ADVERTISEMENT

ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2012, 6:05 IST
Last Updated 6 ಫೆಬ್ರುವರಿ 2012, 6:05 IST

ಅರಕಲಗೂಡು: ತಾಲ್ಲೂಕಿನ ದೊಡ್ಡಮಗ್ಗೆ ವೇಣುಗೋಪಾಲಸ್ವಾಮಿ ಬ್ರಹ್ಮರಥೋತ್ಸವ ಭಾನುವಾರ ವಿಜೃಂಭಣೆಯಿಂದ ನೆರವೇರಿತು.

ರಥೋತ್ಸವ ಅಂಗವಾಗಿ ಬೆಳಿಗ್ಗೆ ದೇವಾಲಯದಲ್ಲಿ ಸೂರ್ಯ ಮಂಡಲೋತ್ಸವ, ವೇದ ಪಾರಾಯಣ ಸೇವೆ, ನಿತ್ಯಾರಾಧನೆ, ಶತ್ತುಮೊರೈ, ಹೋಮ ನಡೆದವು. ಮಧ್ಯಾಹ್ನ ಕೃಷ್ಣಗಂಧೋತ್ಸವದ ಬಳಿಕ ಉತ್ಸವ ಮೂರ್ತಿ ಅಲಂಕರಿಸಿದ ರಥದಲ್ಲಿ ಕುಳ್ಳಿರಿಸಲಾಯಿತು. ರಥದ ಮೇಲೆ ವಿಶೇಷ ಪೂಜೆ ಮಂಗಳಾರತಿ ನಡೆದ ಬಳಿಕ ದೇವಾಲಯ ಸಮಿತಿ ಅಧ್ಯಕ್ಷ ಎಂ.ವಿ. ಶ್ರೀನಿವಾಸ್ ಅಯ್ಯಂಗಾರ್ ರಥೋತ್ಸವಕ್ಕೆ ಚಾಲನೆ ನೀಡಿದರು.

ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಜಯಘೊಷಣೆ ಹಾಗೂ ದೇವರ ನಾಮಸ್ಮರಣೆ ನಡೆಸಿ ತೇರು ಎಳೆದು ರಥದ ಮೇಲೆ ಬಾಳೆಹಣ್ಣು ದವನಗಳನ್ನು ಎಸೆದು ಸಂಭ್ರಮಿಸಿದರು.

ಬಳಿಕ ವಸಂತೋತ್ಸವ, ರಾತ್ರಿ ರಥ ಮಂಟಪ ಸೇವೆ ಹಾಗೂ ಶಾಂತೋತ್ಸವ ನೆರವೇರಿತು. ರಥೋತ್ಸವಕ್ಕೆ ಮುನ್ನ ದೇವಾಲಯದಲ್ಲಿ ನಡೆದ ವಿಶೇಷ ಪೂಜೆಯಲ್ಲಿ ಜನರು ಪಾಲ್ಗೊಂಡು ನಮನ ಸಲ್ಲಿಸಿದರು. ರಥೋತ್ಸವದ ಹಿನ್ನೆಲೆಯಲ್ಲಿ ಸೇರಿದ್ದ ಜಾತ್ರೆಯಲ್ಲಿ ಜನರು ವಸ್ತುಗಳ ಖರೀದಿ ನಡೆಸಿದರು. ಸಿಹಿ ತಿನಿಸು, ಆಟಿಕೆ, ಅಲಂಕಾರಿಕ ವಸ್ತುಗಳ ವ್ಯಾಪಾರ ಭರ್ಜರಿಯಾಗಿ ನಡೆಯಿತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.