ADVERTISEMENT

ಯಗಚಿ ಯೋಜನೆಗೆ ಅಸ್ತು: ರೈತ ಖುಷ್

​ಪ್ರಜಾವಾಣಿ ವಾರ್ತೆ
Published 26 ಜೂನ್ 2011, 11:00 IST
Last Updated 26 ಜೂನ್ 2011, 11:00 IST
ಯಗಚಿ ಯೋಜನೆಗೆ ಅಸ್ತು: ರೈತ ಖುಷ್
ಯಗಚಿ ಯೋಜನೆಗೆ ಅಸ್ತು: ರೈತ ಖುಷ್   

ಬೇಲೂರು: ಈ ತಾಲ್ಲೂಕಿನ ಹಳೇಬೀಡು ಮತ್ತು ಮಾದಿಹಳ್ಳಿ ಹೋಬಳಿಗಳು ಬಯಲು ಸೀಮೆ ಪ್ರದೇಶಗಳಾಗಿವೆ. ಇವು ಬರಗಾಲ ಪೀಡಿತ ಪ್ರದೇಶಗಳಾಗಿವೆ. ಈ ಎರಡೂ ಹೋಬಳಿಗಳಿಗೆ ಯಗಚಿ ಜಲಾಶಯದಿಂದ ನೀರು ಒದಗಿಸ ಬೇಕೆಂಬುದು ಎರಡೂವರೆ ದಶಕಗಳ ಹೋರಾಟವಾಗಿದೆ. ರಾಜ್ಯ ಸರ್ಕಾರ ಕೊನೆಗೂ ಈ ಭಾಗದ ಜನರ ಬೇಡಿಕೆಗೆ ಮಣಿದು ನೀರು ನೀಡಲು ಒಪ್ಪಿಗೆ ನೀಡಿದೆ. ಜನರ ಕನಸು ನನಸಾಗುವತ್ತಾ ಸಾಗಿದೆ.

ರಾಮಕೃಷ್ಣ ಹೆಗಡೆ ಕರ್ನಾಟಕದ ಮುಖ್ಯಮಂತ್ರಿ ಮತ್ತು ಎಚ್.ಡಿ. ದೇವೇಗೌಡರು ನೀರಾವರಿ ಸಚಿವರಾಗಿದ್ದ ಅವಧಿಯಲ್ಲಿ 1984ರಲ್ಲಿ ಯಗಚಿ ಜಲಾಶಯಕ್ಕೆ ಅಡಿಗಲ್ಲನ್ನು ಹಾಕಲಾಗಿತ್ತು. ಯಗಚಿ ಅಣೆಕಟ್ಟೆ ಕಾಮಗಾರಿ 1985ರಲ್ಲಿ ಆರಂಭಗೊಂಡಿತು. ಅಂದಿನಿಂದಲೇ ಈ ಜಲಾಶಯದ ಮೂಲಕ ಬರಗಾಲದಲ್ಲಿರುವ ಹಳೇಬೀಡು ಮತ್ತು ಹೋಬಳಿಗಳಿಗೆ ನೀರು ಹರಿಸುವಂತೆ ಮನವಿ ಮಾಡುತ್ತಲೇ ಇದ್ದರು. ಆದರೆ ಹಳೇಬೀಡು ಹೋಬಳಿ ಕೃಷ್ಣ ಕಣಿವೆ ವ್ಯಾಪ್ತಿಗೆ ಬರುತ್ತದೆ ಎಂಬ ಕಾರಣಕ್ಕೆ ತಾಂತ್ರಿಕ ನೆಪವೊಡ್ಡಿ ಈ ಯೋಜನೆಗೆ ಅನುಮತಿ ನೀಡಿರಲಿಲ್ಲ.

ಇಲ್ಲಿನ ಜನರು ನೀರು ಬೇಕೇ ಬೇಕೆಂದು ಕಳೆದ 25 ವರ್ಷಗಳಿಂದ ಪ್ರತಿಭಟನೆ ಮತ್ತು ಹೋರಾಟ ನಡೆಸಿ ಕೊಂಡು ಬಂದಿದ್ದರು. ಎ.ಎಸ್. ಬಸವರಾಜು ಅಧ್ಯಕ್ಷತೆಯ ಯಗಚಿ ನೀರು ಹೋರಾಟ ಸಮಿತಿ ಇದಕ್ಕಾಗಿ ತೀವ್ರವಾದ ಪ್ರತಿಭಟನೆಯನ್ನೇ ನಡೆಸಿತ್ತು. 2004ರಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದ ಹಾಲಿ ಮುಖ್ಯಮಂತ್ರಿ ಯಡಿಯೂರಪ್ಪ ನೀರು ಹರಿಸುವಂತೆ ಆಗ್ರಹಿಸಿ ಹಳೇಬೀಡು-ಮಾದಿಹಳ್ಳಿ ಹೋಬಳಿ ಗಳಲ್ಲಿ ಪಾದಾಯಾತ್ರೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ 6 ತಿಂಗಳೊಳಗೆ ನೀರು ಹರಿಸುವ ಭರವಸೆ ನೀಡಿದ್ದರು. ಆದರೆ ಅಧಿಕಾರಕ್ಕೆ ಬಂದ 3 ವರ್ಷಗಳ ನಂತರವಾದರೂ ಸಚಿವ ಸಂಪುಟ ಒಪ್ಪಿಗೆ ನೀಡಿರುವುದು ಈ ಭಾಗದ ರೈತರಲ್ಲಿ ಹರ್ಷ ಮೂಡಿಸಿದೆ. 

ಇದಕ್ಕೂ ಮುನ್ನ ಎಸ್.ಎಂ.ಕೃಷ್ಣ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ಏತ ನೀರಾವರಿ ಮೂಲಕ ನೀರು ಹರಿಸುವ ಯೋಜನೆ ರೂಪಿಸಿ ತಾಂತ್ರಿಕ, ಆಡಳಿತಾತ್ಮಕ,ಹಣಕಾಸು ಇಲಾಖೆಯ ಮಂಜೂರಾ ತಿಯನ್ನು ನೀಡಲಾಗಿತ್ತು. ಕಂದಾಯ ಸಚಿವರಾ ಗಿದ್ದ ಎಚ್.ಸಿ.ಶ್ರೀಕಂಠಯ್ಯ ಅವರು ಯೋಜನೆಗೆ ಶಿಲಾನ್ಯಾಸ ನೆರವೇರಿಸಿದ್ದರು. ಆದರೆ ಸರ್ಕಾರ ಬಿದ್ದು ಹೋದ ಹಿನ್ನೆಲೆಯಲ್ಲಿ ಈ ಯೋಜನೆ ಅಂದಿನಿಂದ ನೆನೆಗುದಿಗೆ ಬಿದ್ದಿತ್ತು.

ಏತ ನೀರಾವರಿ ಯೋಜನೆ: ಹಳೇಬೀಡು-ಮಾದಿಹಳ್ಳಿ ಹೋಬಳಿಗಳ 39 ಕೆರೆಗಳಿಗೆ ಏತ ನೀರಾವರಿ ಯೋಜನೆಯ ಮೂಲಕ ನೀರು ಹರಿಸುವ ಯೋಜನೆ ಇದಾಗಿದೆ. 9.33 ಕೋಟಿ ರೂಪಾಯಿ ಯೋಜನೆಗೆ ಗುರುವಾರ ನಡೆದ ರಾಜ್ಯ ಸಚಿವ ಸಂಪುಟ ಸಭೆ ಅನುಮೋದನೆ ನೀಡಿದೆ. ಈ ಯೋಜನೆಯ ಪ್ರಕಾರ ಹಳೇಬೀಡು ಹೋಬಳಿಯ ಕೆರೆಗಳಿಗೆ ನೀರನ್ನು ಹರಿಸಲಾಗುತ್ತದೆ. 

ಮಾದಿಹಳ್ಳಿ ಹೋಬಳಿಗೆ ಈ ಯೋಜನೆಯ ಮೂಲಕ 3ಸಾವಿರ ಎಕರೆಗೆ ನೀರು ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರು ದೊರಕುತ್ತದೆ. ಎಡದಂಡೆ ನಾಲೆ ಮೂಲಕ 2 ಸಾವಿರ ಎಕರೆಗೆ ಮತ್ತು ಬಲದಂಡೆ ಮೂಲಕ 1 ಸಾವಿರ ಎಕರೆ ಪ್ರದೇಶಕ್ಕೆ ನೀರಾವರಿ ಸೌಲಭ್ಯ ದೊರಕುತ್ತದೆ. ಯಗಚಿ ಎಡದಂಡೆ ನಾಲೆಯ 27ನೇ ಕಿ.ಮೀ. ಬಳಿ ಏತ ನೀರಾವರಿಗೆ ಸಂಬಂಧಿಸಿದ ಯಂತ್ರೋ ಪಕರಣಗಳನ್ನು ಅಳವಡಿಸಲಾ ಗು ತ್ತದೆ.

375 ಎಚ್.ಪಿ. ಸಾಮರ್ಥ್ಯದ ಪಂಪ್‌ಗಳ ಮೂಲಕ ನೀರನ್ನು ಮೇಲೆತ್ತಿ 3.50 ಕಿ.ಮೀ. ಉದ್ದದ ಎಡದಂಡೆ ನಾಲೆ ಮತ್ತು 5.90 ಕಿ.ಮೀ ಉದ್ದದ ಬಲದಂಡೆ ನಾಲೆ ಮೂಲಕ ಮಾದಿಹಳ್ಳಿ ಹೋಬಳಿಯ ಕೆರೆಗಳಿಗೆ ನೀರು ತುಂಬಿಸಲಾಗುತ್ತದೆ. ಎರಡು ಹೋಬಳಿಗಳಿಗೆ ನೀರು ಒದಗಿಸಲು ಯಗಚಿ ಅಣೆಕಟ್ಟೆಯಿಂದ ಒಟ್ಟು 0.352 ಟಿಎಂಸಿ ನೀರನ್ನು ಉಪಯೋಗಿಸಲಾಗುತ್ತದೆ. ಒಟ್ಟಾರೆ ಈ ಯೋಜನೆ ಜಾರಿಗೆ ಬಂದರೆ ಈ ಭಾಗದ ರೈತರು ಮತ್ತು ಜನರ ಮೊಗದಲ್ಲಿ ಮಂದಹಾಸ ಮೂಡಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT