ADVERTISEMENT

5 ಗಂಟೆ ಕಾರ್ಯಾಚರಣೆ: ಶವ ಪತ್ತೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2013, 9:29 IST
Last Updated 20 ಸೆಪ್ಟೆಂಬರ್ 2013, 9:29 IST

ಅರಕಲಗೂಡು: ಗಣಪತಿ ವಿಸರ್ಜನೆ ವೇಳೆ ಕೆರೆಯಲ್ಲಿ ಮುಳುಗಿ ಮೃತಪಟ್ಟಿದ್ದ ಯುವಕನ ಶವವನ್ನು ಐದು ಗಂಟೆಗಳ ಸತತ ಕಾರ್ಯಾಚರಣೆ ಬಳಿಕ ಗುರುವಾರ ಹೊರ ತೆಗೆಯಲಾಯಿತು. ತಾಲ್ಲೂಕಿನ ಮರವಳಲು ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿಯನ್ನು ಮಂಗಳವಾರ ರಾತ್ರಿ 11 ಗಂಟೆ ಸಮಯದಲ್ಲಿ ಗ್ರಾಮದ ಕೆರೆಯಲ್ಲಿ ವಿಸರ್ಜಿಸಲಾಗಿತ್ತು.

ಗಣಪತಿ ವಿಸರ್ಜನೆಗೆಂದು ತೆರಳಿದ್ದ  ಎಂ.ಕೆ. ಮಂಜುನಾಥ (24) ಕಾಣೆಯಾಗಿದ್ದ. ಆತ ಕೆರೆಯಲ್ಲಿ ಮುಳುಗಿರಬಹುದೆಂದು ಶಂಕಿಸಲಾಗಿತ್ತು. ಈತ ಗ್ರಾಮದ ಕಾಳಾಜಿ ಎಂಬುವವರ ಮಗ. ಬುಧವಾರ ಈತನ ಶವಕ್ಕಾಗಿ ಗ್ರಾಮಸ್ಥರು ಹಾಗೂ ಪೊಲೀಸರು ತೀವ್ರ ಶೋಧ ನಡೆಸಿದರೂ ಪತ್ತೆಯಾಗಿರಲಿಲ್ಲ.

ತಹಶೀಲ್ದಾರ್ ಕೆ.ಪಿ. ಈಶ್ವರಪ್ಪ ಸಹ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಗುರುವಾರ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಕೆ.ಆರ್. ನಗರದಿಂದ ಮುಳುಗು ತಜ್ಞರನ್ನು ಶವದ ಶೋಧಕ್ಕಾಗಿ  ಕರೆಸಲಾಗಿತ್ತು. ಬೆಳಿಗ್ಗೆ 8 ಗಂಟೆಗೆ ಈ ತಂಡ, ಮಧ್ಯಾಹ್ನ ಒಂದು ಗಂಟೆ  ವೇಳೆಗೆ ಶವವನ್ನು ಪತ್ತೆ ಹಚ್ಚಿ ಹೊರ ತೆಗೆಯಲು ಯಶಸ್ವಿಯಾಯಿತು.

ಗಣಪತಿ ವಿಸರ್ಜಿಸಲಾದ ಜಾಗದ ಸ್ವಲ್ಪ ದೂರದಲ್ಲೆ ಮಂಜುನಾಥನ ಶವ ಕೆರೆಯ ತಳ ಭಾಗದ ಕೆಸರಿನಲ್ಲಿ ಸಿಲುಕಿಕೊಂಡಿತ್ತು. ಶವ ಹೊರ ತೆಗೆಯುತ್ತಿದ್ದಂತೆ ಪೋಷಕರ ಹಾಗೂ ಬಂಧುಗಳ  ಆಕ್ರಂಧನ ಮುಗಿಲು ಮುಟ್ಟಿತು.

ಬಳಿಕ ಶವವನ್ನು ಅರಕಲಗೂಡಿಗೆ ತಂದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ವಾರಸುದಾರರಿಗೆ ಒಪ್ಪಿಸಲಾಯಿತು.
ಅಗ್ನಿಶಾಮಕ ದಳದ ಅಧಿಕಾರಿ ಜ್ಞಾನಮೂರ್ತಿ, ಪಿ.ಎಸ್.ಐ. ಎಂ. ಎಂ.ಭರತ್, ಕಸಬಾ ಹೋಬಳಿ ರೆವಿನ್ಯೂ ಇನ್ಸ್ ಪೆಕ್ಟರ್ಬಸವರಾಜ್್ ಕಾರ್ಯಾಚರಣೆ ನೇತೃತ್ವ ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT