ಹಳೇಬೀಡು (ಹಾಸನ ಜಿಲ್ಲೆ): ಕಾಗೇದಹಳ್ಳದ ಮೂಲಕ ದ್ವಾರಸಮುದ್ರ ಕೆರೆಗೆ ಹರಿಸಿದ ಎತ್ತಿನಹೊಳೆ ಯೋಜನೆಯ ನೀರಿನಿಂದ ತಟ್ಟೆಹಳ್ಳಿಯ ಒಡ್ಡಿನಕೆರೆ ಸುತ್ತಲಿನ ಸುಮಾರು 150 ಎಕರೆ ಜಮೀನು ಜಲಾವೃತಗೊಂಡಿದ್ದು, ಮುಸುಕಿನಜೋಳ, ಶುಂಠಿ, ಎಲೆಕೋಸು, ಟೊಮ್ಯಾಟೊ ಬೆಳೆಗೆ ಹಾನಿಯಾಗಿದೆ.
‘ತಟ್ಟೆಹಳ್ಳಿ, ಹುಲಿಕೆರೆ, ರಾಜಗೆರೆ, ಗಿರಿಕಲ್ಲಳ್ಳಿಯ ಸುಮಾರು 50 ರೈತರ ಜಮೀನುಗಳು ಜಲಾವೃತವಾಗಿವೆ. ಕೆರೆಗಳಿಗೆ ನೀರು ತುಂಬಿಸಿದ್ದು ತಪ್ಪಲ್ಲ. ಆದರೆ ಯೋಜನೆ ಅಧಿಕಾರಿಗಳು ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕಾಗಿತ್ತು’ ಎಂದು ರೈತರು ಪ್ರತಿಪಾದಿಸಿದ್ದಾರೆ.
ಸಕಲೇಶಪುರ ತಾಲ್ಲೂಕಿನಲ್ಲಿ ಮಳೆಯಾಗುತ್ತಿದ್ದು, ಎತ್ತಿನಹೊಳೆಯ ಚೆಕ್‌ಡ್ಯಾಂಗಳಲ್ಲಿ ಸಂಗ್ರಹವಾಗಿರುವ ನೀರನ್ನು ಪೈಪ್‌ಲೈನ್ ಮೂಲಕ ಕಾಲುವೆಗೆ ಹರಿಸಲಾಗುತ್ತದೆ. ಆದರೆ, 35 ಕಿ.ಮೀ. ನಂತರ ಕಾಲುವೆಯ ಕಾಮಗಾರಿ ಪೂರ್ಣವಾಗದಿರುವುದರಿಂದ ಕಾಗೇದಹಳ್ಳಕ್ಕೆ ನೀರು ಬಿಡಲಾಗುತ್ತಿದೆ.
‘ಕಾಗೇದಹಳ್ಳದ ಹೂಳು ತೆಗೆಯದೇ ನೀರು ಹರಿಸಿದ್ದು, ಹಳ್ಳದ ಅಕ್ಕಪಕ್ಕದಲ್ಲಿರುವ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿಯಾಗಿದೆ. ನಮ್ಮ ಜಮೀನು ಕೆರೆಯಂತಾಗಿದೆ. ಕೆಸರು ಗದ್ದೆ ಮಾಡಿ ಭತ್ತ ಬೆಳೆಯುವುದಕ್ಕೂ ಸಾಧ್ಯವಿಲ್ಲ. ಜಮೀನಿಗೆ ಇಳಿದರೆ ಕಾಲು ಹೂತುಕೊಳ್ಳುತ್ತಿದೆ’ ಎಂದು ಗ್ರಾಮ ಪಂಚಾಯಿತಿ ಸದಸ್ಯ ಎಚ್.ಪಿ. ಧರ್ಮಪ್ಟ ಅಳಲು ತೋಡಿಕೊಂಡರು.
‘ಹಳ್ಳದಿಂದ ಜಮೀನಿಗೆ ನೀರು ನುಗ್ಗುವುದು ಸದ್ಯಕ್ಕೆ ನಿಂತಿದೆ. ಆದರೆ ಹಳ್ಳದಲ್ಲಿ ನಿರಂತರ ನೀರು ಹರಿಯುತ್ತಿರುವುದರಿಂದ ಜಮೀನುಗಳಲ್ಲಿ ನೀರು ಜಿನುಗುತ್ತಿದೆ. ವೇಗವಾಗಿ ನೀರು ಹರಿದಿದ್ದರಿಂದ ಬೆಳೆಗಳು ನಾಶವಾಗಿವೆ. ಜಮೀನು ಜೌಗು ಪ್ರದೇಶದಂತಾಗಿದ್ದು, ಹೊಸ ಬೆಳೆ ಮಾಡಲು ಸಾಧ್ಯವಾಗುತ್ತಿಲ್ಲ’ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷ ಮೋಹನ್‌ಕುಮಾರ್ ದೂರಿದ್ದಾರೆ.
‘ಅಡಿಕೆ ತೋಟಗಳಲ್ಲಿ ಮಣ್ಣು ಕೊಚ್ಚಿ ಹೋಗಿದೆ. ಜಮೀನಿನ ಕೆಲವು ಭಾಗಕ್ಕೆ ಮರಳು ಬಂದು ನಿಂತಿದೆ. ನೀರು ಹರಿಸುವ ಮೊದಲೇ ತಟ್ಟೆಹಳ್ಳಿ ಭಾಗದ ಹಳ್ಳದಲ್ಲಿ ಹೂಳು ತೆಗೆದಿದ್ದರೆ, ಹೆಚ್ಚಿನ ಹಾನಿಯಾಗುತ್ತಿರಲಿಲ್ಲ’ ಎಂದರು.
‘ಸದ್ಯ ಹಳ್ಳದಲ್ಲಿ ನೀರು ಹರಿಯುವ ವೇಗ ಕಡಿಮೆ ಮಾಡಲಾಗಿದೆ. ಸೀಗೆ ಗುಡ್ಡ, ಬೆಟ್ಟದಾಲೂರು ಭಾಗದಲ್ಲಿ ಜೋರು ಮಳೆ ಸುರಿದರೆ, ಗುಡ್ಡಗಳ ನೀರು ಹಳ್ಳದಲ್ಲಿ ಹರಿಯುತ್ತದೆ. ಎತ್ತಿನಹೊಳೆ ನೀರಿನ ಜೊತೆ ಮಳೆ ನೀರು ಸೇರಿಕೊಂಡರೆ, ಅನಾಹುತವಾಗುವ ಸಾಧ್ಯತೆ ಇದೆ. ನೀರು ನಿಲ್ಲಿಸಿ ಸಂಪೂರ್ಣವಾಗಿ ಹೂಳು ತೆಗೆಯಬೇಕು’ ಎಂದು ರೈತ ಧರ್ಮಪ್ಪ ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.