ಹಳೇಬೀಡು: ಹಳ್ಳಿಗಳೇ ದೇಶದ ಜೀವನಾಡಿ. ಹಳ್ಳಿಗಳ ಉದ್ಧಾರವಾದರೆ ಮಾತ್ರ ದೇಶದ ಉದ್ಧಾರ ಸಾಧ್ಯ ಎಂಬುದು ರಾಜಕಾರಣಿಗಳ ಮಾತಿಗಷ್ಟೆ ಸಿಮೀತವಾದ ತತ್ವಗಳು. ಹಳ್ಳಿಗಳ ಅಭಿವೃದ್ಧಿಗೆ ಕೋಟ್ಯಂತರ ರೂಪಾಯಿ ಹಣ ಬಿಡುಗಡೆಯಾದರೂ ಗ್ರಾಮೀಣ ಪ್ರದೇಶದ ಸ್ಥಿತಿಗತಿ ಸುಧಾರಣೆ ಯಾಗುತ್ತಿಲ್ಲ ಎಂಬುದಕ್ಕೆ ಯಲಹಂಕ ಬ್ಯಾಡರಹಳ್ಳಿ ಗ್ರಾಮ ಸಾಕ್ಷಿ.
ಸಾರಿಗೆ ವ್ಯವಸ್ಥೆಯಿಂದ ವಂಚಿತ ವಾಗಿರುವ ಗ್ರಾಮಸ್ಥರು ಆಸ್ಪತ್ರೆಗಾಗಿ ಹಳೇಬೀಡು ಇಲ್ಲವೆ ಬೇಲೂರಿಗೆ ಹೋಗಬೇಕು. ಗ್ರಾಮದ ಪಕ್ಕದಲ್ಲಿ ಹತ್ತಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇದ್ದರೂ, ಅಲ್ಲಿ ಬೆಳಿಗ್ಗೆ ಮಾತ್ರ ಒಂದು ಬಸ್ಸು ಬರುತ್ತದೆ.
ಹತ್ತಿರದ ಯಲಹಂಕ ಗ್ರಾಮಕ್ಕೂ ಹೆಚ್ಚಿನ ಬಸ್ಸಿನ ಸೌಲಭ್ಯ ಇಲ್ಲ. ಶಾಲಾ ಕಾಲೇಜು ಹಾಗೂ ತುರ್ತು ಕೆಲಸಗಳಿಗೆ ನಗರಗಳಿಗೆ ಹೋಗುವವರು 4ಕಿ.ಮೀ. ದೂರದ ಸಂಕೇನಹಳ್ಳಿ ನಡೆದು ಮುಂದಿನ ಪ್ರಯಾಣ ಬೆಳೆಸುವಂತಾಗಿದೆ.
ಗ್ರಾಮದೊಳಗೆ ಕಾಲಿಟ್ಟ ಕ್ಷಣದಲ್ಲಿಯೇ ಒಂದೆಡೆ ನಿಂತ ಕಲುಷಿತ ನೀರು ಹಾಗೂ ರಸ್ತೆಯಲ್ಲಿ ಹರಿಯು ತ್ತಿರುವ ಕೊಚ್ಚೆಯ ದರ್ಶನವಾಗುತ್ತದೆ. ಕೆಲವೇ ಬೀದಿಗಳಲ್ಲಿ ಮಾತ್ರ ಚರಂಡಿ ಇರುವುದರಿಂದ ಗ್ರಾಮ ಅಕ್ಷರಶಃ ಸೊಳ್ಳೆ, ನೋಣಗಳ ತಾಣವಾಗಿದೆ.
ಪುಟ್ಟ ಕಂದಮ್ಮಗಳು ಕೊಚ್ಚೆ ಪಕ್ಕದಲ್ಲಿ ಆಡುವ ದೃಶ್ಯ ಗ್ರಾಮದಲ್ಲಿ ಕಾಣಸಿಗು ತ್ತದೆ. ಗ್ರಾಮದಲ್ಲಿ 60 ಮನೆಗಳಿದ್ದು, ಕೇವಲ ಹತ್ತು ಮನೆಗಳಲ್ಲಿ ಮಾತ್ರ ಶೌಚಾಲಯ ಇದೆ. ಹೀಗಾಗಿ ಗ್ರಾಮದಲ್ಲಿ ನೈರ್ಮಲ್ಯದ ಕೊರತೆ ಎದ್ದು ಕಾಣುತ್ತದೆ. ಗ್ರಾಮದ ಒಳ ರಸ್ತೆಗಳು ಅಂಕುಡೊಂಕಾಗಿದ್ದು, ಗ್ರಾಮಸ್ಥರು ಎದ್ದು ಬಿದ್ದು ಓಡಾಡುತ್ತಾರೆ. ಮಳೆ ಗಾಲದಲ್ಲಿ ಈ ರಸ್ತೆಗಳು ದಕ್ಷಿಣ ಕನ್ನಡದ ಕಂಬಳ ಗದ್ದೆಯಂತಾಗುತ್ತವೆ.
ಕಿರು ನೀರು ಸರಬರಾಜು ಯೋಜನೆ ಇದ್ದರೂ ಪೈಪ್‌ಲೈನ್ ಅವ್ಯವಸ್ಥೆ ಹಾಗೂ ಟ್ರಾನ್ಸ್‌ಫಾರ್ಮರ್ ತೊಂದರೆ ಯಿಂದ ಆಗಾಗ್ಗೆ ಕುಡಿಯುವ ನೀರಿನ ಸಮಸ್ಯೆ ಕಾಡುತ್ತಿರುತ್ತದೆ. ಮಳೆ ಕೊರತೆಯಿಂದ ಊರಿನ ಮುಂಭಾಗ ದಲ್ಲಿರುವ ಕಲ್ಲು ಬಾವಿಯೂ ಒಣಗಿದೆ. ಪಂಪ್‌ಸೆಟ್‌ಗಳಿಗೆ ಹೋಗಿ ನೀರು ತರಬೇಕಾಗಿದೆ. ಸಮರ್ಪಕವಾಗಿ ಬೆಳಕು ನೀಡುವ ಬೀದಿ ದೀಪಗಳಿಲ್ಲದೆ ರಾತ್ರಿ ವೇಳೆ ಗ್ರಾಮ ಕತ್ತಲೆಯಲ್ಲಿ ಮುಳುಗಿರುತ್ತದೆ.
ಅತಿವೃಷ್ಟಿ, ಅನಾವೃಷ್ಟಿ ಒಂದಲ್ಲ ಒಂದು ಸಮಸ್ಯೆಯಿಂದ ಗ್ರಾಮದ ಪ್ರಮುಖ ಉದ್ಯೋಗ ಕೃಷಿಗೆ ತಡೆಯ ಲಾರದ ಪೆಟ್ಟು ಬಿದ್ದಿದೆ. ಕೃಷಿಯೊಂದಿಗೆ ಹೈನುಗಾರಿಕೆ ಗ್ರಾಮಸ್ಥರಿಗೆ ಜೀವನಾಧಾರ ವೃತ್ತಿಯಾಗಿದೆ. ಹಾಲು ಮಾರಾಟ ಮಾಡಲು ಸಾರಿಗೆ ವ್ಯವಸ್ಥೆ ಇಲ್ಲದೆ ಪರದಾಡುವಂತಾಗಿದೆ. ಗ್ರಾಮ ದಲ್ಲಿ ಡೇರಿ ಆರಂಭಿಸಿದರೆ ಅನುಕೂಲ ಆಗುತ್ತದೆ ಎನ್ನುತ್ತಾರೆ ವಿಶ್ವನಾಥ್.
ಗ್ರಾಮದಲ್ಲಿ ಒಂದು ಸುತ್ತು ತಿರುಗಿದರೆ ಗ್ರಾಮಸ್ಥರು ಸಮಸ್ಯೆಗಳನ್ನು ಹಾಸು ಹೊದ್ದು ಮಲಗಿರುವುದು ಎದ್ದುಕಾಣುತ್ತದೆ. ಒಟ್ಟಾರೆ ಅಭಿವೃದ್ಧಿ ಎಂಬುದು ಗ್ರಾಮಸ್ಥರಿಗೆ ಗಗನ ಕುಸುಮವಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.