ADVERTISEMENT

5 ತಿಂಗಳಲ್ಲಿ ಯಗಚಿ ನೀರು ಪೂರೈಕೆ

ಭರದಿಂದ ಸಾಗುತ್ತಿರುವ ಏತ ನೀರಾವರಿ ಕಾಮಗಾರಿ

ಪ್ರಜಾವಾಣಿ ವಿಶೇಷ
Published 27 ಸೆಪ್ಟೆಂಬರ್ 2013, 6:23 IST
Last Updated 27 ಸೆಪ್ಟೆಂಬರ್ 2013, 6:23 IST
ಬೇಲೂರಿನ ಯಗಚಿ ಜಲಾಶಯದಿಂದ ಹಳೇಬೀಡು–ಮಾದಿಹಳ್ಳಿ ಹೋಬಳಿಗಳಿಗೆ ಏತ ನೀರಾವರಿ ಮೂಲಕ ಕುಡಿಯುವ ನೀರು ಹರಿಸಲು ಮಾದಿಹಳ್ಳಿ ಸಮೀಪ ನಿರ್ಮಿಸುತ್ತಿರುವ ಮೇಲ್ಗಾಲುವೆ ಕಾಮಗಾರಿ ಭರದಿಂದ ಸಾಗಿರುವುದು.
ಬೇಲೂರಿನ ಯಗಚಿ ಜಲಾಶಯದಿಂದ ಹಳೇಬೀಡು–ಮಾದಿಹಳ್ಳಿ ಹೋಬಳಿಗಳಿಗೆ ಏತ ನೀರಾವರಿ ಮೂಲಕ ಕುಡಿಯುವ ನೀರು ಹರಿಸಲು ಮಾದಿಹಳ್ಳಿ ಸಮೀಪ ನಿರ್ಮಿಸುತ್ತಿರುವ ಮೇಲ್ಗಾಲುವೆ ಕಾಮಗಾರಿ ಭರದಿಂದ ಸಾಗಿರುವುದು.   

ಬೇಲೂರು:  ಇಲ್ಲಿನ ಯಗಚಿ ಜಲಾಶಯದಿಂದ ತಾಲ್ಲೂಕಿನ ಬಯಲುಸೀಮೆ ಪ್ರದೇಶಗಳಾದ ಹಳೇಬೀಡು–ಮಾದಿಹಳ್ಳಿ ಹೋಬಳಿಗಳ 39 ಕೆರೆಗಳಿಗೆ ಕುಡಿಯುವ ನೀರು ಒದಗಿಸುವ ರೂ 9 ಕೋಟಿ ವೆಚ್ಚದ ಏತ ನೀರಾವರಿ ಕಾಮಗಾರಿ ಭರದಿಂದ ಸಾಗಿದೆ. ಫೆಬ್ರುವರಿ ಅಂತ್ಯದ ವೇಳೆಗೆ ಕಾಮಗಾರಿ ಪೂರ್ಣ­ಗೊಂಡು ನೀರು ಹರಿಸುವ ವಿಶ್ವಾಸವನ್ನು ಯಗಚಿ ಜಲಾಶಯದ ಅಧಿಕಾರಿಗಳು ವ್ಯಕ್ತಪಡಿಸುತ್ತಾರೆ.

ಯಗಚಿ ಜಲಾಶಯದಿಂದ ತಾಲ್ಲೂಕಿನ ಬರಗಾಲ ಪೀಡಿತ ಪ್ರದೇಶಗಳಾದ ಹಳೇಬೀಡು–ಮಾದಿಹಳ್ಳಿ ಹೋಬಳಿಗಳ ಜನರಿಗೆ ನೀರು ಹರಿಸಬೇಕು ಎಂಬ ಬೇಡಿಕೆ ಕಳೆದ 25  ವರ್ಷಗಳಿಂದ ಕೇಳಿ ಬಂದಿದ್ದು, ಹಲವು ಬಾರಿ ಪ್ರತಿಭಟನೆಗಳು ನಡೆದಿದ್ದವು.

ಎಸ್‌.ಎಂ. ಕೃಷ್ಣ ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಕುಡಿಯುವ ನೀರು ಒದಗಿಸಲು ಒಪ್ಪಿಗೆ ದೊರಕಿತಾದರೂ ಯೋಜನೆ ಕಾರ್ಯರೂಪಕ್ಕೆ ಬರಲಿಲ್ಲ. ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಹಾಲಿ ಶಾಸಕ ವೈ.ಎನ್‌. ರುದ್ರೇಶಗೌಡ ತೀವ್ರ ಒತ್ತಡ ಹೇರಿದ ಪರಿಣಾಮ ಈ ಎರಡೂ ಹೋಬಳಿಯ 39 ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ಒಪ್ಪಿಗೆ ನೀಡಿದ ಸರ್ಕಾರ ಹಣ ಬಿಡುಗಡೆ ಮಾಡಿತು.

2012ರ ಆಗಸ್ಟ್‌ 16ರಂದು ಹಳೇಬೀಡು–ಮಾದಿಹಳ್ಳಿ ಏತ ನೀರಾವರಿ ಯೋಜನೆಯ ಕಾಮಗಾರಿ ಆರಂಭಗೊಂಡಿತು. 12 ತಿಂಗಳಲ್ಲಿ ಅಂದರೆ 2013ರ ಆಗಸ್ಟ್‌ಗೆ ಕಾಮಗಾರಿ ಪೂರ್ಣಗೊಳ್ಳಬೇಕಾಗಿತ್ತಾದರೂ ಕೆಲ ತಾಂತ್ರಿಕ ಕಾರಣಗಳಿಂದಾಗಿ ವಿಳಂಬವಾಗಿದೆ. ಇದೀಗ ಗುತ್ತಿಗೆದಾರರು 2014ರ ಫೆಬ್ರವರಿ ಅಂತ್ಯ­ದೊ­ಳಗೆ ಕಾಮಗಾರಿ ಪೂರ್ಣಗೊಳಿಸುವ ವಿಶ್ವಾಸ ಹೊಂದಿ ಕಾಮಗಾರಿಯನ್ನು ಭರದಿಂದ ಕೈಗೊಂಡಿದ್ದಾರೆ.

ಈ ಕಾಮಗಾರಿಯ ಯೋಜನಾ ವೆಚ್ಚ 9 ಕೋಟಿ ರೂಪಾಯಿಗಳಾದರೂ ಗುತ್ತಿಗೆದಾರರು ಶೇಕಡ 15ರಷ್ಟು ದರ ನಮೂದಿಸಿದ್ದರಿಂದ ಇದರ ವೆಚ್ಚ ಈಗ 11.65 ಕೋಟಿ ರೂಪಾಯಿಗೆ ಏರಿದೆ. ಹಾಲ್ತೊರೆ ಸಮೀಪದ ಮುಖ್ಯ ನಾಲೆಯಿಂದ ಜಾಕ್‌ವೆಲ್‌ಗೆ ನೀರು ಹರಿಸಿ ಅಲ್ಲಿಂದ 340 ಎಚ್‌.ಪಿ.ಯ ಮೂರು ಪಂಪ್‌ಗಳ ಮೂಲಕ ನೀರನ್ನು ಮೇಲೆತ್ತಿ 4ಕಿ.ಮೀ. ಉದ್ದದ ಎಡದಂಡೆ ಕಾಲುವೆ ಮೂಲಕ ಹಳೇಬೀಡು ಹೋಬಳಿಯ 17 ಕೆರೆ ಮತ್ತು 13.75 ಕಿ.ಮೀ. ಉದ್ದದ ಬಲದಂಡೆ ಕಾಲುವೆ ಮೂಲಕ ಅಡಗೂರು ಹೋಬಳಿ­ಯ 22 ಕೆರೆಗಳಿಗೆ ನೀರು ಹರಿಸಲಾಗುತ್ತದೆ, ನಾಲೆ ಕಾಮ­ಗಾರಿ ಶೇಕಡ 90ರಷ್ಟು ಪೂರ್ಣಗೊಂಡಿದ್ದು, ಒಟ್ಟಾರೆ ಕಾಮಗಾರಿ ಶೇಕಡ 55ರಷ್ಟು ಪೂರ್ಣಗೊಂಡಿದೆ.

ಮಾದಿಹಳ್ಳಿ ಸಮೀಪ ಅಡಗೂರು, ದಾಸಗೋಡನ­ಹಳ್ಳಿ, ಬೆಟ್ಟದಾಲೂರು ಮತ್ತು ಗೋಣಿಸೋಮನಹಳ್ಳಿ  ಕೆರೆಗಳಿಗೆ ನೀರು ಹರಿಸಲು 1.1 ಕೋಟಿ ರೂ.ವೆಚ್ಚದಲ್ಲಿ ಮಾದಿಹಳ್ಳಿ ಸಮೀಪ ಮೇಲ್ಗಾಲುವೆ ನಿರ್ಮಿಸಲಾ­ಗುತ್ತಿದೆ. 272 ಮೀಟರ್‌ ಉದ್ದದ ಮೇಲ್ಗಾಲುವೆ ಕಾಮಗಾರಿ ಅಂತಿಮ ಹಂತದಲ್ಲಿದೆ. ಏತ ನೀರವಾರಿ ಯೋಜನೆಗೆ 3.5 ಕೋಟಿ ರೂಪಾಯಿ ವೆಚ್ಚದಲ್ಲಿ  340 ಎಚ್‌.ಪಿ.ಯ 3 ಮೋಟಾರ್‌ಗಳನ್ನು ಅಳವಡಿಸ­ಲಾಗುತ್ತಿದ್ದು, ಇವು ಸತತವಾಗಿ ಪ್ರತಿ ದಿನ 16 ಗಂಟೆಗಳ ಕಾಲ ಕಾರ್ಯ ನಿರ್ವಹಿಸುವ ಸಾಮರ್ಥ್ಯ ಹೊಂದಿವೆ. ಪುಣೆಯ ಕಂಪೆನಿಯೊಂದಕ್ಕೆ ಗುತ್ತಿಗೆ ನೀಡಲಾಗಿದೆ. ಎರಡು ತಿಂಗಳಲ್ಲಿ ಪಂಪ್‌ ಅಳವಡಿಸುವ ಕಾರ್ಯ ನಡೆಯಲಿದೆ.

‘ಹಗರೆ ಸಮೀಪದ ಅರಣ್ಯ ಜಮೀನಿನ ಐದು ಹೆಕ್ಟೇರ್‌ ಪ್ರದೇಶದಲ್ಲಿ 1 ಕಿ.ಮೀ. ಉದ್ದದ ನಾಲಾ ಕಾಮಗಾರಿಗೆ ಅಡಿ್ಡಯುಂಟಾಗಿದೆ. ಐದು ಹೆಕ್ಟೇರ್‌ ಪ್ರದೇಶವನ್ನು ಕಂದಾಯ ಇಲಾಖೆಯವರು ಅರಣ್ಯ ಇಲಾಖೆಗೆ ಹಸ್ತಾಂತರಿಸಬೇಕಾಗಿರುವುದರಿಂದ ಈ ಕಾಮಗಾರಿ ಸ್ಥಗಿತಗೊಂಡಿದೆ. ಈ ಕುರಿತು ಜಿಲ್ಲಾಧಿಕಾರಿ­ಗಳೊಂದಿಗೆ ಚರ್ಚಿಸಲಾಗಿದ್ದು, ಸಕಲೇಶಪುರ ಸಮೀಪ ಕಂದಾಯ ಭೂಮಿಯನ್ನು ಅರಣ್ಯ ಇಲಾಖೆಗೆ ಹಸ್ತಾಂತರಿಸುವುದಾಗಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.

ಏತ ನೀರಾವರಿ ಯೋಜನೆಗೆ 80 ಎಕರೆ ಜಮೀನು ಭೂಸ್ವಾಧೀನವಾಗಲಿದೆ. ಈ ಭಾಗದ ರೈತರು ಪರಿಹಾರವನ್ನೇ ಕೇಳಿರಲಿಲ್ಲ. ತಾವೇ ಸ್ವತಃ ಆಸಕ್ತಿ ವಹಿಸಿ ಪರಿಹಾರ ನೀಡುವಂತೆ ಒತ್ತಾಯಿಸಿದ ಬಳಿಕ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲಾಗಿದೆ’ ಎಂದು ಶಾಸಕ ವೈ.ಎನ್‌. ರುದ್ರೇಶ್‌ಗೌಡ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.