ADVERTISEMENT

ಸಂಘಟಿತರಾಗಿ ಮೌಢ್ಯಗಳ ವಿರುದ್ಧ ಹೋರಾಡಿ

​ಪ್ರಜಾವಾಣಿ ವಾರ್ತೆ
Published 21 ಮೇ 2012, 5:35 IST
Last Updated 21 ಮೇ 2012, 5:35 IST

ಚನ್ನರಾಯಪಟ್ಟಣ: ಮೂಢನಂಬಿಕೆಗಳನ್ನು ಬಿಂಬಿಸುವಂಥ ಕಾರ್ಯಕ್ರಮವನ್ನು ಮಾಧ್ಯಮಗಳು ಪ್ರಸಾರ ಮಾಡುವುದರಿಂದ ಜನರನ್ನು ಮೌಢ್ಯ ಆವರಿಸುತ್ತಿದೆ ಎಂದು ವಿಚಾರವಾದಿ ಡಾ. ಗಿರಿಧರ್ ಹವಾಲ್ದಾರ್         ತಿಳಿಸಿದರು.

 ಶ್ರವಣಬೆಳಗೊಳದಲ್ಲಿ  ಕರ್ನಾಟಕ ವಿಚಾರವಾದಿಗಳ ಒಕ್ಕೂಟದ ವತಿಯಿಂದ ಈಚೆಗೆ ಏರ್ಪಡಿಸಿದ್ದ ರಾಜ್ಯಮಟ್ಟದ ವೈಚಾರಿಕಾ ಅಧಿವೇಶನದಲ್ಲಿ  ಮಾತನಾಡಿದ ಅವರು, ಇದರಿಂದ ಜನರನ್ನು ದಿಕ್ಕು ತಪ್ಪಿಸಿದಂತಾಗುತ್ತದೆ. ಇಂತವುಗಳ ವಿರುದ್ಧ ವಿಚಾರವಾದಿಗಳು ಸಂಘಟಿತರಾಗಿ ದನಿ ಎತ್ತಬೇಕು. ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಉಂಟು ಮಾಡಬೇಕು ಎಂದರು.

ಸಮಾಜದಲ್ಲಿ ಮರ್ಯಾದ ಹತ್ಯಯಂಥ ಘಟನೆಯಿಂದ ಅನೇಕ ಕೆಡುಕುಗಳುಂಟಾಗುತ್ತಿವೆ. ಪೋಷಕರು ಈ ರೀತಿ ಕೆಳಮಟ್ಟಕ್ಕಿಳಿಯುತ್ತಿರುವುದರಿಂದ ಜಾತಿಯತೆಯ ವಿಷ ಬೀಜ ಎಷ್ಟರಮಟ್ಟಿಗೆ ಬೇರೂರಿದೆ ಎಂಬುದು ತಿಳಿಯುತ್ತದೆ. ಇದನ್ನು ತಡೆಯಲು ಸುಶಿಕ್ಷಿತರು, ವಿಚಾರವಾದಿಗಳು, ಅಂತರಜಾತಿ, ಅಂತರ್ ಧರ್ಮಿಯ ವಿವಾಹಕ್ಕೆ ಪ್ರೋತ್ಸಾಹ ನೀಡಬೇಕು ಎಂದರು.

ಎರಡು ದಿನಗಳ ಈ ಸಮಾರಂಭದಲ್ಲಿ  ಡಾ.ಎನ್.ಎಸ್. ಶಂಕರ್, ಡಾ. ಸೋಮಣ್ಣ, ಬಿಸಿಲೆಹಳ್ಳಿ ಪ್ರಭು, ಡಾ. ನರೇಂದ್ರನಾಯಕ್, ಡಾ.ಎಚ್.ಆರ್. ಸ್ವಾಮಿ, ಬಿ.ವಿ. ಸುಬ್ಬರಾವ್, ಶ್ರೀನಿವಾಸ ನಟೇಕರ್ ಇದ್ದರು.

ಸಮಾರೋಪ ಸಮಾರಂಭದಲ್ಲಿ ನಾಲ್ಕು ಪ್ರಮುಖ ನಿರ್ಣಯ ತೆಗೆದುಕೊಳ್ಳಲಾಯಿತು. ರಾಜ್ಯ ಸರ್ಕಾರ ಮಡೆಸ್ನಾನ, ಪಂಕ್ತಿಭೇದ ಊಟದ ವ್ಯವಸ್ಥೆಯನ್ನು ನಿಷೇಧಿಸಿವುದು. ಜನರಲ್ಲಿ ವೈಜ್ಞಾನಿಕ ಮನೋಭಾವವನ್ನುಂಟು ಮಾಡುವುದು. ಸರ್ಕಾರಿ ಕಚೇರಿಗಳಲ್ಲಿ  ಯಾವುದೇ ಮತ, ಧರ್ಮದ ಆಚರಣೆಯನ್ನು  ಸರ್ಕಾರ ನಿಷೇಧಿಸಬೇಕು. ಕಾನೂನು ವ್ಯಾಪ್ತಿಯಲ್ಲಿ ನಾಸ್ತಿಕರಿಗೆ, ಮಾನವತಾವಾದಿಗಳಿಗೆ ರಕ್ಷಣೆ ನೀಡಬೇಕು ಎಂಬ ನಿರ್ಣಯ ಕೈಗೊಳ್ಳಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.