ADVERTISEMENT

ಸೌಲಭ್ಯ ನೀಡಿದ ನಂತರ ಸಂಚಾರ: ಆಗ್ರಹ

​ಪ್ರಜಾವಾಣಿ ವಾರ್ತೆ
Published 22 ಜನವರಿ 2011, 9:05 IST
Last Updated 22 ಜನವರಿ 2011, 9:05 IST

ಹಾಸನ: ನಗರದ ಹೊಸ ಬಸ್ ನಿಲ್ದಾಣದಲ್ಲಿ ವ್ಯಾಪಾರ ವಹಿವಾಟಿಗೆ ವ್ಯವಸ್ಥೆ ಹಾಗೂ ನಾಗರಿಕರಿಗೆ ಸಂಪೂರ್ಣ ಸೌಲಭ್ಯಗಳನ್ನು ಒದಗಿಸಿದ ಬಳಿಕವೇ ವಾಹನಗಳಿಗೆ ಮುಕ್ತಗೊಳಿಸ ಬೇಕು ಎಂದು ಆಗ್ರಹಿಸಿ ಹಳೆಯ ಬಸ್ ನಿಲ್ದಾಣದ ಸುತ್ತಲಿನ ವ್ಯಾಪಾರಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.ಏಕಾಯೇಕಿ ಬಸ್ ನಿಲ್ದಾಣ ಸ್ಥಳಾಂತರದಿಂದ ವರ್ಷಗಳಿಂದ ಇಲ್ಲಿ ವಹಿವಾಟು ನಡೆಸುತ್ತಿದ್ದ ವ್ಯಾಪಾರಿಗಳು, ಆಟೋ, ಟ್ಯಾಕ್ಸಿ ಚಾಲಕರಿಗೆ ತೊಂದರೆಯಾಗಿದೆ. ಪ್ರಯಾಣಿಕರೂ ಸಹ ತೀವ್ರ ಸಂಕಷ್ಟ ಎದುರಿಸಬೇಕಾಗಿದೆ.

ಹಳೆ ಬಸ್ ನಿಲ್ದಾಣದ ಸುತ್ತ ಪ್ರತಿನಿತ್ಯ ಲಕ್ಷಾಂತರ ರೂಪಾಯಿ ವಹಿವಾಟು ನಡೆಯುತ್ತದೆ. ಗ್ರಾಹಕರಿಗೂ ಇದು ಅನುಕೂಲಕರ ಜಾಗ, ಬಸ್ ನಿಲ್ದಾಣ ಸ್ಥಳಂತರದಿಂದ ಇಲ್ಲಿ ಶೇ 70ರಷ್ಟು ವ್ಯಾಪಾರ ಕುಸಿದಿದೆ. ಪ್ರಮುಖ ವ್ಯಾಪಾರ ಕೇಂದ್ರಕ್ಕೆ ಸಂಪರ್ಕ ಇಲ್ಲದೆ ಗ್ರಾಹ ಕರೂ ಸಹ ಪರದಾಡುವಂತಾಗಿದೆ ಎಂದು ಪ್ರತಿಭಟನಾಕಾರರು ನುಡಿದರು.

ಹೊಸ ಬಸ್‌ನಿಲ್ದಾಣದಲ್ಲಿ ಮೂಲಭೂತ ಸೌಕರ್ಯಗಳು ಹಾಗೂ ಸಂಚಾರಕ್ಕೆ ಸರಿಯಾದ ವ್ಯವಸ್ಥೆ ಆಗುವವರೆಗೆ ಹಳೆಯ ಬಸ್ ನಿಲ್ದಾಣದಿಂದಲೇ ಬಸ್ ಓಡಬೇಕು, ಸ್ಥಳಾಂತರದ ಬಳಿಕವೂ ನಗರಸಾರಿಗೆ ಹಾಗೂ ಗ್ರಾಮಾಂತರ ಸಾರಿಗೆ ಬಸ್‌ಗಳನ್ನು ಹಳೆಯ ಬಸ್ ನಿಲ್ದಾಣದಿಂದಲೇ ಓಡಿಸಬೇಕು, ಹಳೆಯ ಬಸ್ ನಿಲ್ದಾಣದಲ್ಲಿ ಈಗ ಇರುವಂತೆಯೇ ವ್ಯಾಪಾರ ನಡೆಸಲು ಅವಕಾಶ ಕೊಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಬೆಳಿಗ್ಗೆ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಬಂದ ಪ್ರತಿಭಟನಾಕಾರರು ಮಧ್ಯಾಹ್ನ ಪುನಃ ಹಳೆ ಬಸ್ ನಿಲ್ದಾಣಕ್ಕೆ ಬಂದು ಅಲ್ಲಿಯೂ ಪ್ರತಿಭಟನೆ ನಡೆಸಿದರು. ಬಳಿಕ ಎನ್.ಆರ್. ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಿ ಎಲ್ಲ ಬಸ್‌ಗಳನ್ನು ಹಳೆಯ ಬಸ್ ನಿಲ್ದಾಣದತ್ತ ತಿರುಗಿಸಲು ಪ್ರಯತ್ನಿಸಿದರು. ಆದರೆ ಇವರನ್ನು ತಡೆದ ಪೊಲೀಸರು ಬಸ್‌ಗಳು ಹೊಸ ಬಸ್ ನಿಲ್ದಾಣಕ್ಕೆ ಹೋಗುವಂತೆ ಮಾಡಿದರು. ಕೊನೆಗೆ ಪುನಃ ಜಿಲ್ಲಾಧಿಕಾರಿ ಕಚೇರಿಗೆ ಬಂದು ಅಧಿಕಾರಿಗೆ ಮನವಿ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.