ADVERTISEMENT

ಸಮಸ್ಯೆಗಳ ಸುಳಿಯಲ್ಲಿ ಕಟ್ಟೆಸೋಮನಹಳ್ಳಿ

​ಪ್ರಜಾವಾಣಿ ವಾರ್ತೆ
Published 18 ಜನವರಿ 2012, 10:25 IST
Last Updated 18 ಜನವರಿ 2012, 10:25 IST

ಹಳೇಬೀಡು: ಗ್ರಾಮೀಣ ಪ್ರದೇಶದ ಅಭಿವೃದ್ಧಿಗಾಗಿ ಸರ್ಕಾರ ಹಲವಾರು ಯೋಜನೆ ಜಾರಿಗೆ ತಂದರೂ ಹಳ್ಳಿಗಳು ಸೌಲಭ್ಯಗಳಿಂದ ವಂಚಿತ ವಾಗಿವೆ ಎಂಬುದುಕ್ಕೆ ಹಳೇಬೀಡು ಬಳಿಯ ಕಟ್ಟೆಸೋಮನಹಳ್ಳಿ ಗ್ರಾಮ ಸಾಕ್ಷಿಯಾಗಿದೆ.
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಕಲ್ಲು ಮಣ್ಣಿನಿಂದ ಕೂಡಿದ್ದು, ಮಳೆ ಗಾಲದಲ್ಲಿ ಕೆಸರು ಗದ್ದೆಯಾಗುತ್ತದೆ.

ಇಲ್ಲಿಯ ಜನರು ನಗರಗಳಿಗೆ ತೆರಳಲು ಹಳೇಬೀಡು ಇಲ್ಲವೆ ಸಿದ್ದಾಪುರ ಗ್ರಾಮಕ್ಕೆ ಕಾಲ್ನೆಡಿಗೆಯಲ್ಲಿ ತೆರಳಿ ಬಸ್ಸಿನಲ್ಲಿ ಪ್ರಯಾಣಿಸಬೇಕು. ಗ್ರಾಮ ದಿಂದ 1 ಕಿ.ಮೀ ದೂರ ದಲ್ಲಿರುವ ಚಿಲನಾಯ್ಕನಹಳ್ಳಿಯ ಪ್ರಾಚೀನ ಕಾಲದ ತೀರ್ಥಮಲ್ಲಿಕಾರ್ಜುನಾ ಕಲ್ಯಾಣಿಯನ್ನು ಪ್ರವಾಸಿ ತಾಣವಾಗಿ ಮಾರ್ಪಡಿಸಿ ಸಿದ್ದಾಪುರದಿಂದ 2 ಕಿ.ಮೀ ಡಾಂಬರ್ ರಸ್ತೆ ನಿರ್ಮಿಸ ಲಾಗುವುದು ಎಂಬ ರಾಜಕಾರಣಿಗಳ ಭರವಸೆ ವರ್ಷಗಳೂ ಉರುಳಿದರೂ ಈಡೇರಿಲ್ಲ.

ಗ್ರಾಮದಲ್ಲಿದ್ದ 1ರಿಂದ 5ನೇ ತರಗತಿವರೆಗೆ ಮಕ್ಕಳು ಕಲಿಯುತ್ತಿದ್ದ ಸರ್ಕಾರಿ ಪ್ರಾಥಮಿಕ ಶಾಲೆ ದಸರಾ ರಜೆ ನಂತರ ನವೆಂಬರ್‌ನಿಂದ ಸದ್ದಿಲ್ಲದೆ ಮುಚ್ಚಿದೆ. ಶೈಕ್ಷಣಿಕ ವರ್ಷದ ಮಧ್ಯದಲ್ಲಿ ಶಾಲೆ ಮುಚ್ಚಿದ್ದರಿಂದ 6 ಮಕ್ಕಳು ಸಿದ್ದಾಪುರ ಶಾಲೆಗೆ ಪ್ರತಿದಿನ ನಡೆಯುವಂತಾಗಿದೆ. ಬಿಸಿಯೂಟ ಕಟ್ಟಡ, ಶೌಚಾಲಯ ಸೌಲಭ್ಯಗಳನ್ನು ಹೊಂದಿದ್ದ ಸುವ್ಯವಸ್ಥಿವಾದ ಕಟ್ಟಡ ಈಗ ಪಾಳು ಬಿದ್ದಿದೆ. ಶಾಲಾ ಆವರಣದ ಮರ ಗಳಲ್ಲಿರುವ ಹಕ್ಕಿಗಳ ಚಿಲಿಪಿಲಿ ನಾದ ಮಕ್ಕಳಿಗಾಗಿ ಹಾತೋರಿಯುವಂತೆ ಕೇಳುತ್ತದೆ.

ಗ್ರಾಮದಲ್ಲಿರುವ ದಲಿತ ಕುಟುಂಬಗಳಿಗೆ ಸೂರು ದೊರಕದೆ ಖಾಸಗಿಯವರ ಜಮೀನಿನಲ್ಲಿ ಗುಡಿಸಲು ಮಾಡಿಕೊಂಡು ಸುಮಾರು 25 ವರ್ಷದಿಂದ ವಾಸವಾಗಿದ್ದಾರೆ. ನ್ಯಾಯಾಲಯ ಮೆಟ್ಟಿಲು ಹತ್ತಿರುವ ವಿವಾದ ಮಾಲೀಕರ ಪರವಾಗಿ ಇರುವುದರಿಂದ ಕೆಲವರು ಕೆರೆ ಜಾಗದಲ್ಲಿ ಗುಡಿಸಲು ಮಾಡಿ ಕೊಂಡಿದ್ದಾರೆ. ಕೆರೆ ಜಾಗದಲ್ಲಿ ನೀರಿನ ಸೌಲಭ್ಯ ಇಲ್ಲದೆ ಪ್ರತಿದಿನ ದೂರದಿಂದ ಹೊರುವಂತಾಗಿದೆ. ಸೂಕ್ತ ಸ್ಥಳದಲ್ಲಿ ವಸತಿ ಸೌಲಭ್ಯ ಕಲ್ಪಿಸಬೇಕು ಎಂಬುದು ದಲಿತರ ಬೇಡಿಕೆ.

ಗ್ರಾಮದಲ್ಲಿ ಕಿರು ನೀರು ಸರಬರಾಜು ಕೊಳವೆ ಬಾವಿಯಲ್ಲಿ ಸಮೃದ್ಧ ನೀರಿದ್ದರೂ ವಿದ್ಯುತ್ ಸಮಸ್ಯೆಯಿಂದ ಸಮರ್ಪವಾಗಿ ನೀರು ಪೂರೈಕೆಯಾಗುತ್ತಿಲ್ಲ. ಕಿರು ನೀರು ಪಂಪ್‌ಸೆಟ್‌ಗೆ ಪ್ರತ್ಯೇಕ ಟ್ರಾನ್ಸ್‌ಫಾರ್ಮರ್ ಅಳವಡಿಸಿ ಹಳ್ಳಿಗಳಿಗೆ ಸರಬರಾಜು ಮಾಡುವ ವಿದ್ಯುತ್ ಪೂರೈಕೆಯನ್ನು ಒಂದು ಗಂಟೆಯಾದರೂ ಹೆಚ್ಚಳ ಮಾಡಿದರೆ ಅನುಕೂಲವಾಗುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

ತಗ್ಗು ದಿಣ್ಣೆಗಳಿಂದ ಕೂಡಿರುವ ಗ್ರಾಮದ ಒಳ ರಸ್ತೆಗಳನ್ನು ಕಾಂಕ್ರೀಟ್ ರಸ್ತೆಯಾಗಿ ಪರಿವರ್ತಿಸಬೇಕು. ಗ್ರಾಮದ ಎಲ್ಲ ಬೀದಿಗಳಿಗೂ ಚರಂಡಿ ವ್ಯವಸ್ಥೆ ಕಲ್ಪಿಸಿ ತುಂಬಿ ತುಳುಕುತ್ತಿರುವ ಚರಂಡಿ ಸ್ವಚ್ಛತೆಗೆ ಗ್ರಾ.ಪಂ. ಗಮನಹರಿಸಬೇಕು.

ಗ್ರಾಮ ದಲ್ಲಿ ಮುಚ್ಚಿರುವ ಶಾಲೆಯನ್ನು ಪುನಃ ಆರಂಭಿಸಬೇಕು ಎಂಬುದು ಗ್ರಾಮಸ್ಥರ ಬೇಡಿಕೆಯಾಗಿದೆ
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.