ADVERTISEMENT

ಮಹಿಳೆ ಕೊಂದ ನಾಲ್ವರಿಗೆ ಜೀವಾವಧಿ

ಚಿನ್ನಾಭರಣ ದೋಚಿ ಪರಾರಿ, ತಲಾ ₹ 25 ಸಾವಿರ ದಂಡ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2017, 8:22 IST
Last Updated 5 ಅಕ್ಟೋಬರ್ 2017, 8:22 IST

ಹಾಸನ: ಒಂಟಿ ಮಹಿಳೆ ಕೊಲೆ ಮಾಡಿ ಚಿನ್ನಾಭರಣ ದೋಚಿ ಪರಾರಿಯಾಗಿದ್ದ ನಾಲ್ವರು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ, ತಲಾ ₹ 25,000 ದಂಡ ವಿಧಿಸಿ 2 ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ ಶ್ಯಾಮ್ ಪ್ರಸಾದ್ ಬುಧವಾರ ಆದೇಶ ನೀಡಿದ್ದಾರೆ.

ಶ್ರವಣಬೆಳಗೊಳ ಹೋಬಳಿ ಬಿ.ಚೋಳೇನಹಳ್ಳಿ ನಿವಾಸಿಗಳಾದ ಮನು, ಮಂಜ, ಸುನಿಲ್‌ ಮತ್ತು ಬೆಂಗಳೂರಿನ ಮಂಜ ಶಿಕ್ಷಿತರು.

ಹಾಸನದ ಕೆಎಸ್‌ಎಫ್‌ಸಿಯಲ್ಲಿ ಉದ್ಯೋಗಿಯಾಗಿದ್ದ ಎ.ಆರ್‌.ರಂಗ ಅವರು ಪತ್ನಿ ತೇಜಸ್ವಿನಿ, ಇಬ್ಬರು ಮಕ್ಕಳಾದ ಮನೋಜ್‌, ಧನುಷ್‌ ಜತೆ ಚಿಕ್ಕಹೊನ್ನೇನಹಳ್ಳಿಯಲ್ಲಿ ವಾಸವಾಗಿದ್ದರು. 2013ರ ಸೆ. 30 ರಂದು ತೇಜಸ್ವಿನಿ ಅವರನ್ನು ಬರ್ಬರವಾಗಿ ಕೊಲೆ ಮಾಡಿ ಚಿನ್ನಾಭರಣಗಳನ್ನು ಕಳವು ಮಾಡಲಾಗಿತ್ತು. ಶಾಲೆಯಿಂದ ಮಧ್ಯಾಹ್ನ ಊಟಕ್ಕೆ ಬಂದ ಮಗ, ತಾಯಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿ ಭಯದಿಂದ ಕಿರುಚಿಕೊಂಡ. ಅಕ್ಕಪಕ್ಕದವರು ಬಂದು ನೋಡಿ, ಪೊಲೀಸರಿಗೆ ವಿಷಯ ತಿಳಿಸಿದರು.

ADVERTISEMENT

ಈ ಸಂಬಂಧ ಬಡಾವಣೆ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸರ್ಕಲ್ ಇನ್‌ಸ್ಟೆಕ್ಟರ್‌ ಸಂಜೀವೇಗೌಡ ನೇತೃತ್ವದಲ್ಲಿ ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿತ್ತು.

ಬೆಂಗಳೂರಿನಿಂದ ಇಂಡಿಕಾ ಕಾರಿನಲ್ಲಿ ನಾಲ್ವರು ಚಿಕ್ಕಹೊನ್ನೇನಹಳ್ಳಿಗೆ ಬಂದಿದ್ದರು. ಮನೆಯಿಂದ ಸ್ವಲ್ಪ ದೂರದಲ್ಲಿ ಕಾರು ನಿಲ್ಲಿಸಲಾಗಿತ್ತು. ಇವರಲ್ಲಿ ಮನು ತೇಜಸ್ವಿನಿಗೆ ಪರಿಚಿತನಾಗಿದ್ದ. ಮನು ನೋಡಿ ಆಕೆಯನ್ನು ಮನೆಯೊಳಗೆ ಕರೆದರು. ಕಾಫಿ ತರಲು ಅಡುಗೆ ಮನೆಗೆ ಹೋಗುತ್ತಿದ್ದಂತೆ ಉಳಿದ ಮೂವರು ಆಕೆಯನ್ನು ಹಿಂಬಾಲಿಸಿ ಬಾಯಿಗೆ ಬಟ್ಟೆ ತುರುಕಿ ಚಾಕುವಿನಿಂದ ಕೊಲೆ ಮಾಡಿ ಮೈ ಮೇಲೆ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.

ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಿಸಿದಾಗ ಹಣಕ್ಕಾಗಿ ಕೃತ್ಯವೆಸಗಲಾಗಿದೆ. ಕಳವು ಮಾಡಿದ್ದ ಚಿನ್ನಾಭರಣ ಮಾರಾಟ ಮಾಡಿ ಹಣ ಹಂಚಿಕೊಂಡಿರುವುದಾಗಿ ಒಪ್ಪಿಕೊಂಡರು. ಚಿನ್ನಾಭರಣ, ಕೃತ್ಯಕ್ಕೆ ಬಳಸಿದ ಕಾರು, ಚಾಕುವನ್ನು ಪೊಲೀಸರು ವಶಕ್ಕೆ ಪಡೆದು ನಾಲ್ವರ ವಿರುದ್ಧ ನ್ಯಾಯಾಲಯಕ್ಕೆ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ಆರೋಪ ಸಾಬೀತಾದ್ದರಿಂದ ನಾಲ್ವರಿಗೆ, ಐಪಿಸಿ ಕಲಂ 392 (ದರೋಡೆ) ಅಡಿ ತಲಾ ಏಳು ವರ್ಷ ಕಠಿಣ ಶಿಕ್ಷೆ, ತಲಾ ₹ 20, 000 ದಂಡ, ಕಲಂ  397 (ಮಾರಾಕಾಸ್ತ್ರಗಳಿಂದ ಹಲ್ಲೆ) ಅಡಿ ಅಪರಾಧಕ್ಕಾಗಿ ತಲಾ ಏಳು ವರ್ಷ ಶಿಕ್ಷೆ, ತಲಾ ₹ 20,000 ದಂಡ ಹಾಗೂ 201 (ಸಾಕ್ಷ್ಯ ನಾಶ) ಅಡಿ ಅಪರಾಧಕ್ಕೆ 4 ವರ್ಷ ಕಠಿಣ ಶಿಕ್ಷೆ, ತಲಾ ₹ 10,000 ದಂಡ ವಿಧಿಸಿದೆ.

ಸರ್ಕಾರದ ಪರವಾಗಿ ಅಭಿಯೋಜಕ ಜಯರಾಮ ಶೆಟ್ಟಿ ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.