ADVERTISEMENT

ವಾಟೇಹೊಳೆ ಅಣೆಕಟ್ಟೆ: ನೀರಿನ ಪ್ರಮಾಣ ತೀವ್ರ ಇಳಿಕೆ

​ಪ್ರಜಾವಾಣಿ ವಾರ್ತೆ
Published 19 ಜುಲೈ 2012, 8:15 IST
Last Updated 19 ಜುಲೈ 2012, 8:15 IST

ಆಲೂರು: ತಾಲ್ಲೂಕಿನ ವಾಟೇಹೊಳೆ ಜಲಾಶಯ ಪೂರ್ಣ ಬರಿದಾಗಿದೆ. ಜಲಾನಯನ ವ್ಯಾಪ್ತಿಯಲ್ಲಿ ಮಳೆ ಇಲ್ಲದಿರುವುದರಿಂದ ಜಲಾಶಯದಲ್ಲಿನ ನೀರಿನ ಸಂಗ್ರಹ ಕಡಿಮೆಯಾಗಿದೆ. ಇದರಿಂದ ಈ ವರ್ಷ ತಾಲ್ಲೂಕಿನ ರೈತರು ತೊಂದರೆಗೆ ಸಿಲುಕುವ ಸಾಧ್ಯತೆ ಇದೆ.

 ಈ ಜಲಾಶಯವು ಬೇಲೂರು ತಾಲ್ಲೂಕಿನ 500 ಎಕರೆ ಹಾಗೂ ಆಲೂರು ತಾಲ್ಲೂಕಿನ 18 ಸಾವಿರ ಎಕರೆಗೆ ನೀರುಣಿಸುತ್ತದೆ. ಈಗ ಜಲಾಶಯದಲ್ಲಿ ನೀರು ಇಲ್ಲದಿರುವುದರಿಂದ ಜಮೀನುಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಮುಂದಿನ ಆಗಸ್ಟ್ ತಿಂಗಳಿನಲ್ಲಿ ಬೆಳೆಗಳಿಗೆ ನೀರು ಹರಿಸಬೇಕಿತ್ತು. ಆದರೆ ಜಲಾಶಯ ನೀರಿನ ಸಂಗ್ರಹ ಕಡಿಮೆಯಾಗಿರುವುದರಿಂದ ಜಲಾಶಯದ ಅಧಿಕಾರಿಗಳು ಮುಂದೆ ಏನಾಗುವುದೋ ಎಂಬ ಚಿಂತನೆಯಲ್ಲಿದ್ದಾರೆ.

 ಜಲಾಶಯಕ್ಕೆ ಕೇವಲ10 ಕ್ಯೂಸೆಕ್ ನೀರು ಹರಿದು ಬರುತಿದ್ದು 107 ಕ್ಯೂಸೆಕ್ ನೀರನ್ನು ನಾಲೆಗಳಿಗೆ ಹರಿಸಲಾಗುತ್ತಿದೆ. ಜಲಾಶಯದಲ್ಲಿ 0.613 ಟಿ.ಎಂ.ಸಿ. ನೀರು ಸಂಗ್ರಹವಿದ್ದು, ಜಲಾಶಯದ ಸಂಗ್ರಹಣ ಸಾಮರ್ಥ್ಯ 1.51 ಟಿ.ಎಂ.ಸಿ. ಆಗಿದೆ. ಕಳೆದ ವರ್ಷ ಇದೇ ದಿನ ನೀರಿನ ಮಟ್ಟ 964.86ಮೀಟರ್ ಇತ್ತು ಮತ್ತು ನೀರಿನ ಸಂಗ್ರಹಣೆ 1.29 ಟಿ.ಎಂ.ಸಿ ಇತ್ತು. ನೀರಿನ ಒಳಹರಿವು 250ಕ್ಯೂಸೆಕ್ ಇತ್ತು. ಜುಲೈ ತಿಂಗಳಿನಲ್ಲಿ ಸಾಮಾನ್ಯವಾಗಿ ಜಲಾಶಯ ಪೂರ್ಣ ತುಂಬಿರುತಿತ್ತು. ರೈತರ ಹಿತದೃಷ್ಟಿಯಿಂದ ಕೆರೆಕಟ್ಟೆಗಳನ್ನು ತುಂಬಲು ಮತ್ತು ಜನ ಜಾನುವಾರುಗಳು ಕುಡಿಯುವ ನೀರಿನ ಉದ್ದೇಶಕ್ಕಾಗಿ ಮಾತ್ರ ನಾಲೆಗಳಲ್ಲಿ ನೀರನ್ನು ಬಿಡಲಾಗುತ್ತಿದೆ ಎಂದು ವಾಟೆಹೊಳೆ ಜಲಾಶಯದ ಸಹಾಯಕ ಕಾರ್ಯಪಾಲಕ ಎಂಜನಿಯರ್ ಎಂ.ಆರ್.ನಟರಾಜ್ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.