ADVERTISEMENT

ಸೌಕರ್ಯದ ನಿರೀಕ್ಷೆಯಲ್ಲಿ ಮಲ್ಲಾಪುರ

ಎಚ್.ಎಸ್.ಅನಿಲ್ ಕುಮಾರ್
Published 26 ಡಿಸೆಂಬರ್ 2012, 6:09 IST
Last Updated 26 ಡಿಸೆಂಬರ್ 2012, 6:09 IST
ಹಳೇಬೀಡು ಬಳಿಯ ಮಲ್ಲಾಪುರ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡದಲ್ಲಿ ಹಾಲಿನ ಡೇರಿ ನಡೆಯುತ್ತಿದೆ.
ಹಳೇಬೀಡು ಬಳಿಯ ಮಲ್ಲಾಪುರ ಗ್ರಾಮದಲ್ಲಿ ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡದಲ್ಲಿ ಹಾಲಿನ ಡೇರಿ ನಡೆಯುತ್ತಿದೆ.   

ಹಳೇಬೀಡು: ಹೊಯ್ಸಳ ಅರಸರ ಕಾಲದಲ್ಲಿ ಮಲ್ಲಯುದ್ದ ಮಾಡುವ ಮಲ್ಲರ ಆಶ್ರಯದ ತಾಣವಾಗಿದ್ದ ಮಲ್ಲಾಪುರ ಐತಿಹಾಸಿಕ ಕುರುವನ್ನು ಇಂದಿಗೂ ತನ್ನಲ್ಲಿ ಅಡಗಿಸಿಕೊಂಡಿದ್ದು, ಗ್ರಾಮದಲ್ಲಿ ಈಗ ಮಲ್ಲರು ಇಲ್ಲದಿದ್ದರೂ ಹೆಸರು ಮಾತ್ರ ಶಾಶ್ವತವಾಗಿ ಉಳಿದಿದೆ. ಗ್ರಾಮದಲ್ಲಿ ಚರಂಡಿ ರಸ್ತೆ ಸಮಸ್ಯೆಯಂಥ ಸಾಕಷ್ಟು ಸಮಸ್ಯೆಗಳು ಎದ್ದು ಕಾಣುತ್ತಿವೆ. ಸರ್ಕಾರದ ಯೋಜನೆಗಳು ಗ್ರಾಮಕ್ಕೆ ತಲುಪುತ್ತಿದ್ದು, ನಮ್ಮ ಸಮಸ್ಯೆಗಳು ಪರಿಹಾರವಾ ಗುತ್ತಿವೆ ಎಂಬ ನೆಮ್ಮದಿ ಅವರಲ್ಲಿ ಮೂಡಿದೆ.

ಗ್ರಾಮದ ಕುಡಿಯುವ ನೀರಿನ ಟ್ಯಾಂಕಿನ ಬಳಿ ಇಂದಿಗೂ ಎತ್ತರವಾದ ಎರಡು ಮಣ್ಣು ಗುಡ್ಡೆಗಳಿದ್ದು, ಅಲ್ಲಿ ಮಲ್ಲರಿಗೆ ತರಬೇತಿ ನೀಡುವ ಗರಡಿಮನೆ ಇತ್ತು ಎಂಬುದಕ್ಕೆ ಕುರುಹುಗಳಿವೆ. ಹೊಯ್ಸಳರ ಪಾಳೆಯಪಟ್ಟಿನಲ್ಲಿದ್ದ ಗ್ರಾಮ ಹಾಳಾದ ನಂತರ ಹೊಸದಾಗಿ ರೂಪಿತವಾಗಿರಬಹುದು ಎಂಬುದು ಗ್ರಾಮದ ವಿದ್ಯಾವಂತರ ಅನಿಸಿಕೆ.

ಹಳೇಬೀಡಿಗೆ ಕೂಗಳತೆಯಲ್ಲಿರುವ ಮಲ್ಲಾಪುರ ಹ್ಯಾಮ್ಲೆಟ್ ಗ್ರಾಮವಾಗಿರುವುದರಿಂದ ಹಳೇಬೀಡಿಗೆ ತಲುಪಿರುವ ಸುವರ್ಣ ಗ್ರಾಮ ಯೋಜನೆಯಲ್ಲಿ ಪಾಲು ಪಡೆದಿದೆ. ಲೋಕಸಭಾ ಸದಸ್ಯರ ಅನುದಾ ನದಲ್ಲಿ ತಳಪಾಯ ಹಾಗೂ ಅರ್ಧದಷ್ಟು ಮಾತ್ರ ಗೋಡೆ ಕೆಲಸ ಆಗಿರುವ ಸಮುದಾಯ ಭವನ ಪೂರ್ಣಗೊಳಿಸಲು ಸುವರ್ಣ ಗ್ರಾಮ ಯೋಜನೆ ಯಿಂದ ರೂ.6 ಲಕ್ಷ ಮಂಜೂರಾಗಿದೆ. ಗ್ರಾಮದ ಒಳ ರಸ್ತೆಗಳ ಡಾಂಬರೀಕರಣಕ್ಕೆ ರೂ.8 ಲಕ್ಷ, ಬಾಕ್ಸ್ ಚರಂಡಿ ನಿರ್ಮಾಣಕ್ಕೆ ರೂ.2ಲಕ್ಷ ಅನುದಾನ ಬಿಡು ಗಡೆಯಾಗಿದೆ. ಯೋಜನೆಯ ಹಣ ಸಮರ್ಪಕವಾಗಿ ಬಳಕೆಯಾದರೆ ಸದ್ಯಕ್ಕೆ ಯಾವುದೇ ತೊಂದರೆ ಇಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಕೆಂದ್ರ ಸರ್ಕಾರದ ಸ್ವಜಲಧಾರ ಯೋಜನೆ ಗ್ರಾಮಕ್ಕೆ ತಲುಪಿದ್ದು ರೂ.8 ಲಕ್ಷ ವೆಚ್ಚದಲ್ಲಿ ನೀರಿನ ಟ್ಯಾಂಕ್ ಹಾಗೂ ಪೈಪ್‌ಲೈನ್ ನಿರ್ಮಾಣವಾಗಿದೆ. ಬರಗಾಲ ಪರಿಸ್ಥಿತಿಯಿಂದ ಕುಡಿಯುವ ನೀರಿನ ಕೊಳವೆ ಬಾವಿ ನಿಂತಿದೆ. ಗ್ರಾಮಸ್ಥರ ಅದೃಷ್ಟಕ್ಕೆ ಹೊಸ ಬಾವಿಯಲ್ಲಿ ನೀರು ಬಂದಿದೆ. ಮಳೆಗಾಲ ಇದೇ ರೀತಿ ಮುಂದುವರೆದರೆ ಕುಡಿಯುವ ನೀರಿನ ತೊಂದರೆ ಆಗುವ ಸಾಧ್ಯತೆ ಇದೆ.

`ಶಾಶ್ವತ ಕುಡಿಯುವ ನೀರಿಗಾಗಿ ಯಗಚಿ ನದಿ ಹಿನ್ನೀರಿನ ಪೈಪ್‌ಲೈನ್ ಕಾಮಗಾರಿ ಶೀಘ್ರದಲ್ಲಿಯೇ ಆಗಬೇಕಾಗಿದೆ. ಡೇರಿ ನಿರ್ಮಾಣಕ್ಕೆ ಗ್ರಾ.ಪಂ.ನಿಂದ ಮಂಜೂರು ಮಾಡಿರುವ ನಿವೇಶನದಲ್ಲಿ ಮಹಿಳಾ ಹಾಲಿನ ಸಹಕಾರ ಸಂಘದ ಕಟ್ಟಡ ನಿರ್ಮಿಸಲು ಅನುದಾನದ ಅಗತ್ಯವಿದೆ' ಎನ್ನುತ್ತಾರೆ ಗ್ರಾ.ಪಂ. ಸದಸ್ಯೆ ಭಾಗ್ಯಾಹುಲೀಗೌಡ.

ಗ್ರಾಮದತ್ತ ಸೌಲಭ್ಯ ಹರಿದೂ ಬಂದರೂ ಕೆಲವೇ ಮನೆಗಳಲ್ಲಿ ಮಾತ್ರ ಶೌಚಾಲಯ ಇದೆ. ಸಾಕಷ್ಟು ಜನರು ಶೌಚಾಲಯ ನಿರ್ಮಿಸಿಕೊಳ್ಳಲು ಅಸಮರ್ಥ ರಾಗಿದ್ದಾರೆ. ಜಿಲ್ಲಾ ಪಂಚಾಯಿತಿ ಗ್ರಾಮಕ್ಕೆ ರಾಷ್ಟ್ರೀಯ ಉದ್ಯೋಗ ಖಾತರಿ ಹಾಗೂ ಸ್ಚಚ್ಚ ನಿರ್ಮಲ ಗ್ರಾಮ ಯೋಜನೆ ಅಡಿಯಲ್ಲಿ ಶೌಚಾಲಯ ನಿರ್ಮಾಣಕ್ಕೆ ಗ್ರಾಮಕ್ಕೆ ಹೆಚ್ಚುಹಣ ಮಂಜೂರು ಮಾಡಿದರೆ ಸ್ವಚ್ಚ ಹಾಗೂ ಮಾದರಿ ಗ್ರಾಮವಾಗಿ ಮಲ್ಲಾಪುರವನ್ನು ನೋಡಬಹುದು ಎಂಬುದು ಗ್ರಾ.ಪಂ. ಸದಸ್ಯ ಗಂಗಾಧರ್ ಅವರ ಅಭಿಪ್ರಾಯ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.