ADVERTISEMENT

ಹಾಸನ: ಸಾಲಮೇಳಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2013, 8:40 IST
Last Updated 26 ಸೆಪ್ಟೆಂಬರ್ 2013, 8:40 IST

ಹಾಸನ: ‘ದೇಶದ ಆರ್ಥಿಕ ಅಭಿವೃದ್ಧಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್‌ಗಳ ಪಾತ್ರ ಬಹಳ ಮಹತ್ವದ್ದು’ ಎಂದು ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ ಹೇಳಿದರು.
ಜಿಲ್ಲಾ ಪಂಚಾಯ್ತಿ ಹೊಯ್ಸಳ ಸಭಾಂಗಣದಲ್ಲಿ ಕೆನರಾ ಬ್ಯಾಂಕ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ಮಧ್ಯಮ ಮತ್ತು ಸಣ್ಣ ಉದ್ದಿಮೆದಾರು ಹಾಗೂ ಜಂಟಿ ಬಾಧ್ಯತಾ  ಸಮಿತಿಗಳಿಗೆ ಸಾಲ ವಿತರಿಸುವ ‘ಸಾಲ ಮೇಳ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಾಗಿ ಕೋಟ್ಯಂತರ ಮಂದಿ ಸ್ವಾವಲಂಬಿ ಬದುಕು ಕಂಡುಕೊಂಡಿದ್ದಾರೆ. ಆದರೆ ಸಮಾಜದಲ್ಲಿ ಇನ್ನೂ ಬ್ಯಾಂಕಿಂಗ್ ಸೌಲಭ್ಯಗಳು ತಲುಪದೇ ಇರುವ ಸಾವಿರಾರು ಮಂದಿ ಇದ್ದಾರೆ. ಅವರಿಗೂ ಸೌಲಭ್ಯಗಳು ದೊರೆಯಬೇಕು. ಈ ನಿಟ್ಟಿನಲ್ಲಿ ಎಲ್ಲಾ ಬ್ಯಾಂಕ್‌ಗಳು ಶ್ರಮಿಸಬೇಕು’ ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಉಪೇಂದ್ರ ಪ್ರತಾಪ್ ಸಿಂಗ್, ಕೆನರಾ ಬ್ಯಾಂಕ್ ಮೈಸೂರು ಪ್ರಾಂತ್ಯ ಉಪ ಪ್ರಧಾನ ವ್ಯವಸ್ಥಾಪಕ ರಾಮಚಂದ್ರ ಮಾತನಾಡಿದರು.

ಸಾಲ ಮೇಳದಲ್ಲಿ 100ಕ್ಕೂ ಅಧಿಕ ಮಂದಿಗೆ 1.25 ಕೋಟಿ ರೂಪಾಯಿ ಸಾಲದ ಚೆಕ್ ವಿತರಿಸಲಾಯಿತು.
ಕೆನರಾ ಬ್ಯಾಂಕ್ ಹಾಸನ ಮುಖ್ಯ ಶಾಖೆಯ ಮುಖ್ಯ ವ್ಯವಸ್ಥಾಪಕ ಕೆ. ಮಂಜುನಾಥ ಸ್ವಾಗತಿಸಿದರು. ಲೀಡ್ ಬ್ಯಾಂಕ್ ಕಚೇರಿ ಹಿರಿಯ ವ್ಯವಸ್ಥಾಪಕ ಸಿ.ಎಸ್. ಶ್ರೀಕಂಠಸ್ವಾಮಿ ನಿರೂಪಿಸಿದರು. ವಿಭಾಗೀಯ ವ್ಯವಸ್ಥಾಪಕ ಸೋಲಮನ್ ಮನೆಜೆಸ್ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.