ADVERTISEMENT

ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಮನೆ ಆರಂಭ

​ಪ್ರಜಾವಾಣಿ ವಾರ್ತೆ
Published 23 ಮೇ 2012, 6:30 IST
Last Updated 23 ಮೇ 2012, 6:30 IST

ಅರಸೀಕೆರೆ: ತಾಲ್ಲೂಕಿನ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿಯ ಅಮ್ಮ, ಅಜ್ಜಿ ಮತ್ತು ಮಕ್ಕಳ ಮನೆ ತರಗತಿಗಳು ಸೋಮವಾರ ಆರಂಭಗೊಂಡಿವೆ. ಶಿಶು ವಿಹಾರಕ್ಕೆ ಹೋಗುತ್ತಿದ್ದ ಬಹಳಷ್ಟು ಚಿಣ್ಣರು ಮಕ್ಕಳ ಮನೆಗೆ ದಾಖಲಾಗಿದ್ದಾರೆ. ಪಟ್ಟಣವೂ ಸೇರಿದಂತೆ ಹೋಬಳಿ ಮಟ್ಟದ ಸರ್ಕಾರಿ ಶಾಲೆಗಳಲ್ಲಿ ಎಲ್‌ಕೆಜಿ ಮತ್ತು ಯುಕೆಜಿ ಆರಂಭಿಸಿದ್ದು, ಬುಧವಾರದಿಂದ ಪೂರ್ಣ ಪ್ರಮಾಣದಲ್ಲಿ ಎಲ್ಲ ಆರು ಶಾಲೆಗಳಲ್ಲೂ ತರಗತಿಗಳು ಪ್ರಾರಂಭವಾಗಲಿವೆ.   

  ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಮಕ್ಕಳ ಹಾಗೂ ಮಹಿಳಾ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಪಟ್ಟಣದ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಸೋಮವಾರ ಆಯೋಜಿಸಿದ್ದ ಮಕ್ಕಳ ಮನೆ ಕಾರ್ಯಕ್ರಮದಲ್ಲಿ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಮೋಹನ್ ಕುಮಾರ್ ಮಾತನಾಡಿ, ಮಕ್ಕಳ ಮನೆ ವಿನೂತನ ಕಾರ್ಯಕ್ರಮವನ್ನು ರಾಜ್ಯದಲ್ಲಿ ಪ್ರಥಮವಾಗಿ ಪ್ರಾಯೋಗಿಕವಾಗಿ ಹಾಸನ ಜಿಲ್ಲೆಯಲ್ಲಿ ಜಾರಿಗೆ ತಂದಿದೆ ಎಂದರು.

  ಮಕ್ಕಳ ಮನೆ ತರಗತಿಗಳಲ್ಲಿ ಮಕ್ಕಳಿಗೆ ಇಂಗ್ಲಿಷನ್ನು ಪರಿಚಯಿಸಲಾಗುತ್ತದೆ. ಅಜ್ಜಿ ಮನೆ ಕಾರ್ಯಕ್ರಮದಲ್ಲಿ ಮನರಂಜನೆ, ಆಟೋಟಗಳು ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಹೆಚ್ಚು ಒತ್ತು ನೀಡಲಾಗುವುದು ಎಂದರು.

 ಸಿಡಿಪಿಓ ಸತ್ಯನಾರಾಯಣ ಮಾತನಾಡಿದರು. ಕರಗುಂದ ಶಾಲೆಯ ಮುಖ್ಯ ಶಿಕ್ಷಕ ಗಂಗಾಧರಸ್ವಾಮಿ, ಕಸಬಾ ಸಿಇಓ ನಾಗೇಶ್‌ಮೂರ್ತಿ, ಸುರೇಶ್ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಕ್ಯಾತಪ್ಪ, ಎಚ್.ಡಿ. ರವಿಕುಮಾರ್, ಶಿಕ್ಷಕರಾದ ಕಾತ್ಯಾಯಿನಿ, ಬಸವರಾಜ್ ಉಪಸ್ಥಿತರಿದ್ದರು.

ಡಿ.ಎಂಕುರ್ಕೆ: ಖಾಸಗಿ ಶಾಲೆಗಳಲ್ಲಿನ ಎಲ್‌ಕೆಜಿ ಹಾಗೂ ಯುಕೆಜಿಗೆ ಪೂರಕವಾಗಿ ಸರ್ಕಾರಿ ಶಾಲೆಗಳಲ್ಲಿ ಮಕ್ಕಳಿಗೆ ಅಮ್ಮ, ಅಜ್ಜಿ ಮತ್ತು ಮಕ್ಕಳ ಮನೆ ಎಂಬ ವಿನೂತನ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದ್ದು, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಹಾಸನ ಜಿಲ್ಲೆಯಲ್ಲಿ ಜಾರಿಗೊಳಿಸಲಾಗಿದೆ.

ಈ ಶಾಲೆಗೆ ಪೋಷಕ ರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿಸಬೇಕು ಎಂದು ಶಿಕ್ಷಣ ಸಂಯೋಜಕ ಕೃಷ್ಣನಾಯಕ್ ಮನವಿ ಮಾಡಿದರು. ತಾಲ್ಲೂಕಿನ ಡಿ.ಎಂಕುರ್ಕೆ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆ ಆವರಣದಲ್ಲಿ ಸೋಮವಾರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಮಕ್ಕಳ ಮನೆ ಎಂಬ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತದೆ ಎಂದರು. 

  ಗ್ರಾಮ ಪಂಚಾಯಿತಿ ಅಧ್ಯಕ್ಷ ಎಸ್.ಆರ್. ಶಿವಕುಮಾರ್ ಮಾತನಾಡಿದರು. ಬಿ.ಆರ್.ಪಿ ಕುಮಾರಸ್ವಾಮಿ ಅಜ್ಜಿಮನೆ ಮತ್ತು ಮಕ್ಕಳ ಮನೆ ಉದ್ಘಾಟಿಸಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ರವಿಕುಮಾರ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯೆ ಪ್ರಮೀಳಾ ಶಂಕರಲಿಂಗಪ್ಪ, ಮಾಜಿ ಸದಸ್ಯ ಎಂ.ಜಿ.ಲೋಕೇಶ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ದಯಾನಂದ ಸದಸ್ಯ ಮರುಳಪ್ಪ. ಸಿಆರ್‌ಪಿ ವಿಶ್ವಘ್ಞಾಚಾರ್, ಶಿಕ್ಷಕಿ ಎಂ.ಜಿ.ಸುಮ, ಎಲ್‌ಕೆಜಿ ಶಿಕ್ಷಕಿ ಡಿ.ಬಿ. ಗಂಗಮ್ಮ ಉಪಸ್ಥಿತರಿದ್ದರು.

ಹಾರನಹಳ್ಳಿ: ಇಲ್ಲಿನ ಸರ್ಕಾರಿ ಹಿರಿಯ ಮಾಧ್ಯಮಿಕ ಶಾಲೆಯಲ್ಲಿ ಮಕ್ಕಳ ಮನೆ ಶಾಲೆಯನ್ನು  ಗ್ರಾಮ ಪಂಚಾಯಿತಿ ಅಧ್ಯಕ್ಷ ಕರೀಂಸಾಬ್ ಉದ್ಘಾಟಿಸಿದರು.ಮುಖ್ಯ ಶಿಕ್ಷಕಿ ಎಚ್.ಎಲ್ ಪ್ರಭಾಮಣಿ ಮಾತನಾಡಿ ಎಲ್‌ಕೆಜಿ ಮತ್ತು ಯುಕೆಜಿ ತರಗತಿಗಳಿಗೆ 60 ಮಕ್ಕಳು ದಾಖಲಾಗಿದ್ದಾರೆ ಎಂದು ಹೇಳಿದರು. ಶಿಕ್ಷಣ ಸಂಯೋಜಕಿ ನಾಗರತ್ನ, ದೈಹಿಕ ಶಿಕ್ಷಕ ಸಿದ್ದಯ್ಯ ಉಪಸ್ಥಿತರಿದ್ದರು. 

`ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಸೇರಿಸಿ~


ಸಕಲೇಶಪುರ ವರದಿ: ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ಉಚಿತ ಗುಣಮಟ್ಟದ ಶಿಕ್ಷಣ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆಗಳಿದ್ದರೂ ಬಹುತೇಕ ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗೆ ಕಳಿಸುವ ಅಗತ್ಯವೇನು ಎಂಬುದು ಪ್ರಶ್ನೆಯಾಗಿದೆ ಎಂದು ರಕ್ಷಿದಿ ಕ್ಲಸ್ಟ್‌ರ್‌ನ ಸಮೂಹ ಸಂಪನ್ಮೂಲ ವ್ಯಕ್ತಿ ಸಿ.ಎಸ್.ಪುಟ್ಟೇಗೌಡ ಕಳವಳ ವ್ಯಕ್ತಪಡಿಸಿದರು.

ತಾಲ್ಲೂಕಿನ ರಕ್ಷಿದಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 2012-13ನೇ ಶಾಲೆಯ ಶಾಲಾ ಬಲವರ್ಧನೆ ಕಾರ್ಯಕ್ರಮದಲ್ಲಿ `ಮಕ್ಕಳ ಮನೆ~ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಖಾಸಗಿ ಶಾಲೆಗಳು ಸರ್ಕಾರಿ ಶಾಲೆಗಳ ಪೂರ್ವ ಪ್ರಾಥಮಿಕ ಪದ್ದತಿಯನ್ನು ಅನುಕರಣೆ ಮಾಡಿ ಕಾನ್ವೆಂಟ್ ಎಂಬ ಹೆಸರಿನಲ್ಲಿ ಎಲ್‌ಕೆಜಿ, ಯುಕೆಜಿ ನಡೆಸುತ್ತಿದ್ದಾರೆ.

ರಾಜ್ಯ ಸರ್ಕಾರ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಸರ್ಕಾರಿ ಶಾಲೆಗಳಲ್ಲಿ `ಮಕ್ಕಳ ಮನೆ~ ಎಲ್‌ಕೆಜಿ, ಯುಕೆಜಿ ತರಗತಿ ಪ್ರಾರಂಭಿಸಿದೆ. ಉಚಿತ ಶಿಕ್ಷಣ ಖಚಿತ  ಕಲಿಕೆ  ಎಂಬ ಘೋಷಣೆಯೊಂದಿಗೆ ಸರ್ಕಾರ ಜಾರಿಗೆ ತಂದಿರುವ ಈ ಯೋಜನೆಯನ್ನು ಎಲ್ಲಾ ಪೋಷಕರು ಬಳಸಿಕೊಂಡು ತಮ್ಮ ಮಕ್ಕಳನ್ನು ಸಾವಿರಾರು ರೂಪಾಯಿ ಡೊನೇಷನ್ ಕೊಟ್ಟು ಖಾಸಗಿ ಶಾಲೆಗಳಿಗೆ ಸೇರಿಸುವ ಬದಲಿಗೆ ಮಕ್ಕಳ ಮನೆಗೆ ಸೇರಿಸಬೇಕೆಂದು ಕರೆ ನೀಡಿದರು.ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಯೋಗೇಶ್, ಹಾನುಬಾಳು ಸಮೂಹ ಸಂಪನ್ಮೂಲ ವ್ಯಕ್ತಿ ಗೌಡೇಗೌಡ, ಮುಖ್ಯ ಶಿಕ್ಷಕಿ ವಿ.ಸುಶೀಲ ಇದ್ದರು.

`ಗುಣಮಟ್ಟದ ಶಿಕ್ಷಣಕ್ಕೆ ಪೂರಕ~

ಜಾವಗಲ್ ವರದಿ: ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿಸಲು ಮತ್ತು ಗುಣ ಮಟ್ಟದ ಶಿಕ್ಷಣ ನೀಡಲು ಮಕ್ಕಳ ಮನೆ ಕಾರ್ಯಕ್ರಮ ಪೂರಕವಾಗಿದೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಧನಂಜಯ ನುಡಿದರು.
   ಹಾಸನ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತಂದಿರುವ ಎಲ್‌ಕೆಜಿ ಹಾಗು ಯುಕೆಜಿ ತರಗತಿ ಇರುವ ಮಕ್ಕಳ ಮನೆ ಶಾಲೆಗೆ ಪಟ್ಟಣದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಚಾಲನೆ ನೀಡಿ ಮಾತನಾಡಿದರು.

 ಶಾಲಾಭಿವೃದ್ಧಿ ಸಮಿತಿ ಸದಸ್ಯ ಶ್ರೀನಿವಾಸ್‌ಗೌಡ ಅಧ್ಯಕ್ಷತೆ ವಹಿಸಿದ್ದರು.  ತಾಲ್ಲೂಕು ಪಂಚಾಯಿತಿ ಸದಸ್ಯೆ ಲಕ್ಷ್ಮೀರವಿಶಂಕರ್, ಶಿಕ್ಷಣ ಸಂಯೋಜಕ ಯೋಗೀಶ್, ಶಿಕ್ಷಕರಾದ ದಾನೇಗೌಡ, ಸುರೇಶ್, ಮಾತನಾಡಿದರು.
 ಅಂಗನವಾಡಿ ಮೇಲ್ವಿಚಾರಕಿ ಸಿಂಧು, ಮುಖ್ಯ ಶಿಕ್ಷಕ ಶಿವಲಿಂಗಯ್ಯ, ಶಿಕ್ಷಣ ಇಲಾಖೆ ಯೋಗೀಶ್ ನಿವೃತ್ತ ಶಿಕ್ಷಕ ರಾಮಸ್ವಾಮಿ, ಜಗದೀಶ್, ನಾಗರಾಜು ಇದ್ದರು.

`ನೂತನ ಪ್ರಯೋಗಕ್ಕೆ ಉತ್ತಮ ಆರಂಭ~
ಬಾಣಾವರ: ಮಕ್ಕಳ ಮನೆ ಶಾಲೆಗಳು ಗುಣಮಟ್ಟದ ಶಿಕ್ಷಣದಿಂದ ಮಕ್ಕಳನ್ನು ಸಂಸ್ಕಾರವಂತರಾನ್ನಾಗಿ ಮಾಡಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎನ್. ಜಿ.ಬಸವರಾಜು ತಿಳಿಸಿದರು.   ಪಟ್ಟಣದ ಸರ್ಕಾರಿ ಹಿರಿಯ ಬಾಲಕರ ಪ್ರಾಥಮಿಕ ಶಾಲೆಯಲ್ಲಿ ಸೋಮವಾರದಿಂದ ಆರಂಭವಾದ (ಎಲ್‌ಕೆಜಿ ಮತ್ತು ಯುಕೆಜಿ) ತರಗತಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಪೋಷಕರು ಖಾಸಗಿ ಶಾಲೆಗಳ ವ್ಯಾಮೋಹ ತೊರೆದು ಸರ್ಕಾರಿ ಶಾಲೆಗಳಿಗೆ ಮಕ್ಕಳನ್ನು ಸೇರಿಸಬೇಕು. ಎಂದರು. 

  ಸಿಆರ್‌ಪಿ ಉಮೇಶ್ ಮಾತನಾಡಿ,  ಮಕ್ಕಳ ಮನೆ ಶಾಲೆಗೆ 218 ವಿದ್ಯಾರ್ಥಿಗಳು ದಾಖಲಾಗಿರುವುದು ಈ ಯೋಜನೆಯ ಯಶಸ್ಸನ್ನು ಸಾರುತ್ತದೆ ಎಂದು  ತಿಳಿಸಿದರು.ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅಂಬಿಕಾರಮೇಶ್ ಅಧ್ಯಕ್ಷತೆ ವಹಿಸಿದ್ದರು. ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ರವಿಶಂಕರ್ ಕಾರ್ಯಕ್ರಮ ಉದ್ಘಾಟಿಸಿದರು, ಹಿರಿಯೂರು ತಾಲ್ಲೂಕು ಪಂಚಾಯಿತಿ ಸದಸ್ಯ ಬಿ.ಆರ್.ಜಯಣ್ಣ, ಎಪಿಎಂಸಿ ಮಾಜಿ  ಅಧ್ಯಕ್ಷ ಬಿ.ಸಿ.ಶ್ರೀನಿವಾಸ್, ಕೆಡಿಪಿ ಸದಸ್ಯ ಲಿಕ್ಮೀಚಂದ್, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಿ.ವಾಸಪ್ಪ, ಕಾಟಿಕೆರೆ ಪ್ರಸನ್ನಕುಮಾರ್, ರಾಮಕೃಷ್ಣಯ್ಯ, ಗ್ರಾಮ ಪಂಚಾಯಿತಿ ಸದಸ್ಯರಾದ ಬಿ.ಡಿ.ಮಲ್ಲಿಕಣ್ಣ, ಶ್ಯಾಮ್‌ಸುಂದರ್, ಜಿ.ಕೆ.ಸತೀಶ್, ಮಂಜುನಾಥ್, ಮೀನಾಕ್ಷಮ್ಮ, ಜಯಮ್ಮ, ಕರವೇ ಬಿ.ಆರ್.ಲಕ್ಷ್ಮೀಶ್, ಜಯರಾಂ ಇದ್ದರು.
 ಸುನಂದಮ್ಮ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.