ADVERTISEMENT

ಮರಿದ ತಡೆಗೋಡೆ; ಆತಂಕ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2011, 9:55 IST
Last Updated 8 ಫೆಬ್ರುವರಿ 2011, 9:55 IST

ಚನ್ನರಾಯಪಟ್ಟಣ: ತಾಲ್ಲೂಕಿನ ಶ್ರವಣಬೆಳಗೊಳ ಸಮೀಪ ಇರುವ ಸೇತುವೆಯ ತಡೆಗೋಡೆ ಮುರಿದಿರುವುದಿರಿಂದ ವಾಹನಗಳು ಸ್ವಲ್ಪ ಎಚ್ಚರ ತಪ್ಪಿದರೂ 30 ಅಡಿ ಆಳವಿರುವ ನಾಲೆಗೆ ಬೀಳುವ ಸಂಭವ ಇದೆ.

ಪಟ್ಟಣದಿಂದ ಶ್ರವಣಬೆಳಗೊಳಕ್ಕೆ ಸಾಗುವ ರಾಜ್ಯ ಹೆದ್ದಾರಿಯಲ್ಲಿ ಬಸದಿಹಳ್ಳಿ ಗೇಟ್ ಸಮೀಪ ಹೇಮಾವತಿ ನಾಲೆಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿದೆ. ಕಳೆದ ವರ್ಷ ಲಾರಿಯೊಂದು ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದ ಪರಿಣಾಮ ತಡೆ ಗೋಡೆ ಮುರಿದು ಬಿತ್ತು. ತಡೆ ಗೋಡೆ ಮುರಿದು ಬಿದ್ದ ಭಾಗದಲ್ಲಿ ಭಾರೀ ವಾಹನಗಳು ಉರುಳಿ ಬೀಳುವಷ್ಟು ಕಂದಕ ನಿರ್ಮಾಣವಾಗಿದೆ. ಅಂದಿನಿಂದ ಇಂದಿನವರೆಗೆ ಸೇತುವೆಯನ್ನು ದುರಸ್ತಿ ಮಾಡದೇ ಅಧಿಕಾರಿಗಳು ದಿವ್ಯ ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಗ್ರಾಮದ ಜನರು ದೂರಿದ್ದಾರೆ.

ಸೇತುವೆಯಿಂದ ನಾಲೆಗೆ 30 ಅಡಿಯಷ್ಟು ಆಳವಿದೆ. ನಾಲೆಗೆ ನೀರು ಹರಿಸಿದಾಗ ವಾಹನಗಳು ಉರುಳಿ ಬಿದ್ದರೆ ದೊಡ್ಡ ಪ್ರಮಾಣದಲ್ಲಿ ಅಪಾಯ ಸಂಭವಿಸುತ್ತದೆ. ನೀರು ಇಲ್ಲದಿದ್ದ ಸಂದರ್ಭದಲ್ಲಿಯೂ ತೊಂದರೆ ತಪ್ಪಿದ್ದಲ್ಲ. ಪ್ರವಾಸಿ ತಾಣವಾಗಿರುವ ಶ್ರವಣಬೆಳಗೊಳಕ್ಕೆ ಸಂಪರ್ಕ ಕಲ್ಪಿಸುವ ಈ ರಸ್ತೆಯಲ್ಲಿ ಪ್ರತಿದಿನ ಸಾವಿರಾರು ವಾಹನಗಳು ಸಂಚರಿಸುತ್ತವೆ. ಪ್ರವಾಸಿಗರಿರುವ ವಾಹನಗಳು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸುತ್ತವೆ. ಅಧಿಕಾರಿಗಳು ಶೀಘ್ರದಲ್ಲಿ ಸೇತುವೆಯ ತಡೆ ಗೋಡೆಯನ್ನು ದುರಸ್ತಿ ಮಾಡಿ ವಾಹನಗಳನ್ನು ಅಪಾಯದಿಂದ ಪಾರುಮಾಡಬೇಕಾದ ಹೊಣೆಗಾರಿಕೆ ಇದೆ ಎನ್ನುತ್ತಾರೆ ಜನತೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.