ADVERTISEMENT

ಸಮಯ ಪ್ರಜ್ಞೆ, ವೃತ್ತಿಪರತೆ ಅಗತ್ಯ

​ಪ್ರಜಾವಾಣಿ ವಾರ್ತೆ
Published 19 ಫೆಬ್ರುವರಿ 2012, 6:55 IST
Last Updated 19 ಫೆಬ್ರುವರಿ 2012, 6:55 IST

ಹಾಸನ: `ಸಹಕಾರ ಸಂಘಗಳಿಗೆ ಹೆಚ್ಚಿನ ಜವಾಬ್ದಾರಿ ನೀಡಲು ಸರ್ಕಾರ ಚಿಂತನೆ ನಡೆಸುತ್ತಿದೆ. ಆದರೆ ನಾವು ವೃತ್ತಿಪರತೆ ಹಾಗೂ ಸಮಯಪ್ರಜ್ಞೆಗಳನ್ನು ಬೆಳೆಸಿಕೊಳ್ಳದಿದ್ದರೆ ಖಾಸಗಿ ಸಂಸ್ಥೆಗಳ ಜತೆಗೆ ಸ್ಪರ್ಧೆಗೆ ಇಳಿಯಲು ಸಾಧ್ಯವಿಲ್ಲ~ ಎಂದು ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾ ಧಿಕಾರಿ ಶಂಕರ್ ನುಡಿದರು. 

 ಇಫ್ಕೋ, ಹಾಸನ ಜಿಲ್ಲಾ ಸಹಕಾರ ಯೂನಿಯನ್, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಹಾಸನ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಹಾಗೂ ಸಹಕಾರ ಇಲಾಖೆಗಳ ಸಹಯೋಗ ದಲ್ಲಿ ಶನಿವಾರ ಎಚ್‌ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಿದ್ದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಮತ್ತು ತಾಲ್ಲೂಕು ವ್ಯವಸಾಯೋತ್ಪನ್ನ ಸಹಕಾರ ಮಾರಾಟ ಸಂಘಗಳ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಕಾರ್ಯಾ ಗಾರದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

 ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಾಗಾರ ಮಧ್ಯಾಹ್ನ 12ಗಂಟೆಗೆ ಆರಂಭವಾಗಿರುವುದಕ್ಕೆ ಹಾಗೂ ಎಲ್ಲರೂ ತಡವಾಗಿ ಕಾರ್ಯಕ್ರಮಕ್ಕೆ ಬಂದಿರುವ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಅವರು, `ಸಹಕಾರ ಸಂಘಗಳು ಈಗ ಖಾಸಗಿ ಸಂಸ್ಥೆಗಳ ಜತೆಗೆ ಸ್ಪರ್ಧೆಗೆ ಇಳಿಯುವ ಸಮಯ ಬಂದಿದೆ. ಇಲ್ಲಿ ಸಮಯಪ್ರಜ್ಞೆ ಹಾಗೂ ವೃತ್ತಿಪರತೆಗಳಿದ್ದರೆ ಮಾತ್ರ ಮುಂದೆ ಬರಲು ಸಾಧ್ಯ.ಆದರೆ ಸಹಕಾರ ಸಂಘಗಳಲ್ಲಿ ಇವೆರಡೂ ಇಲ್ಲ ದಂತಾಗಿದೆ.
 
ರಸಗೊಬ್ಬರ ಪೂರೈಕೆಯನ್ನು ವ್ಯವಸ್ಥಿತಗೊಳಿಸಬೇ ಕೆಂಬ ಉದ್ದೇಶದಿಂದ ಕಳೆದ ವರ್ಷ ಎಸ್‌ಎಂಎಸ್ ವ್ಯವಸ್ಥೆ ಜಾರಿ ಗೊಳಿಸಿದ್ದರೆ, ಕೆಲವರು ಪಾಸ್‌ವರ್ಡ್ ಹಾಗೂ ಪಿನ್ ನಂಬರ್‌ಗಳನ್ನೇ ನೆನಪಿಟ್ಟುಕೊಂಡಿಲ್ಲ. ಇಂಥ ಮನಸ್ಥಿತಿ ಯಿಂದ ಸಹಕಾರ ಸಂಘಗಳನ್ನು ಬಲಿಷ್ಠಗೊಳಿಸಲು ಸಾಧ್ಯವಿಲ್ಲ~ ಎಂದರು.

 ಹಾಸನ ಜಿಲ್ಲಾ ಸಹಕಾರ ಯೂನಿಯನ್ ಅಧ್ಯಕ್ಷ ಕಾರ‌್ಲೆ ಇಂದ್ರೇಶ್ ಮಾತನಾಡಿ, ` ಮುಂದಿನ ದಿನಗಳಲ್ಲಿ ರಸಗೊಬ್ಬರಕ್ಕೆ ಬೇಡಿಕೆ ಸಲ್ಲಿಸುವುದು ಸೇರಿದಂತೆ ಎಲ್ಲ ವಿಚಾರಗಳೂ ಆನ್‌ಲೈನ್‌ನಲ್ಲೇ ನಡೆಯಲಿದ್ದು ಈ ಬಗೆಗೂ ಸೂಕ್ತ ತರಬೇತಿ ಪಡೆಯುವುದು ಅಗತ್ಯ~ ಎಂದರು.

 ಎಚ್‌ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸಿ.ಎನ್. ಬಾಲಕೃಷ್ಣ, ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ಆರ್.ಟಿ. ದ್ಯಾವೇಗೌಡಮಾತನಾಡಿದರು.ಇಫ್ಕೋ ಸದಸ್ಯ ಪುಟ್ಟಸ್ವಾಮಿಗೌಡ, ಕೆ.ಟಿ. ಮಂಜುನಾಥ್, ಆರ್.ಬಿ. ಹಾಲಪ್ಪನವರ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.