ADVERTISEMENT

298 ಶಾಲೆಗೆ ‘ಎ’ ಗ್ರೇಡ್

ಎಸ್ಸೆಸ್ಸೆಲ್ಸಿ: ಹಾಸನಕ್ಕೆ ತಪ್ಪಿದ ಪ್ರಥಮ ಸ್ಥಾನ

​ಪ್ರಜಾವಾಣಿ ವಾರ್ತೆ
Published 11 ಆಗಸ್ಟ್ 2020, 13:04 IST
Last Updated 11 ಆಗಸ್ಟ್ 2020, 13:04 IST

ಹಾಸನ: ಎಸ್ಸೆಸ್ಸೆಲ್ಸಿ ಪರೀಕ್ಷೆ ಫಲಿತಾಂಶ ಪಟ್ಟಿಯಲ್ಲಿ ಹಾಸನ 9ನೇ ಸ್ಥಾನಕ್ಕೆ ಕುಸಿದಿರುವ ಕುರಿತು ಚರ್ಚೆ ಶುರುವಾಗಿದ್ದು, ಫಲಿತಾಂಶ ಪ್ರಕಟಣೆಗೆ ಅನುಸರಿಸಿರುವ ವಿಧಾನ ಹಾಗೂ ಕೊರೊನಾ ಹಾವಳಿ ಹಿನ್ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಕಳೆದ ವರ್ಷ ಶೇಕಡಾ 89.75 ಫಲಿತಾಂಶದ ಮೂಲಕ ಪ್ರಥಮ ಸ್ಥಾನ ಉಳಿಸಿಕೊಂಡಿತ್ತು. ಈ ಬಾರಿಯೂ ಫಲಿತಾಂಶ ಪಟ್ಟಿಯಲ್ಲಿ ಮೊದಲ ಸ್ಥಾನ ಕಾಯ್ದುಕೊಳ್ಳಬೇಕೆಂಬ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಸ್ಥಾಯಿ ಸಮಿತಿ ವತಿಯಿಂದ ಸಾಕಷ್ಟು ಕ್ರಮ ಅನುಸರಿಸಲಾಗಿತ್ತು.

ವಿದ್ಯಾರ್ಥಿಗಳಿಗೆ ವಿಶೇಷ ತರಗತಿ ಆಯೋಜಿಸುವುದರ ಜತೆಗೆ ಸಂಜೆ ತರಗತಿಗಳನ್ನು ನಡೆಸಲಾಗುತ್ತಿತ್ತು. ಅಗತ್ಯವಿರುವವರಿಗೆ ವಸತಿಸೌಲಭ್ಯ, ಪಾಲಕರ ಸಭೆಯಂತಹ ವಿಧಾನ ಮೂಲಕ ಫಲಿತಾಂಶವನ್ನು ಇನ್ನಷ್ಟು ಉತ್ತಮಗೊಳಿಸುವ ವಿಶ್ವಾಸದೊಂದಿಗೆ ಅಧಿಕಾರಿಗಳು ಕಾರ್ಯ ನಿರ್ವಹಿಸಿದ್ದರು.

ADVERTISEMENT

ಕೊರೊನಾ ಲಾಕ್‌ಡೌನ್‌ ನಂತರದ ಸೋಂಕಿನ ಹಾವಳಿಯಿಂದ ಶಾಲೆಗಳು, ವಿದ್ಯಾರ್ಥಿಗಳ ನಡುವಿನ ಸಂಪರ್ಕ ಕಡಿತಗೊಂಡಿತ್ತು. ಶಿಕ್ಷಣ ಇಲಾಖೆ, ಜನಪ್ರತಿನಿಧಿಗಳು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ತುಂಬಲು ಸಾಕಷ್ಟು ಯತ್ನ ನಡೆಸಿದರು. ಆದರೆ, ಪೂರ್ವ ಸಿದ್ಧತೆಗಳನ್ನು ಪರಿಶೀಲಿಸಲು ಆಗಲಿಲ್ಲ.

ಜಿಲ್ಲೆಯಲ್ಲಿ 298 ಶಾಲೆಗಳು ‘ಎ’ ಗ್ರೇಡ್‌, 163 ‘ಬಿ’ ಮತ್ತು 58 ಶಾಲೆಗಳು ‘ಸಿ’ ಗ್ರೇಡ್‌ ಪಡೆದುಕೊಂಡಿವೆ.

‘ಈ ವರ್ಷದ ಫಲಿತಾಂಶವನ್ನು ಪ್ರತಿಷ್ಠೆಯ ಪ್ರಶ್ನೆಯಾಗಿ ಸ್ವೀಕರಿಸಬಾರದು. ಕೊರೊನಾ ಭೀತಿ ನಡುವೆ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರೂ ‘ಎ’ಗ್ರೇಡ್‌ ಪಡೆದಿದ್ದೇವೆ. ಅಲ್ಲದೇ ಈ ಬಾರಿ ಫಲಿತಾಂಶ ಪಟ್ಟಿಯಲ್ಲಿ ಸ್ಥಾನ ನಿರ್ಧಾರಕ್ಕೆ ಸರ್ಕಾರ ವಿದ್ಯಾರ್ಥಿಗಳ ಹಾಜರಾತಿ, ಅವರು ಪಡೆದಿರುವ ಸರಾಸರಿ ಅಂಕಗಳನ್ನು ಪರಿಗಣಿಸಿ ಗ್ರೇಡ್‌ ನೀಡಿದೆ. ಇದರಿಂದ ಕೊಂಚ ಹಿನ್ನಡೆ ಆಗಿದೆ’ ಎಂದು ಹೆಸರು ಹೇಳಲು ಇಚ್ಛಿಸದ ಶಿಕ್ಷಣ ಇಲಾಖೆ ಅಧಿಕಾರಿ ತಿಳಿಸಿದರು.

‘ಕೊರೊನಾ ಲಾಕ್‌ಡೌನ್‌ನಿಂದ ಮೂರು ತಿಂಗಳು ವಿದ್ಯಾರ್ಥಿಗಳಿಗೆ ನೇರವಾಗಿ ಪಾಠ ಮತ್ತು ಮಾರ್ಗದರ್ಶನ ನೀಡಲು
ಸಾಧ್ಯವಾಗದ ಕಾರಣ ಫಲಿತಾಂಶ ಕುಸಿದಿದೆ. ಹಾಸನ ‘ಎ’ಗ್ರೇಡ್‌ ಪಡೆಯುವ ಮೂಲಕ ಉತ್ತಮ ಫಲಿತಾಂಶ ಪಡೆದಿದೆ.
ವರ್ಷದ ಆರಂಭದಿಂದಲ್ಲೂ ಬೆಳಿಗ್ಗೆ ವಿಶೇಷ ತರಗತಿ, ಸಂಜೆ ಗುಂಪು ಅಧ್ಯಯನ, 50 ಅಂಶಗಳ ಕ್ರಿಯಾ ಯೋಜನೆ ತಯಾರಿಸಿ, ಅದಕ್ಕೆ ಅನುಗುಣವಾಗಿ ಕೆಲಸ ಮಾಡಿದ್ದೇವೆ’ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಕೆ.ಎಸ್‌.ಪ್ರಕಾಶ್‌ ತಿಳಿಸಿದರು.

ವಿವಿಧ ಶಾಲೆಗೆ ಫಲಿತಾಂಶ ವಿವರ:ಹಾಸನ ಟೈಮ್ಸ್‌ ಇಂಟರ್‌ ನ್ಯಾಷನಲ್‌ ಶಾಲೆಗೆ ಶೇಕಡಾ 100 ಫಲಿತಾಂಶ ಲಭಿಸಿದೆ.36 ವಿದ್ಯಾರ್ಥಿಗಳಲ್ಲಿ 22 ಮಂದಿ ಉನ್ನತ ಶ್ರೇಣಿ, 16 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.

ವಿಜಯ ಆಂಗ್ಲ ಮಾಧ್ಯಮ ಶಾಲೆ ಶೇಕಡಾ 100 ಫಲಿತಾಂಶ ಪಡೆದಿದೆ. ಪರೀಕ್ಷೆ ಬರೆದ 169 ವಿದ್ಯಾರ್ಥಿಗಳಲ್ಲಿ 88
ವಿದ್ಯಾರ್ಥಿಗಳು ಉನ್ನತ ಶ್ರೇಣಿ, 35 ವಿದ್ಯಾರ್ಥಿಗಳು 600 ಅಂಕ ಪಡೆದಿದ್ದಾರೆ. ಕನ್ನಡ ಭಾಷೆಯಲ್ಲಿ 16 ವಿದ್ಯಾರ್ಥಿಗಳು 125ಕ್ಕೆ 125 ಅಂಕ ಪಡೆದು ತೇರ್ಗಡೆಯಾಗಿದ್ದಾರೆ. ಚಿನ್ಮಯಿ, ಕೀರ್ತನ್‌ ಕುಮಾರ್‌, ನಿಧಿ ಪುರುಷೋತ್ತಮ್‌ ತಲಾ 612 ಅಂಕ, ಸಿಂಚನಾ ಕೆ., ಸಮನ್ವಿ ಪಿ ಅವರು ತಲಾ 618 ಪಡೆದು ಶಾಲೆಯ ಕೀರ್ತಿ ಹೆಚ್ಚಿಸಿದ್ದಾರೆ.

ಹುಣಸಿನ ಕೆರೆ ಬಡಾವಣೆಯಲ್ಲಿರುವ ಜಿ.ಎಂ. ಶಾಲೆ ವಿದ್ಯಾರ್ಥಿನಿ ಸಫಾ ಹರ್ಮೈನ್ 625 ಕ್ಕೆ 612 ಅಂಕ ಪಡೆದಿದ್ದಾರೆ.

ಆದರ್ಶ ವಿದ್ಯಾಲಯದ ಎಚ್.ಟಿ.ಯಶ್ವಂತ್‌ 625ಕ್ಕೆ 607 ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾರೆ.

ಕಂದಲಿಯ ಯಗಚಿ ಪ್ರೌಢಶಾಲೆ ಶೇಕಡಾ 93 ಫಲಿತಾಂಶ ಬಂದಿದ್ದು, ಶೀಲಾ 573, ಸಿಂಧು 563 ಹಾಗೂ ಕನ್ನಡದಲ್ಲಿ ನಯನ 125 ಅಂಕ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.