ADVERTISEMENT

‘ವೆಜಿಟೆಬಲ್ ಫೆಸ್ಟ್’: ಗಮನಸೆಳೆದ ಪ್ರಾಣಿ, ಪಕ್ಷಿಗಳ ಕಲಾಕೃತಿ

​ಪ್ರಜಾವಾಣಿ ವಾರ್ತೆ
Published 13 ಅಕ್ಟೋಬರ್ 2018, 15:32 IST
Last Updated 13 ಅಕ್ಟೋಬರ್ 2018, 15:32 IST
ಹಾಸನದ ಆದಿಚುಂಚನಗಿರಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ವೆಜಿಟಬಲ್ ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ತರಕಾರಿ ಕುರಿತು ಮಾಹಿತಿ ಪಡೆದರು
ಹಾಸನದ ಆದಿಚುಂಚನಗಿರಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ನಡೆದ ವೆಜಿಟಬಲ್ ಫೆಸ್ಟ್‌ನಲ್ಲಿ ವಿದ್ಯಾರ್ಥಿಗಳು ತರಕಾರಿ ಕುರಿತು ಮಾಹಿತಿ ಪಡೆದರು   

ಹಾಸನ: ‘ಪೋಷಕರ ಶ್ರಮ ಅರಿತು ವಿದ್ಯಾಭ್ಯಾಸದಲ್ಲಿ ತೊಡಗಿಸಿಕೊಂಡು ಏನನ್ನಾದರೂ ಸಾಧಿಸುವ ಗುಣವನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಶಾಖಾ ಮಠದ ವ್ಯವಸ್ಥಾಪಕ ಎಚ್.ಕೆ.ಚಂದ್ರಶೇಖರ್ ಸಲಹೆ ನೀಡಿದರು.

ಆದಿಚುಂಚನಗಿರಿ ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಆಯೋಜಿಸಿದ್ದ ‘ವೆಜಿಟೆಬಲ್ ಫೆಸ್ಟ್’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿದ್ಯಾರ್ಥಿ ದೆಸೆಯಲ್ಲಿ ಕಲಿಕೆಗಾಗಿ ತಪಸ್ಸು ಮಾಡಿದರೆ ಮುಂದಿನ ಜೀವನ ಸುಖಕರವಾಗುತ್ತದೆ. ಮನರಂಜನೆಯಿಂದ ದೂರ ಉಳಿದು, ಕಲಿಕೆಯಲ್ಲಿ ಶ್ರದ್ಧೆಯಿಂದ ತೊಡಗಿಕೊಂಡರೆ ಬದುಕು ಹಸನಾಗಲಿದೆ’ ಎಂದು ತಿಳಿಸಿದರು.

ADVERTISEMENT

‘ದೈಹಿಕ ಹಾಗೂ ಮಾನಸಿಕವಾಗಿ ಸದೃಢವಾಗಿದ್ದರೆ ಶೈಕ್ಷಣಿಕವಾಗಿಯೂ ಸಾಧನೆ ಮಾಡಲು ಸಾಧ್ಯ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ, ಹಣ್ಣು, ಸೊಪ್ಪು, ತರಕಾರಿಯನ್ನು ನಿತ್ಯ ಬಳಸಬೇಕು. ಚಿಕ್ಕ ವಯಸ್ಸಿನಿಂದಲೇ ಆರೋಗ್ಯದ ಬಗ್ಗೆ ಕಾಳಜಿ ವಹಿಸುವ ಗುಣ ಮೈಗೂಡಿಸಿಕೊಳ್ಳಬೇಕು’ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಆದಿಚುಂಚನಗಿರಿ ಆಂಗ್ಲ ಮಾದ್ಯಮ ಶಾಲೆಯ ಪ್ರಾಂಶುಪಾಲ ವಿಕ್ರಮ್ ದೇವ್ ಪ್ರಭು ಮಾತನಾಡಿ, ‘ವಾಹನಗಳು ಚಲಿಸಲು ಇಂಧನ ಹೇಗೆ ಮುಖ್ಯವೋ, ಹಾಗೆಯೇ ಉತ್ತಮ ಆರೋಗ್ಯಕ್ಕಾಗಿ ಪೋಷಕಾಂಶ ಪೂರಿತ ಆಹಾರ ಮುಖ್ಯ. ಆದ್ದರಿಂದ ಮಕ್ಕಳಲ್ಲಿ ಉತ್ತಮ ಆಹಾರ ಪದ್ಧತಿ ರೂಢಿಸಿಕೊಳ್ಳಲು ಪೋಷಕರು ನೆರವಾಗಬೇಕು. ಕ್ರಮಬದ್ಧ ಆಹಾರ ಸೇವನೆಯಿಂದ ದೈಹಿಕ ಹಾಗೂ ಮಾನಸಿಕವಾಗಿ ಸದೃಢರಾಗಬಹುದು’ ಎಂದು ಸಲಹೆ ನೀಡಿದರು.

ಕಾಲೇಜಿನ ಪ್ರಾಂಶುಪಾಲ ಜಿ.ಚಂದ್ರಶೇಖರ್ ಮಾತನಾಡಿ, ‘ಸಿದ್ಧ ಆಹಾರದ ಮೊರೆ ಹೋಗಿರುವ ಪ್ರಸ್ತುತ ದಿನಗಳಲ್ಲಿ ಹಣ್ಣು, ತರಕಾರಿಗಳಲ್ಲಿ ಸಿಗುವ ಪೋಷಕಾಂಶದ ಬಗ್ಗೆ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗುತ್ತಿದೆ. ತರಕಾರಿ, ಹಣ್ಣುಗಳಲ್ಲಿನ ಪೋಷಕಾಂಶಗಳ ಕುರಿತು ಪರಿಚಯಿಸುವುದಲ್ಲದೇ, ಅವುಗಳ ವೈಜ್ಞಾನಿಕ ಹೆಸರು, ವಿವಿಧ ಭೌಗೋಳಿಕ ಪ್ರದೇಶಗಳಲ್ಲಿ ಕರೆಯಲ್ಪಡುವ ಹೆಸರು, ಅವುಗಳಲ್ಲಿ ಅಡಗಿರುವ ಪೋಷಕಾಂಶಗಳು ಸೇರಿದಂತೆ ಹಲವು ವಿಷಯಗಳ ಕುರಿತು ಮಕ್ಕಳಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ’ ಎಂದರು.

ಕಾಲೇಜು ಆವರಣದಲ್ಲಿ ವಿದ್ಯಾರ್ಥಿಗಳು ತರಕಾರಿ ಹಾಗೂ ಹಣ್ಣಿನಿಂದ ವಿವಿಧ ಬಗೆಯ ಖಾದ್ಯ ತಯಾರಿಸಿ ಪ್ರದರ್ಶಿಸಿದರು. ಹಣ್ಣು ಹಾಗೂ ತರಕಾರಿಗಳಿಂದ ತಯಾರಿಸಿದ ವಿವಿಧ ಪ್ರಾಣಿ, ಪಕ್ಷಿಗಳ ಕಲಾಕೃತಿಗಳು ಗಮನ ಸೆಳೆದವು.
ವಿದ್ಯಾರ್ಥಿನಿ ಅನುಷಾ, ಉಪನ್ಯಾಸಕಿ ಶೃತಿ, ಉಪನ್ಯಾಸಕ ಮಂಜುನಾಥ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.