ADVERTISEMENT

ಕಣ್ಮನ ಸೆಳೆಯುವ ಉಬ್ಬು ಶಿಲ್ಪಗಳು

ಬಿ.ಪಿ.ಜಯಕುಮಾರ್‌
Published 10 ಫೆಬ್ರುವರಿ 2018, 9:39 IST
Last Updated 10 ಫೆಬ್ರುವರಿ 2018, 9:39 IST
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದ ಚಾವುಂಡರಾಯ ಬಸದಿ
ಶ್ರವಣಬೆಳಗೊಳದ ಚಂದ್ರಗಿರಿಯ ಚಿಕ್ಕಬೆಟ್ಟದ ಚಾವುಂಡರಾಯ ಬಸದಿ   

ಶ್ರವಣಬೆಳಗೊಳ: ಗೊಮ್ಮಟನ ಅಪೂರ್ವ ಶಿಲ್ಪದಂತೆ, ಬಸದಿಯಲ್ಲಿರುವ ತೀರ್ಥಂಕರರ ಮೂರ್ತಿಯಂತೆ ಸುಂದರವಾದ ಉಬ್ಬು ಶಿಲ್ಪಗಳನ್ನು ಕಾಣಬಹುದು. ಇವು ಸಹ ನೋಡುಗರನ್ನು ಆಕರ್ಷಿಸುತ್ತವೆ.

ನಗರದ ಹೊಯ್ಸಳ ನರಸಿಂಹನ ಭಂಡಾರಿ ಹುಳ್ಳಮಯ್ಯ ನಿರ್ಮಿಸಿದ ಭಂಡಾರ ಬಸದಿಯ ನವರಂಗದ ದ್ವಾರದ ಮೇಲೆ ನೃತ್ಯ ಮಾಡುತ್ತಿರುವ ದೇವೇಂದ್ರನ ಶಿಲ್ಪವಿದೆ. ಈ ಶಿಲ್ಪ 12 ಕೈ ಹೊಂದಿದ್ದು, ವಾದ್ಯ ಮೇಳದ ಸುಂದರ ಕೆತ್ತನೆ ಕಾಣಬಹುದು. ದೇವೇಂದ್ರನು ತೀರ್ಥಂಕರರ ಜನನದ ಸುದ್ದಿ ತಿಳಿದ ತಕ್ಷಣ ಅತ್ಯಂತ ಸಂತೋಷದಿಂದ ನರ್ತಿಸುವ ಸಂದರ್ಭ ಇದಾಗಿದೆ. ಇದು ಜೈನಕಾಶಿಯ ಹೊಯ್ಸಳ ಶಿಲ್ಪಗಳಲ್ಲಿಯೇ ಅತ್ಯುತ್ತಮವಾಗಿದೆ. ಇದೇ ಬಸದಿಯ ಸರಸ್ವತಿ ಮಂಟಪದ ಕಂಬದಲ್ಲಿ ಸರಸ್ವತಿಯ ಉಬ್ಬು ಶಿಲ್ಪವಿದ್ದು, ಇದನ್ನು ಕ್ರಿ.ಶ. 1527ರಲ್ಲಿ ಬುಕ್ಕರಾಯನ ಮಗ ದೇವಪ್ಪ ನಿರ್ಮಿಸಿದ ಎಂಬುದು ಶಾಸನದಿಂದ ತಿಳಿದು ಬರುತ್ತದೆ.

ಚಂದ್ರಗಿರಿಯ ಚಾವುಂಡರಾಯ ನಿರ್ಮಿಸಿದ ಚಾವುಂಡರಾಯನ ಬಸದಿಯ ಕಟಾಂಜನದಲ್ಲಿ ಕೆತ್ತಲಾದ ತೀರ್ಥಂಕರರ, ಯಕ್ಷ– ಯಕ್ಷಿಯರ, ಗಂಧರ್ವ ಕಿನ್ನರರ, ಶಾಲಾ ಭಂಜಿಕೆಗಳ ಉಬ್ಬು ಶಿಲ್ಪಗಳು ಗಂಗರ ಕಾಲದ ಅತ್ಯುತ್ತಮ ಶಿಲ್ಪಗಳೆಂದು ಹೇಳಲಾಗಿದೆ.

ADVERTISEMENT

‘ನಸುನಗುತ್ತಿರುವ ಕನ್ಯೆಯೊಬ್ಬಳ ಮುಖದಲ್ಲಿ ಎಲ್ಲರನ್ನೂ ಮುಗ್ಧಗೊಳಿಸುವ ಮತ್ತು ಆಕರ್ಷಿಸುವ ಶಕ್ತಿ ಇದ್ದು, ಅತ್ಯಂತ ಮನೋಹರವಾದ ಉಬ್ಬು ಶಿಲ್ಪವಾಗಿದೆ. ಇದನ್ನು ಚಾವುಂಡರಾಯನ ಪತ್ನಿ ಅಜಿತಾದೇವಿಯ ಶಿಲ್ಪ ಎಂದೂ ಕರೆಯಲಾಗುತ್ತದೆ’ ಎಂದು ಎಸ್‌ಡಿಜೆಎಂಐ ಟ್ರಸ್ಟ್‌ ವ್ಯವಸ್ಥಾಪಕ ರಾಜೇಶ್‌ ಜೈನ್‌ ಶಾಸ್ತ್ರಿ ಹೇಳುತ್ತಾರೆ.

ವಿಂಧ್ಯಗಿರಿ ಬೆಟ್ಟ ಹತ್ತುವಾಗ ಎದುರಾಗುವ ತೋರಣ ದ್ವಾರಗಳಲ್ಲೂ ಷಡ್ಬುಜ ದೇವೇಂದ್ರ ನರ್ತಿಸುತ್ತಿರುವ ಉಬ್ಬು ಶಿಲ್ಪವಿದೆ. ಅಖಂಡ ಬಾಗಿಲಿನ ಮೇಲಿರುವ ಗಜಲಕ್ಷ್ಮಿ ಶಿಲ್ಪವು ತಲಕಾಡಿನ ಗಂಗರ ಶ್ರೇಷ್ಠ ಉಬ್ಬು ಶಿಲ್ಪವೆಂದು ಅಂಕಿತವಾಗಿದೆ. ಅಖಂಡ ಬಾಗಿಲಿನ ಎರಡೂ ಬದಿಯಲ್ಲಿರುವ ಭರತ ಮತ್ತು ಬಾಹುಬಲಿಯರ ಉಬ್ಬು ಶಿಲ್ಪಗಳು ಆಕರ್ಷಿತವಾಗಿವೆ.

ಗೊಮ್ಮಟ ಮೂರ್ತಿಯ ಪ್ರಾಂಗಣದ ಮಹಾದ್ವಾರದ ಭುವನೇಶ್ವರಿಯಲ್ಲಿ ಕಲ್ಯಾಣ ಕಾರ್ಯದಲ್ಲಿ ನಿರತನಾದ ದೇವೇಂದ್ರನ ಶಿಲ್ಪವಿದೆ. ಶ್ರೀಮಠದ ಕಂಬಗಳ ಮೇಲೂ ಶಿಲ್ಪಗಳನ್ನು ಕಾಣಬಹುದು. ಒಂದು ಅಂದಾಜಿನಂತೆ 500ಕ್ಕೂ ಹೆಚ್ಚು ಉಬ್ಬು ಶಿಲ್ಪಗಳು ಶ್ರವಣಬೆಳಗೊಳದಲ್ಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.