೀರು ಸರಾಗವಾಗಿ ತಗ್ಗು ಪ್ರದೇಶಕ್ಕೆ ಹರಿಯುತ್ತಿತ್ತು. ರಾತ್ರೋರಾತ್ರಿ ಅಡ್ಡಾದಿಡ್ಡಿಯಾಗಿ ಪೈಪ್‌ಲೈನ್ ಕಾಮಗಾರಿ ನಿರ್ವಹಿಸಿದ ನಂತರ ರಸ್ತೆ ಬದಿಯಲ್ಲಿ ನೀರು ನಿಲ್ಲುತ್ತಿದೆ. ಕೊಚ್ಚೆ ನೀರು ದಾಟಿಕೊಂಡು ಅಂಗಡಿಗಳಿಗೆ ಹೋಗಲು ಜನರು ಹಿಂಜರಿಯುವುದರಿಂದ ವ್ಯಾಪಾರ ವಹಿವಾಟು ಸಹ ಹಿನ್ನಡೆಯಾಗುತ್ತಿದೆ.

ಜನ ಸಾಮಾನ್ಯರ ನೋವಿಗೆ ಸ್ಪಂದಿಸಬೇಕಾದ ರಾಜಕಾರಣಿಗಳು ಹಾಗೂ ಅಧಿಕಾರಿಗಳಿಗೆ ಜನಪರ ಕಾಳಜಿ ಇಲ್ಲ ಎಂಬುದು ಎರಡೂ ಕಾಮಗಾರಿಗಳಿಂದ ಎ್ದ್ದದು ಕಾಣುತ್ತಿದೆ. ಆಳುವವರು ಹಾಗೂ ಆಡಳಿತ ನಡೆಸುವವರು ಅಭಿವೃದ್ಧಿಯ ಹೆಸರಿನಲ್ಲಿ ಜನರ ಅಗತ್ಯಕ್ಕಿಂತ ಮುಖ್ಯವಾಗಿ ತಮ್ಮ ಸ್ವಾರ್ಥಕ್ಕಾಗಿ ಸರ್ಕಾರದ ಹಣವನ್ನು ನೀರಿನಂತೆ ವ್ಯಯ ಮಾಡುತ್ತಿದ್ದಾರೆ ಎಂಬ ಮಾತು ಸಾರ್ವಜನಿಕ ವಲಯದಿಂದ ಕೇಳಿಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.