ADVERTISEMENT

‘ಮಿಂಚಿನ ನೋಂದಣಿ’ಗೆ ಸಿಗದ ಯಶಸ್ಸು

ಜಿಲ್ಲೆಯ ವಿವಿಧೆಡೆ ಬಾಗಿಲು ತೆರೆಯದ ಮತಗಟ್ಟೆಗಳು; ಹಲವರ ನಿರಾಶೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2018, 9:15 IST
Last Updated 9 ಏಪ್ರಿಲ್ 2018, 9:15 IST

ಹಾಸನ: ಗುರುತಿನ ಚೀಟಿಯಲ್ಲಿನ ಲೋಪ ತಿದ್ದುಪಡಿ, ಸೇರ್ಪಡೆ ಹಾಗೂ ವರ್ಗಾವಣೆಗೆ ಸಂಬಂಧಪಟ್ಟ ಅರ್ಜಿ ಸ್ವೀಕರಿಸಿ ಸಮಸ್ಯೆಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಭಾನುವಾರ ಹಮ್ಮಿಕೊಂಡಿದ್ದ 'ಮಿಂಚಿನ ನೋಂದಣಿ' ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ವಿಯಾಗಲಿಲ್ಲ.

ಪ್ರತಿ ಮತಗಟ್ಟೆಗಳಲ್ಲಿ ಬೆಳಿಗ್ಗೆ 10 ರಿಂದ ಸಂಜೆ 5ರ ವರೆಗೆ ಬೂತ್‌ಮಟ್ಟದ ಅಧಿಕಾರಿಗಳು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಬೇಕಿತ್ತು. ಆದರೆ, ನಗರ ಸೇರಿದಂತೆ ಜಿಲ್ಲೆಯ ವಿವಿಧೆಡೆ ಮತಗಟ್ಟೆಗಳ ಬಾಗಿಲು ತೆರೆದಿರಲಿಲ್ಲ. ಗುರುತಿನ ಚೀಟಿ ತಿದ್ದುಪಡಿಗಾಗಿ ಬಂದ ನೂರಾರು ಜನರು ವಾಪಸ್‌ ಹೋದರು.

ನಗರದ ಕುವೆಂಪು ನಗರ, ಸಂತೆಪೇಟೆ, ಆಡುವಳ್ಳಿ, ಕೆ.ಆರ್.ಪುರಂ, ಹೇಮಾವತಿ ನಗರ ಸೇರಿದಂತೆ ಅನೇಕ ಮತಗಟ್ಟೆಗಳು ಬಾಗಿಲು ಮುಚ್ಚಿದ್ದವು. ಕೇಂದ್ರಗಳ ದ್ವಾರ ಬಾಗಿಲಿಗೆ ಅಂಟಿಸಿದ್ದ ‘ಮಿಂಚಿನ ನೋಂದಣಿ’ ಪೋಸ್ಟರ್ ಕಾಣಿಸುತ್ತಿತ್ತು.

ADVERTISEMENT

ಕುವೆಂಪು ನಗರದ ಮತಗಟ್ಟೆ ಸಂಖ್ಯೆ 150 ರಲ್ಲಿ ಕರ್ತವ್ಯ ನಿರ್ವಹಣೆಗಾಗಿ ಬಿಎಲ್‍ಒ ರಾಮಕೃಷ್ಣಯ್ಯ ಬಂದಿದ್ದರೂ ಸರ್ಕಾರಿ ವಿಮಾ ಇಲಾಖೆ ಕಚೇರಿ ಬಾಗಿಲು ತೆರೆದಿರಲಿಲ್ಲ.

‘ಬೆಳಗ್ಗೆ ನಗರಸಭೆ ಸಿಬ್ಬಂದಿ ಭಿತ್ತಿಪತ್ರ ಅಂಟಿಸಿ ಹೋಗಿದ್ದಾರೆ. ಕಚೇರಿ ಬಾಗಿಲು ತೆರೆದಿಲ್ಲ. ಸಾರ್ವಜನಿಕರು ಗುರುತಿನ ಚೀಟಿ ತಿದ್ದುಪಡಿಗಾಗಿ ಬರುತ್ತಿದ್ದು, ಬಿಸಿಲಿನಲ್ಲಿಯೇ ಕೆಲಸ ನಿರ್ವ ಹಿಸಬೇಕಾಗಿದೆ’ ಎಂದು ರಾಮಕೃಷ್ಣಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ಕುವೆಂಪು ನಗರದಲ್ಲಿರುವ ಅರವಿಂದ ಶಾಲೆಯಲ್ಲಿ ಮೂರು ಮತಗಟ್ಟೆಗಳಿದ್ದು, ಒಬ್ಬ ಅಧಿಕಾರಿ ಮಾತ್ರ ಹಾಜರಾಗಿದ್ದರು. ಸಂತೆಪೇಟೆ ಸರ್ಕಾರಿ ಶಾಲೆಗಳಲ್ಲಿ ಮತಗಟ್ಟೆಗಳಿಗೆ ಬಿಎಲ್ಒಗಳು ಗೈರು ಹಾಜರಾಗಿದ್ದರು.

‘ಮತಚೀಟಿಯಲ್ಲಿ ಆಗಿರುವ ದೋಷಗಳ ತಿದ್ದುಪಡಿಗೆ ಸಾರ್ವಜನಿಕರು ಪರದಾಡುವಂತಾಗಿದೆ. ಸಮಸ್ಯೆ ಪರಿಹಾರಕ್ಕಾಗಿ ಅಧಿಕಾರಿಯನ್ನು ಕೇಳಿದರೆ, ಆಡುವಳ್ಳಿ ಕೇಂದ್ರಕ್ಕೆ ಹೋಗುವಂತೆ ಹೇಳಿದರು. ಅಲ್ಲಿಂದ ಮತ್ತೆ ಇಲ್ಲಿಗೆ ಕಳುಹಿಸಿದರು’ ಎಂದು ಕುವೆಂಪು ನಗರ ನಿವಾಸಿ ಆಶಾ ಬೇಸರ ವ್ಯಕ್ತಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಗರಿಷ್ಠ ಮತದಾನ ನಡೆಯಬೇಕು ಎಂಬ ಉದ್ದೇಶದಿಂದ ಚುನಾವಣಾ ಆಯೋಗ ಕೈಗೊಂಡಿರುವ ಮಹತ್ವಾಕಾಂಕ್ಷಿ ಯೋಜನೆಗಳಲ್ಲಿ 'ಮಿಂಚಿನ ನೋಂದಣಿ'ಯೂ ಒಂದು.

ಇಂದು ಪ್ರತಿ ಮತಗಟ್ಟೆ ಕೇಂದ್ರಗಳಲ್ಲಿ ಬಿಎಲ್‍ಒಗಳು ಸಾರ್ವಜನಿಕರಿಂದ ಅರ್ಜಿ ಸ್ವೀಕರಿಸಿ ಅದನ್ನು ತಾಲ್ಲೂಕು ಕಚೇರಿಗೆ ತಲುಪಿಸಿ ಎರಡು ದಿನಗಳಲ್ಲಿ ಲೋಪ ಸರಿಪಡಿಸುವಿಕೆ, ವರ್ಗಾವಣೆ ಹಾಗೂ ಹೊಸ ಮತದಾರರ ಸೇರ್ಪಡೆಗೆ ಕ್ರಮ ಕೈಗೊಳ್ಳು ಕಾರ್ಯಕ್ರಮ ಇದಾಗಿದೆ. ಬಿಎಲ್‍ಒಗಳು ಕರ್ತವ್ಯಕ್ಕೆ ಹಾಜರಾಗದ ಪರಿಣಾಮ ಅಭಿಯಾನಕ್ಕೆ ನಿರೀಕ್ಷಿತ ಯಶಸ್ಸು ಸಿಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.