ADVERTISEMENT

163 ಚೀಲ ಅಕ್ಕಿ, 10 ಚೀಲ ಗೋಧಿ ವಶ

‘ಅನ್ನಭಾಗ್ಯ’ ಯೋಜನೆಯ ಅಕ್ಕಿ ಕಾಳಸಂತೆಯಲ್ಲಿ ಮಾರಾಟ

​ಪ್ರಜಾವಾಣಿ ವಾರ್ತೆ
Published 6 ಜನವರಿ 2014, 5:31 IST
Last Updated 6 ಜನವರಿ 2014, 5:31 IST

ಅರಸೀಕೆರೆ: ‘ಅನ್ನಭಾಗ್ಯ’ ಯೋಜನೆಯ ತಲಾ 50 ಕೆಜಿ ತೂಕದ 163 ಚೀಲ ಅಕ್ಕಿ ಹಾಗೂ 10 ಚೀಲ ಗೋಧಿಯನ್ನು ಕ್ಯಾಂಟರ್‌ ವಾಹನ ಸಮೇತ ಭಾನುವಾರ ಬೆಳಿಗ್ಗೆ ಪಟ್ಟಣದಲ್ಲಿ ಪೊಲೀಸರು ವಶಪಡಿಕೊಂಡಿರುವ ಘಟನೆ ನಡೆದಿದೆ.

ಖಚಿತ ಮಾಹಿತಿ ಮೇರೆಗೆ ನಗರ ಠಾಣೆ ಸಬ್‌ಇನ್‌ಸ್ಪೆಕ್ಟರ್‌ ಲೋಕೇಶ್‌ ಮತ್ತು ಸಿಬ್ಬಂದಿ ಲಕ್ಷ್ಮೀಪುರ ಬಡಾವಣೆ ಯಲ್ಲಿನ ಗೋದಾಮಿನ ದಾಳಿ ನಡೆಸಿದಾಗ ಅಕ್ರಮ ಅಕ್ಕಿ ಪತ್ತೆಯಾಯಿತು.

ಈ ಗೋದಾಮು ಲಕ್ಷ್ಮೀಪುರ ಬಡಾವಣೆಯ ನಿವಾಸಿ ಜಯಣ್ಣ ಎಂಬುವರಿಗೆ ಸೇರಿದೆ. ಈತ ಗೋದಾಮಿನಲ್ಲಿ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ‘ಓಂ ಬ್ರಾಂಡ್‌’ ಹೆಸರಿನ ಮತ್ತೊಂದು ಚೀಲಕ್ಕೆ ಬದಲಾಯಿಸಿ ವ್ಯವಸ್ಥಿತವಾಗಿ ತನ್ನ ಅಂಗಡಿ ಮತ್ತು ಬೇರಡೆ ಮಾರಾಟ ಮಾಡುತ್ತಿದ್ದ ಎಂದು ಹೇಳಲಾಗಿದೆ.

ಪತ್ತೆಯಾಗಿರುವ ಅಕ್ಕಿ ಅನ್ನಭಾಗ್ಯ ಯೋಜನೆಯ ಅಕ್ಕಿ ಎಂದು ಆಹಾರ ಇಲಾಖೆಯ ನಿರೀಕ್ಷಕರು ಧೃಢ ಪಡಿಸಿದ್ದಾರೆ. ಈ ಹಿಂದೆ ಪಟ್ಟಣದಲ್ಲಿ ನಡೆದ ರಾಗಿ ಹಗರಣದಲ್ಲೂ ಜಯಣ್ಣ ಪ್ರಮುಖ ಆರೋಪಿ ಎಂದು ಕೇಳಿ ಬಂದಿತ್ತು. ಅನ್ನಭಾಗ್ಯ ಯೋಜನೆಯ ಅಕ್ಕಿ ಅಕ್ರಮ ಸಂಗ್ರಹ ಮತ್ತು ಮಾರಾಟದ ಆರೋಪದ ಮೇಲೆ ಜಯಣ್ಣ ವಿರುದ್ಧ ಪ್ರಕರಣ ದಾಖಲಾಗಿದೆ.

‘ತಾಲ್ಲೂಕಿನ ನ್ಯಾಯಬೆಲೆ ಅಂಗಡಿಗಳಿಗೆ ಗೋದಾಮಿನಿಂದ ಸರಬರಾಜಾಗುವ ಅಕ್ಕಿ ಚೀಲದಲ್ಲಿ ತೂಕ ವ್ಯತ್ಯಯ ವಾಗುತ್ತಿದೆ. ಆಹಾರ ಸರಬರಾಜು ವ್ಯವಸ್ಥಾಪಕ ಹಾಗೂ ಆಹಾರ ಇಲಾಖೆಯ ಅಧಿಕಾರಿಗಳು ಶಾಮೀಲಾಗಿ ಬಡವರಿಗೆ ಸಿಗಬೇಕಾದ ಅಕ್ಕಿಯನ್ನು ಲಪಟಾಯಿಸುತ್ತಿದ್ದಾರೆ’ ಎಂದು ನ್ಯಾಯಬೆಲೆ ಅಂಗಡಿ ಮಾಲೀಕರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.