ADVERTISEMENT

200 ಟ್ಯಾಕ್ಸಿ ವಿತರಣೆ ಬಾಕಿ

ಸಾಲದ ಮೊತ್ತ ಬಿಡುಗಡೆ ಮಾಡಲು ಬ್ಯಾಂಕ್‌ಗಳಿಗೆ ಡಿಸಿ ಸೂಚನೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2019, 16:41 IST
Last Updated 5 ಜುಲೈ 2019, 16:41 IST
‌ಹಾಸನದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದರು. ‌
‌ಹಾಸನದಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷಾ ಅವರು ಬ್ಯಾಂಕ್‌ ಅಧಿಕಾರಿಗಳ ಸಭೆ ನಡೆಸಿದರು. ‌   

ಹಾಸನ: ಬ್ಯಾಂಕ್‍ಗಳು ಕೇವಲ ಲಾಭಗಳಿಕೆ ಉದ್ದೇಶ ಹೊಂದದೆ ಸೇವಾ ವಲಯವಾಗಿ ಕೆಲಸ ಮಾಡಬೇಕು ಎಂದು ಜಿಲ್ಲಾಧಿಕಾರಿ ಅಕ್ರಂ ಪಾಷಾ ಹೇಳಿದರು.

ಪ್ರವಾಸಿ ಟ್ಯಾಕ್ಸಿಗಳ ವಿತರಣೆಗೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು ವಿವಿಧ ಇಲಾಖೆಗಳಲ್ಲಿ ರೂಪಿಸಿರುವ ಸರ್ಕಾರದ ಯೋಜನೆಗಳ ಅನುಷ್ಠಾನವನ್ನು ಸಕಾಲದಲ್ಲಿ ಜಾರಿಗೊಳಿಸಲು ಬ್ಯಾಂಕ್‍ಗಳು ಅರ್ಹ ಫಲಾನುಭವಿಗಳಿಗೆ ಸಾಲ ಸೌಲಭ್ಯವನ್ನು ನೀಡುವುದರ ಮೂಲಕ ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಬೇಕು ಎಂದು ತಿಳಿಸಿದರು.

ಉದ್ಯೋಗ ಸೃಷ್ಠಿಸುವ ನಿಟ್ಟಿನಲ್ಲಿ ಯುವಕರಿಗೆ ಟ್ಯಾಕ್ಸಿ ಖರೀದಿಗೆ ಸಬ್ಸಿಡಿ ಯೋಜನೆ ರೂಪಿಸಿದೆ. ಆದರೆ, ಬ್ಯಾಂಕ್‍ಗಳು ಸಾಲ ನೀಡಲು ವಿಳಂಬ ಮಾಡುತ್ತಿರುವುದರಿಂದ 2012-13 ರಿಂದ ಈ ವರೆಗೆ 200 ಟ್ಯಾಕ್ಸಿ ವಿತರಣೆ ಬಾಕಿ ಇದೆ. ಈ ಬಗ್ಗೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಗಮನ ಹರಿಸಿ ಎಲ್ಲಾ ಬ್ಯಾಂಕ್ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.

ADVERTISEMENT

ಪ್ರವಾಸೋದ್ಯಮ ಇಲಾಖೆ, ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ, ಅಂಬೇಡ್ಕರ್ ಅಭಿವೃದ್ಧಿ ನಿಗಮಗಳಲ್ಲಿ ಟ್ಯಾಕ್ಸಿ ಖರೀದಿಗೆ ಸಬ್ಸಿಡಿ ನೀಡುವ ಯೋಜನೆಗಳಿವೆ. ಇದಲ್ಲದೆ ನಗರ ಸ್ಥಳೀಯ ಸಂಸ್ಥೆಗಳು ಹಾಗೂ ಇತರ ಇಲಾಖೆಗಳ ಮೂಲಕ ಮ್ಯಾಚಿಂಗ್ ಗ್ರಾಂಟ್ಸ್ ಕೂಡ ನೀಡಲಾಗುವುದು. ಬ್ಯಾಂಕ್‍ಗಳು ಇಲಾಖೆಗಳಿಂದ ಆಯ್ಕೆ ಮಾಡಿ ಕಳುಹಿಸಿದ ಅರ್ಜಿಗಳನ್ನು ಶೀಘ್ರವಾಗಿ ಪರಿಗಣಿಸಿ ಸಾಲದ ಮೊತ್ತ ಬಿಡುಗಡೆ ಮಾಡಬೇಕು ಎಂದರು.

ಪ್ರಮುಖವಾಗಿ ವಿದ್ಯಾರ್ಥಿಗಳ ಆಧಾರ್ ಜೋಡಣೆಯಲ್ಲಿ ಯಾವುದೇ ಸಮಸ್ಯೆಗಳಾಗಬಾರದು. ಈ ನಿಟ್ಟಿನಲ್ಲಿ ಬ್ಯಾಂಕ್‍ಗಳು ವಿವಿಧ ಇಲಾಖೆ ಜೊತೆಗೆ ಸಹಕರಿಸಬೇಕು. ಹೊಸದಾಗಿ ಆಧಾರ್ ಮಾಡಿಸುವವರಿಗೆ ಒಂದು ನಿರ್ದಿಷ್ಟ ದಿನಾಂಕ, ಸಮಯ ನಿಗದಿ ಮಾಡಬೇಕು ಹಾಗೂ ಸಾರ್ವಜನಿಕರಿಗೆ ಯಾವುದೇ ಗೊಂದಲ ಅಥವಾ ಸಮಸ್ಯೆಗಳಾದಂತೆ ಕೆಲಸ ನಿರ್ವಹಿಸಬೇಕು ಎಂದು ಬ್ಯಾಂಕ್‌ಗಳ ವ್ಯವಸ್ಥಾಪಕರು ಹಾಗೂ ನಿರ್ದೇಶಕರಿಗೆ ಜಿಲ್ಲಾಧಿಕಾರಿ ತಿಳಿಸಿದರು.

ಸಭೆಯಲ್ಲಿ ನಗರಸಭೆ ಆಯುಕ್ತ ಪರಮೇಶ್, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಕೃಷ್ಣಮೂರ್ತಿ, ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕ ಬಸವರಾಜ್, ಪ್ರವಾಸೋದ್ಯಮ ಇಲಾಖೆ ಪ್ರಭಾರಿ ಉಪ ನಿರ್ದೇಶಕ ಶಿವಲಿಂಗಪ್ಪ ಎಸ್. ಕುಂಬಾರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.