ADVERTISEMENT

ವಿಜ್ಞಾನದ ಕೌತುಕ ಬಿಚ್ಚಿಟ್ಟ ಮಕ್ಕಳು

​ಪ್ರಜಾವಾಣಿ ವಾರ್ತೆ
Published 15 ಡಿಸೆಂಬರ್ 2012, 10:25 IST
Last Updated 15 ಡಿಸೆಂಬರ್ 2012, 10:25 IST

ಬಾಣಾವರ: `ಮಕ್ಕಳು ತಾವು ಮಾಡಿದ ವಿಜ್ಞಾನದ ಮಾದರಿಗಳ ಬಗ್ಗೆ ಹೆಮ್ಮೆಯಿಂದ ಹೇಳುತ್ತಿದ್ದರೆ ನೋಡು ತ್ತಿದ್ದವರ ಕಣ್ಣು ಅರಳುತ್ತಿದ್ದವು. ಮಕ್ಕಳ ವಿಜ್ಞಾನದ ಆಸಕ್ತಿ, ಕೂತುಹಲ, ಮಕ್ಕಳ ಗರಿ ಬಿಚ್ಚುವ ಕನಸುಗಳಿಗೆ ಒತ್ತಾಸೆ ಯಾಗಿ ನಿಂತ ಶಿಕ್ಷಕ ವೃಂದ, ಮಕ್ಕಳ ಸೃಜನಾತ್ಮ ಬೆಳವಣಿಗೆಗೆ ವೇದಿಕೆ ಒದ ಗಿಸುವ ಶಿಕ್ಷಣ ಇಲಾಖೆಯ ಉತ್ಸಾಹ.
ಇವೆಲ್ಲ ಕಂಡಿದ್ದು ಬಾಣಾವರ ಪದವಿ ಪೂರ್ವ ಕಾಲೇಜಿನಲ್ಲಿ ಈಚೆಗೆ ಆಯೋಜಿಸಿದ್ದ ಜಿಲ್ಲಾಮಟ್ಟದ ವಿಜ್ಞಾನ ವಸ್ತುಪ್ರದರ್ಶನದಲ್ಲಿ.

ಜಿಲ್ಲೆಯ ಒಟ್ಟು 96 ಮಕ್ಕಳು, 48 ಶಿಕ್ಷಕರು ವಸ್ತು ಪ್ರದರ್ಶನದಲ್ಲಿ ಭಾಗವಹಿಸಿದ್ದರು. ಒಟ್ಟು 56 ಮಾದರಿಗಳನ್ನು ತಯಾರಿಸಿ ಪ್ರದರ್ಶನಕ್ಕೆ ಇಡಲಾಗಿತ್ತು. ವಿವಿಧ ಶಾಲೆಯಿಂದ ಆಗಮಿಸಿದ್ದ ಮಕ್ಕಳು ಮಾದರಿ ತಯಾರಿಕೆಯಲ್ಲಿ ತೋರಿತ್ತಿದ್ದ ಶ್ರದ್ಧೆ ಬಹುಮಾನವನ್ನು ಗೆದ್ದೇ ತೀರುವ ಅವರ ಹಂಬಲವನ್ನು ತೋರಿಸುತ್ತಿತ್ತು. ಅನುಪಯುಕ್ತ ವಸ್ತುಗಳನ್ನು ಬಳಸಿ ಮಕ್ಕಳು ತಯಾರಿಸಿದ ಮಾದರಿಗಳು ನೋಡುಗರನ್ನು ಚಕಿತರನ್ನಾಗಿಸಿದ್ದವು. ಕೈಗಾರಿಕೆ, ಸಾರಿಗೆ ಮತ್ತು ಸಂಪರ್ಕ, ಮಾಹಿತಿ ಮತ್ತು ಶೈಕ್ಷಣಿಕ ತಂತ್ರಜ್ಞಾನ, ಗಣಿತದ ಮಾದರಿಗಳು, ಸಮುದಾಯ ಆರೋಗ್ಯ, ನೈಸರ್ಗಿಕ ಸಂಪನ್ಮೂಲ ಮತ್ತು ಅವುಗಳ ಸಂರಕ್ಷಣೆ ಹೀಗೆ ಹಲವು ವಿಭಾಗಗಳಲ್ಲಿ ಮಕ್ಕಳು ತಮ್ಮ ಪ್ರೌಢಿಮೆ ತೋರಿದ್ದರು.

ಪಠ್ಯಕ್ಕೆ ಸಂಬಂಧಿಸಿದ ಮಾದರಿಗಳನ್ನು ಕೆಲವು ಮಕ್ಕಳು ನಿರ್ಮಿಸಿದ್ದರೆ, ಪುಸ್ತಕ ಪ್ರಪಂಚದ ಹೊರತಾದ ಅನೇಕ ವಿಷಯಗಳಲ್ಲಿ ಮಕ್ಕಳು ಅಸಕ್ತಿ ತೋರಿದ್ದು ವಿಶೇಷವಾಗಿತ್ತು. ಕೊಠಡಿ ತುಂಬೆಲ್ಲ ವೈರುಗಳು, ಯಂತ್ರಗಳು, ಝಗಮಗಿಸುವ ದೀಪಗಳು, ಫ್ಯಾನ್‌ಗಳು, ಮೊಬೈಲ್ ಚಾರ್ಜರ್‌ಗಳು, ಪರಿಸರ ಮಾಲಿನ್ಯಕ್ಕೆ ಉತ್ತರ ಎಂಬಂತೆ ತಂತ್ರಜ್ಞಾನದ ಆವಿಷ್ಕಾರಗಳು ಮಕ್ಕಳ ಕಾಳಜಿಗೆ ಸಾಕ್ಷಿಯಾಗಿದ್ದವು.

ಮಕ್ಕಳ ಗುಣಮಟ್ಟ ಮತ್ತು ಬೌದ್ಧಿಕ ಮಟ್ಟ ಕಂಡ ಪ್ರತಿಯೊಬ್ಬರೂ ಪ್ರೌಢಶಾಲೆಯಿಂದಲೇ ಮಕ್ಕಳ ಮನಸ್ಸನ್ನು ವಿಜ್ಞಾನ, ತಂತ್ರಜ್ಞಾನಗಳ ಕಡೆ ಸೆಳೆಯುವ ಸರ್ಕಾರದ ಯೋಜನೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.