ADVERTISEMENT

ಮಳೆಗಾಗಿ ಬಾಲೆಯರಿಗೆ ವಿವಾಹ ಬಂಧನ!

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2011, 4:50 IST
Last Updated 7 ಅಕ್ಟೋಬರ್ 2011, 4:50 IST

ಚನ್ನರಾಯಪಟ್ಟಣ: ಮಳೆಗಾಗಿ ಇಬ್ಬರು ಬಾಲಕಿಯರನ್ನು ವಧು, ವರರಂತೆ ಸಿಂಗರಿಸಿ ವಿವಾಹ ಮಾಡುವುದರ ಮೂಲಕ  ಪ್ರಾರ್ಥಿಸಿದ  ಘಟನೆ ತಾಲ್ಲೂಕಿನ ಗಡಿಭಾಗದಲ್ಲಿರುವ ದಡಿಘಟ್ಟ ಗ್ರಾಮದಲ್ಲಿ ಮಂಗಳವಾರ ರಾತ್ರಿ ನಡೆಯಿತು.

ಊರಿನಲ್ಲಿ ಮಳೆ ಬಾರದಿದ್ದಾಗ ಈ ತರಹದ ಸಂಪ್ರದಾಯವನ್ನು ಹಿಂದಿನಿಂದಲೂ ಆಚರಿಸಿಕೊಂಡು ಬರಲಾಗುತ್ತಿದೆ. ಗ್ರಾಮದಲ್ಲಿ 9 ದಿನಗಳಿಂದ ಮಳೆಗಾಗಿ ಈ ರೀತಿ ವಿವಾಹ ಏರ್ಪಡಿಸಲಾಗಿದೆ. ಮಂಗಳವಾದ್ಯದೊಂದಿಗೆ ಗ್ರಾಮದಲ್ಲಿನ ಲಕ್ಷ್ಮೀ ದೇವರಿಗೆ ಪೂಜೆ ಸಲ್ಲಿಸಿ ಕಳಸದಲ್ಲಿ ನೀರನ್ನು ತಂದು ಊರ ಮುಂದಿನ ರಸ್ತೆಯನ್ನು ಸ್ವಚ್ಚಗೊಳಿಸಿ ರಂಗೋಲಿ ಹಾಕಲಾಗಿತ್ತು.

ಊರಿನ ವಿವಿಧ ಮನೆಗಳಿಂದ ಸಂಗ್ರಹಿಸಿದ ರಾಗಿ ಹಿಟ್ಟಿನಿಂದ ರೊಟ್ಟಿ ತಯಾರಿಸಿ ಪೂಜೆಗಿಡಲಾಯಿತು.  ಕಾವ್ಯ, ಹರ್ಷಿತ ಎಂಬ ಇಬ್ಬರು ಬಾಲಕಿಯರನ್ನು ವಧು, ವರರಂತೆ ಸಿಂಗರಿಸಿ ಕರೆತರಲಾಯಿತು. ಇಬ್ಬರು ಪರಸ್ಪರ ಹಾರ ಬದಲಾಯಿಸಿದರು. ಗ್ರಾಮಸ್ಥರು ಧಾರೆ ಮಾಡಿದರು. ಮಹಿಳೆಯರು ಸೋಬಾನೆ ಪದ ಹಾಡಿದರು.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಗ್ರಾಮಸ್ಥರು, ಮಳೆಗಾಗಿ ಈ ರೀತಿ ವಿವಾಹ ನಡೆಸುವುದು ಸಂಪ್ರದಾಯ. ಹಿಂದೆ  ಈ ರೀತಿ  ಮದುವೆ ಏರ್ಪಡಿಸಿದಾಗ ಮಳೆಯಾಗಿರುವ ಉದಾಹರಣೆ ಇವೆ. ಹಾಗಾಗಿ ಈ ಪರಂಪರೆ ಬೆಳೆದು ಬಂದಿದೆ ಎಂದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.