ADVERTISEMENT

61 ಸಾವಿರ ಯುವ ಮತದಾರರ ನೋಂದಣಿ ಗುರಿ

ಮತದಾರರ ಪಟ್ಟಿ ಪರಿಷ್ಕರಣೆ ಸಭೆಯಲ್ಲಿ ಡಿಸಿ ಗಿರೀಶ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 6 ನವೆಂಬರ್ 2019, 19:45 IST
Last Updated 6 ನವೆಂಬರ್ 2019, 19:45 IST
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಅಧಿಕಾರಿಗಳ ಸಭೆ ನಡೆಸಿದರು.‌
ಹಾಸನ ಜಿಲ್ಲಾಧಿಕಾರಿ ಆರ್‌.ಗಿರೀಶ್‌ ಅವರು ಅಧಿಕಾರಿಗಳ ಸಭೆ ನಡೆಸಿದರು.‌   

ಹಾಸನ: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳದ ಅರ್ಹ ಯುವ ಮತದಾರರನ್ನು ಗುರುತಿಸಿ ನೋಂದಾಯಿಸುವ ಪ್ರಕ್ರಿಯೆ ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ಹೇಳಿದರು.

ಮತದಾರ ಪಟ್ಟಿ ನೋಂದಣಿ ಮತ್ತು ಪರಿಷ್ಕರಣೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಚುನಾವಣಾ ಆಯೋಗ ಜಿಲ್ಲೆಯಲ್ಲಿ 61 ಸಾವಿರ ಯುವ ಹೊಸ ಮತದಾರರನ್ನು ಸೇರ್ಪಡೆಗೊಳಿಸಲು ಸೂಚಿಸಿದ್ದು, ಈಗಾಗಲೇ 25,481 ಹೊಸ ಮತದಾರರನ್ನು ನೋಂದಣಿ ಮಾಡಲಾಗಿದೆ ಎಂದು ತಿಳಿಸಿದರು.

ನಗರದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಕುರಿತು ಅರಿವು ಮೂಡಿಸುವ ಜೊತೆಗೆ 18 ವರ್ಷ ಮೇಲ್ಪಟ್ಟವರನ್ನು ಮತದಾರರ ಟ್ಟಿಗೆ ಸೇರ್ಪಡೆಗೊಳಿಸಲು ಪ್ರಾಂಶುಪಾಲರು ಸಹಕರಿಸಬೇಕು. ಸ್ವೀಪ್ ಸಮಿತಿಗಳು ಸಹ ಎಲ್ಲಾ ಕಾಲೇಜುಗಳಲ್ಲಿ ಮತದಾರರ ಜಾಗೃತಿ ಚಟುವಟಿಕೆಗಳನ್ನು ನಡೆಸಬೇಕು ಎಂದು ಸೂಚಿಸಿದರು.

ADVERTISEMENT

2020 ರ ಜನವರಿಗೆ 18 ವರ್ಷ ತುಂಬುವ ವಿದ್ಯಾರ್ಥಿಗಳನ್ನು ಆಯಾ ಕಾಲೇಜಿನಲ್ಲೆಯೇ ನೋಂದಣಿ ಮಾಡಿಸಿ, ಬಿ.ಎಲ್.ಓ.ಗಳಿಗೆ ಪಟ್ಟಿಯನ್ನು ಸಲ್ಲಿಸುವಂತೆ ಕಾಲೇಜುಗಳ ಪ್ರಾಂಶುಪಾಲರುಗಳಿಗೆ ಡಿಸಿ ನಿರ್ದೇಶನ ನೀಡಿದರು.

ಜಿಲ್ಲೆಯಲ್ಲಿ ಒಟ್ಟು 16 ಲಕ್ಷ ಮತದಾರರಿದ್ದು, 13.50 ಲಕ್ಷ ಮತದಾರರ ಪಟ್ಟಿ ಪರಿಷ್ಕರಣೆಯಾಗಿದ್ದು, ನ.18 ರ ಒಳಗೆ ಎಲ್ಲವನ್ನೂ ಪೂರ್ಣಗೊಳಿಸುವಂತೆ ಅಧಿಕಾರಿಗಳಿಗೆ ಹೇಳಿದರು.

ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮತದಾನ ಜಾಗೃತಿ ಚಟುವಟಿಕೆ ಏರ್ಪಡಿಸಲಾಗುವುದು. ತರಗತಿಗಳಲ್ಲಿ ಮತದಾನ ಕುರಿತು ವಿಶೇಷ ಮಾಹಿತಿ ನೀಡುವ ಪ್ರಕ್ರಿಯೆ ನಡೆಸಬೇಕು. ಕಾಲೇಜುಗಳಿಂದ ಭರ್ತಿ ಮಾಡಿಸಿ ಸಲ್ಲಿಸಿದ ಅರ್ಜಿಗಳನ್ನು ಆಯಾ ತಾಲ್ಲೂಕುಗಳಿಗೆ ಕಳುಹಿಸಲಾಗುವುದು ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕವಿತ ರಾಜರಾಂ ಮಾತನಾಡಿ, ಮತದಾರರ ನೋಂದಣಿ ಜೊತೆಗೆ ಪರಿಷ್ಕರಣೆಯೂ ನಡೆಯುತ್ತಿದ್ದು, ಹೊಸ ಮತದಾರರು ಹೆಸರು, ವಿಳಾಸ ಸೇರಿದಂತೆ ಇತರ ಮಾಹಿತಿಗಳು ತಪ್ಪಾಗಿ ಉಲ್ಲೇಖಗೊಂಡಿದ್ದಲ್ಲಿ ಪರಿಶೀಲನೆ ನಡೆಸಿ ಸರಿಯಾದ ಮಾಹಿತಿ ನಮೂದಿಸುವ ಪ್ರಕ್ರಿಯೆ ಆಗಬೇಕಿದೆ ಎಂದು ನುಡಿದರು.

2021ರ ಸಾಲಿಗೆ 18 ವರ್ಷ ತುಂಬುವ ವಿದ್ಯಾರ್ಥಿಗಳನ್ನು ಸಹ ಗುರುತಿಸುವ ಪ್ರಕ್ರಿಯೆ ಮಾಡಬೇಕು. ಪ್ರಸಕ್ತ ಸಾಲಿನಲ್ಲಿ ಪ್ರಥಮ, ದ್ವಿತೀಯ ಪಿಯುಸಿ ಕಲಿಯುತ್ತಿರುವ ಹಾಗೂ ಕಳೆದ ವರ್ಷ ದ್ವಿತೀಯ ಪಿಯುಸಿ ಪೂರೈಸಿದ ವಿದ್ಯಾರ್ಥಿಗಳ ಕುರಿತು ಆಯಾಯ ಕಾಲೇಜು ಪ್ರಾಂಶುಪಾಲರು ಮಾಹಿತಿ ನೀಡುವಂತೆ ಅವರು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಮಹೇಶ್, ತಹಶೀಲ್ದಾರ್ ಮೇಘನ, ವಾರ್ತಾಧಿಕಾರಿ ವಿನೋದ್ ಚಂದ್ರ, ಚುನಾವಣಾ ತಹಶೀಲ್ದಾರ್ ಪದ್ಮನಾಭಶಾಸ್ತ್ರಿ, ನಗರದ ಪದವಿ ಪೂರ್ವ ಹಾಗೂ ಪದವಿ ಕಾಲೇಜುಗಳ ಪ್ರಾಂಶುಪಾಲರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.