ADVERTISEMENT

ಸುಬ್ರಹ್ಮಣ್ಯಸ್ವಾಮಿ ರಥೋತ್ಸವ ನಾಳೆ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2012, 6:00 IST
Last Updated 17 ಡಿಸೆಂಬರ್ 2012, 6:00 IST

ರಾಮನಾಥಪುರ: 17ನೇ ಶತಮಾನದಲ್ಲಿ ದಕ್ಷಿಣ ಕನ್ನಡ ಜಿಲ್ಲೆ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಬಂದು ಇಲ್ಲಿ ನೆಲೆ ನಿಂತು ಅಸಂಖ್ಯಾತ ಭಕ್ತರನ್ನು ಹರಸುತ್ತಿರುವ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿಯ ರಥೋತ್ಸವ ಡಿ.18ರಂದು ನಡೆಯಲಿದೆ. ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಭಾಗವಹಿಸಲು ಭಕ್ತರ ಮಹಾಪೂರವೇ ಹರಿದು ಬರಲಿದೆ.

ತ್ರೇತಾಯುಗದ ಶ್ರೀರಾಮ ಉದ್ದರಿಸಿದ ಈ ಐತಿಹಾಸಿಕ ಗ್ರಾಮದ ಊರಾಚೆ ಹೊರ ಭಾಗದಲ್ಲಿ ಹಾದು ಹೋಗಿರುವ ಕಾವೇರಿ ನದಿ ದಂಡೆ ಮೇಲೆ ಪೌರಾಣಿಕ ಹಿನ್ನೆಲೆ ಹೊಂದಿ ರುವ ಹಲವು ದೇವಸ್ಥಾನಗಳಿವೆ. ಅವುಗಳ ಸಾಲಿನಲ್ಲಿ ಪ್ರಸನ್ನ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಅಗ್ರಸ್ಥಾನ ಪಡೆದಿದೆ. ಅತಿ ಹೆಚ್ಚು ಭಕ್ತರು ಭೇಟಿ ನೀಡುವ ದೇವಸ್ಥಾನ ಸಹ ಇದಾಗಿದೆ.

ಮಾರ್ಗಶಿರ ಮಾಸದಲ್ಲಿ ಚಂಪಾ ಷಷ್ಠಿ ಪ್ರಯುಕ್ತ ನಡೆಯುವ ಮಹಾ ರಥೋತ್ಸವ ಡಿ. 18ರಂದು ಚಾಲನೆ ಪಡೆದುಕೊಳ್ಳಲಿದೆ. ಅಂದು ಪ್ರಾರಂಭವಾಗುವ ಜಾತ್ರೆ ಒಂದು ತಿಂಗಳಿಗೂ ಹೆಚ್ಚು ಕಾಲ ನಡೆಯುತ್ತದೆ. ಬರುವ ಜನವರಿ 17ಕ್ಕೆ ಜರುಗುವ ತುಳುಷಷ್ಠಿ ಮಹಾ ರಥೋತ್ಸವ ಮುಗಿಯುವ ಹೊತ್ತಿಗೆ ಸ್ವಲ್ಪ ಇಳಿಮುಖ ಆದರೂ ದೇವಸ್ಥಾನದಲ್ಲಿ ಹರಕೆ ಸಲ್ಲಿಸಲು ಬರುವ ಭಕ್ತರ ಸಂಖ್ಯೆಯು ಕಡಿಮೆಯಾಗದು.

ಜಾತ್ರೆ ಸಮಯದಲ್ಲಿ ಅಲ್ಲಿ ದೇವಸ್ಥಾನಕ್ಕೆ ಸಂಬಂಧಪಟ್ಟಂತೆ ನೂರಾರು ಪುಸ್ತಕಗಳು ಹಾಗೂ ಈ ಬಾರಿ ದೇವರ ಪ್ರಸಾದದ ವಿಶೇಷ ಮಾರಾಟಕ್ಕೆ ಪ್ರತ್ಯೇಕ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ಉತ್ತರ ಭಾಗದಲ್ಲಿ ಹೊಸಾಳಮ್ಮನವರ ಗುಡಿಯಿದ್ದು ರಥೋತ್ಸವದ ಬಳಿಕ ಪೂಜೆ ಸಲ್ಲಿಸಲಾಗುತ್ತದೆ. ಪ್ರತಿ ವರ್ಷ ನಡೆಯುವ ರಥೋತ್ಸವವು ತಮಿಳುನಾಡು, ಕೇರಳ ಭಾಗದ ಸಾವಿರಾರು ಭಕ್ತರ ಗಮನ ಸೆಳೆಯುತ್ತದೆ. ದೇವಸ್ಥಾನ ಎದುರು ಸುಮಾರು 45 ಅಡಿ ಎತ್ತರದ ಮೆಟ್ಟಿಲು ಮಂಟಪ ಕಟ್ಟಲಾಗಿದೆ. ಇದರ ಸಮೀಪ 35 ಅಡಿ ಎತ್ತರದ ರಥವನ್ನು ನಿಲ್ಲಿಸಿ ಒಂದು ದಿನ ಮುಂಚಿತವಾಗಿ ಸಿಂಗರಿಸಲಾಗುತ್ತದೆ.

ಮೊದಲು ಕುಕ್ಕೆ ಸುಬ್ರಹ್ಮಣ್ಯದಲ್ಲಿ ರಥಾರೋಹಣ ನೆರವೇರಿದ ಬಳಿಕ ಅಲ್ಲಿಂದ ಶುಭ ಸಂದೇಶ ಹೊತ್ತು ಬರುವ ಗರುಡವೊಂದು ಆಕಾಶದಲ್ಲಿ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕವೇ ಇಲ್ಲಿಯ ರಥೋತ್ಸವ ಚಾಲನೆ ಪಡೆಯುತ್ತದೆ. ರಥ ಬೀದಿಯಲ್ಲಿ ಸೇತುವೆ ತನಕ ಚಲಿಸುವ ತೇರು ಪುನ: ಸ್ವಸ್ಥಾನಕ್ಕೆ ಬಂದು ನಿಲ್ಲುತ್ತದೆ. ಭಕ್ತರು ಈಡುಗಾಯಿ ಒಡೆದು ತೇರಿನತ್ತ ಹಣ್ಣು-ಜವನ ಎಸೆಯುವುದು ಸಂಪ್ರದಾಯ.

ಮಾರ್ಗಶಿರ ಮಾಸದ ಚಳಿಯನ್ನು ಲೆಕ್ಕಿಸಿದೇ ವೃದ್ದರು, ಮಹಿಳೆಯರು, ಮಕ್ಕಳು ಕಾವೇರಿ ನದಿಯಲ್ಲಿ ಪವಿತ್ರ ಸ್ನಾನ ಮಾಡಿ ಪೂಜೆ ಸಲ್ಲಿಸುತ್ತಾರೆ. ಕೆಲವರು ಕೇಶಮುಂಡನ ಮಾಡಿಸಿಕೊಂಡು ಹರಕೆ ತೀರಿಸುತ್ತಾರೆ. ರಥೋತ್ಸವ ದಿನಗಳಲ್ಲಿ ಮಾತ್ರ ನಸುಕಿನ 3 ಗಂಟೆ ಹೊತ್ತಿಗೆ ನದಿಯಲ್ಲಿ ಭಕ್ತರ ಸಂಖ್ಯೆ ಗಿಜಿಗುಡುತ್ತದೆ. ನದಿಯ ಮಧ್ಯದಲ್ಲಿ ಮುಕ್ಕಾಲು ಭಾಗ ನೀರಿನಲ್ಲಿ ಮುಳುಗಿರುವ ಗೋಗರ್ಭದ ಕಲ್ಲಿನ ಗುಹೆಯೊಳಗೆ ನುಸುಳಿ ಭಕ್ತರು ಪಾಪ ಕಳೆದುಕೊಳ್ಳುತ್ತಾರೆ. ದೇವಸ್ಥಾನ ಸುತ್ತ ಮೈಲುದ್ದದವರೆಗೆ ಭಕ್ತರ ಸರದಿ ಸಾಲು ನಿಲ್ಲುತ್ತದೆ.

ಒಟ್ಟಾರೆ ತಿಂಗಳಿಗೂ ಹೆಚ್ಚು ಕಾಲ ನಡೆಯುವ ಜಾತ್ರಾ ಮಹೋತ್ಸವಕ್ಕೆ ಲಕ್ಷಾಂತರ ಸಂಖ್ಯೆಯ ಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಈ ವೇಳೆ ಭಕ್ತಿಯ ಪರಾಕಾಷ್ಠೆ, ಪೂಜೆ- ನೈವೇದ್ಯ, ಘಂಟೆಗಳ ನೀನಾದ ಮೊಳಗಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.