ADVERTISEMENT

ವಿದ್ಯಾರ್ಥಿಗಳಿಂದ ಶಿಕ್ಷಕರ ಮೇಲೆ ಹಲ್ಲೆ

​ಪ್ರಜಾವಾಣಿ ವಾರ್ತೆ
Published 11 ಜನವರಿ 2014, 4:50 IST
Last Updated 11 ಜನವರಿ 2014, 4:50 IST

ಚನ್ನರಾಯಪಟ್ಟಣ: ಇಲ್ಲಿನ ಸರ್ಕಾರಿ ಪ್ರೌಢಶಾಲೆಯ ಇಬ್ಬರು ವಿದ್ಯಾರ್ಥಿಗಳು ಹಾಗೂ ಕೆಲ ಕಿಡಿಗೇಡಿಗಳು ಇಬ್ಬರು ಶಿಕ್ಷಕರು ಸೇರಿದಂತೆ ಮೂವರ ಮೇಲೆ ಹಲ್ಲೆ ನಡೆಸಿ, ಶಿಕ್ಷಕರ ಕಾರನ್ನು ಜಖಂಗೊಳಿಸಿದ ಘಟನೆ ಪಟ್ಟಣದ ಪೇಟೆ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ನಡೆದಿದೆ.

ಘಟನೆಯಲ್ಲಿ ಸಹಶಿಕ್ಷಕ ಬಿ.ಬಿ. ರವಿ, ದೈಹಿಕ ಶಿಕ್ಷಣ ಶಿಕ್ಷಕ ಭೀಮೇಶ್‌, ‘ಡಿ’ ದರ್ಜೆ ನೌಕರ ಮಂಜುನಾಥ್‌ ಗಾಯಗೊಂಡವರು.
ಬಿ.ಬಿ. ರವಿ ಹಾಗೂ ಮಂಜುನಾಥ್‌ ಅವರನ್ನು ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಎಂಟು ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ವಿದ್ಯಾರ್ಥಿಯ ಪೋಷಕ ತಿಮ್ಮೇಗೌಡ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ.

ಘಟನೆ ವಿವರ: ಶಾಲೆಯಲ್ಲಿ ಶುಕ್ರವಾರ 10ನೇ ತರಗತಿ ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ತೆಗೆದುಕೊಳ್ಳಲಾಗಿತ್ತು. ಈ ವಿಶೇಷ ತರಗತಿಗೆ ಹಾಜರಾಗಿದ್ದ ಇಬ್ಬರು ವಿದ್ಯಾರ್ಥಿಗಳು ಶೌಚಾಲಯದಲ್ಲಿ ಅಳವಡಿಸಿದ್ದ ನಲ್ಲಿ ಪೈಪ್‌ಗಳನ್ನು ಕಿತ್ತು ಹಾಕಿದರು. ಇದನ್ನು ಗಮನಿಸಿದ ಶಿಕ್ಷಕ ಭೀಮೇಶ್‌ ಹಾಗೂ ‘ಡಿ’ ದರ್ಜೆ ನೌಕರ ಮಂಜುನಾಥ್‌, ಆ ಇಬ್ಬರು ವಿದ್ಯಾರ್ಥಿಗಳಿಗೆ ಬುದ್ಧಿವಾದ ಹೇಳಿದರು.

ಆದರೆ, ವಿದ್ಯಾರ್ಥಿಗಳು ಶಿಕ್ಷಕರ ವಿರುದ್ಧ ತಿರುಗಿ ಬಿದ್ದರು. ಆಗ ಶಿಕ್ಷಕರು ವಿದ್ಯಾರ್ಥಿಗಳನ್ನು ಬೈದು ಕೊಠಡಿಯಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದರು. ಅಷ್ಟರಲ್ಲಿ ವಿಷಯ ತಿಳಿದ ವಿದ್ಯಾರ್ಥಿ ತಂದೆ ಹಾಗೂ ಶಾಲೆಯ ಹಳೆ ವಿದ್ಯಾರ್ಥಿ ಸೇರಿ ಎಂಟು ಜನ ಆಟೊದಲ್ಲಿ ಶಾಲಾ ಆವರಣಕ್ಕೆ ಬಂದರು. ವಿದ್ಯಾರ್ಥಿಗಳ ಜತೆ ಶಿಕ್ಷಕರ ಕೊಠಡಿಗೆ ನುಗ್ಗಿದ ಅವರು ಭೀಮೇಶ್‌, ಬಿ.ಬಿ. ರವಿ ಹಾಗೂ ಸಿಬ್ಬಂದಿ ಮಂಜುನಾಥ್‌ ಮೇಲೆ ಮನಬಂದಂತೆ ಹಲ್ಲೆ ಮಾಡಿದ್ದಾರೆ.

ಇಟ್ಟಿಗೆಗಳಿಂದ ಹೊಡೆದು ಕಾರಿನ ಗಾಜು ಪುಡಿ ಮಾಡಿದ್ದಾರೆ. ಬಳಿಕ ಇನ್ನೊಂದು ಕೊಠಡಿಗೆ ನುಗ್ಗಿ ಶಿಕ್ಷಕಿಯರಾದ ಮಮತಾ, ಜ್ಯೋತಿ, ಉಮಾದೇವಿ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಶಾಸಕ ಸಿ.ಎನ್‌. ಬಾಲಕೃಷ್ಣ, ಕ್ಷೇತ್ರ ಶಿಕ್ಷಣಾಧಿಕಾರಿ ಎಚ್.ಕೆ. ಪಾಂಡು, ಸಬ್‌ಇನ್‌ಸ್ಪೆಕ್ಟರ್‌ ಎಂ.ಎಸ್‌. ರಾಜು ಶಾಲೆಗೆ ಭೇಟಿ ನೀಡಿ ಪರಿಶೀಲಿಸಿದರು. ಬಳಿಕ ಪ್ರೌಢಶಾಲಾ ಶಿಕ್ಷಕರು ತಾಲ್ಲೂಕು ಸರ್ಕಾರಿ ನೌಕರ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ತಹಶೀಲ್ದಾರರಿಗೆ ದೂರು ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.