ADVERTISEMENT

ಪೊಲೀಸ್ ಸರ್ಪಗಾವಲು: 65 ಮಂದಿ ಬಂಧನ

ಸಹಜ ಸ್ಥಿತಿಗೆ ಮರಳಿದ ಹಿಮತ್‌ ಸಿಂಗ್ ಕಾ ಕಾರ್ಖಾನೆ

​ಪ್ರಜಾವಾಣಿ ವಾರ್ತೆ
Published 25 ಜುಲೈ 2019, 19:49 IST
Last Updated 25 ಜುಲೈ 2019, 19:49 IST
ಹಾಸನದ ಹಿಮತ್‌ ಸಿಂಗಾ ಕಾ ಕಾರ್ಖಾನೆಯ ಕಾರ್ಮಿಕರನ್ನು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಕರೆತರಲಾಯಿತು.
ಹಾಸನದ ಹಿಮತ್‌ ಸಿಂಗಾ ಕಾ ಕಾರ್ಖಾನೆಯ ಕಾರ್ಮಿಕರನ್ನು ಪೊಲೀಸ್‌ ವರಿಷ್ಠಾಧಿಕಾರಿ ಕಚೇರಿಗೆ ಕರೆತರಲಾಯಿತು.   

ಹಾಸನ: ಕಾರ್ಮಿಕರ ಹಿಂಸಾತ್ಮಕ ಪ್ರತಿಭಟನೆಯಿಂದಾಗಿ ಬುಧವಾರ ಅಕ್ಷರಶಃ ರಣಾಂಗಣವಾಗಿದ್ದ ಕೈಗಾರಿಕಾ ಪ್ರದೇಶದಲ್ಲಿರುವ ಹಿಮತ್ ಸಿಂಗ್ ಕಾ ಕಾರ್ಖಾನೆ ಆವರಣ ಗುರುವಾರ ಸಹಜ ಸ್ಥಿತಿಯತ್ತ ಮರಳಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ಕಾರ್ಖಾನೆ ಮುಂಭಾಗ ಬಿಗಿ ಪೊಲೀಸ್ ಬಂದೋಬಸ್ತ್ ಮುಂದುವರಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ 65 ಜನರನ್ನು ಬಂಧಿಸಲಾಗಿದೆ. ಕಲ್ಲು ತೂರಾಟದಲ್ಲಿ ಗಾಯಗೊಂಡಿದ್ದ 7 ಮಂದಿ ಪೊಲೀಸರು ಚೇತರಿಸಿಕೊಳ್ಳುತ್ತಿದ್ದಾರೆ.

ಮತ್ತೊಂದೆಡೆ ಕಾರ್ಮಿಕ ಇಲಾಖೆ ಅಧಿಕಾರಿಗಳೂ ಕಾರ್ಮಿಕರು ಮತ್ತು ಕಾರ್ಖಾನೆ ಆಡಳಿತ ಮಂಡಳಿಯ ವಿಚಾರಣೆ ನಡೆಸಿದರು. ದಿಢೀರ್ ನಡೆದ ಹಿಂಸಾಚಾರಕ್ಕೆ ನಿಜವಾದ ಕಾರಣ? ಆಡಳಿತ ಮಂಡಳಿ ಲೋಪದ ಕುರಿತು ಮಾಹಿತಿ ಕಲೆ ಹಾಕಿದ್ದಾರೆ.

ADVERTISEMENT

ಕಾರ್ಖಾನೆ ಆಡಳಿತ ಮಂಡಳಿಯ ಸದಸ್ಯರನ್ನು ತಮ್ಮ ಕಚೇರಿಗೆ ಕರೆಸಿಕೊಂಡು, ‘ಈ ರೀತಿಯ ಘಟನೆ ಮರುಕಳಿಸದಂತೆ ಎಲ್ಲಾ ರೀತಿಯ ಎಚ್ಚರ ವಹಿಸುವಂತೆ’ ಜಿಲ್ಲಾಧಿಕಾರಿ ಅಕ್ರಂ ಪಾಷ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕಾರ್ಖಾನೆಯಲ್ಲಿ ವೇತನ ಸಮಸ್ಯೆ ಇದೆ ಎಂಬ ದೂರಿಗೆ ಸಂಬಂಧಿಸಿದಂತೆ ಕಾರ್ಮಿಕ ಮತ್ತು ಕೈಗಾರಿಕೆ ಇಲಾಖೆಗಳ ಅಧಿಕಾರಿಗಳು ಪರಿಶೀಲಿಸಿದ್ದು, ಆ ರೀತಿಯ ಯಾವುದೇ ತೊಂದರೆ ಇಲ್ಲ ಎಂದು ಹೇಳಿದ್ದಾರೆ. ಕೆಲ ಕಾರ್ಮಿಕರಿಗೆ ಎಚ್.ಆರ್. ವಿಭಾಗದ ಕೆಲವರಿಂದ ತೊಂದರೆಯಾಗಿದೆ ಎಂಬ ಮಾಹಿತಿ ಇದೆ. ಇದನ್ನು ಮನಗಂಡು ಪೊಲೀಸರು, ಜಿಲ್ಲಾಡಳಿತ, ಕೈಗಾರಿಕೆ ಮತ್ತು ಕಾರ್ಮಿಕ ಇಲಾಖೆ ಅಧಿಕಾರಿಗಳನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ಪಾಷಾ ಹೇಳಿದರು.

ಕಲ್ಲು ತೂರಾಟದಲ್ಲಿ ಗಾಯಗೊಂಡಿರುವ ಪೊಲೀಸರು ಅಪಾಯದಿಂದ ಪಾರಾಗಿದ್ದಾರೆ. ಜಖಂ ಆಗಿರುವ ಪೊಲೀಸರು ಹಾಗೂ ಪತ್ರಕರ್ತರ ಕಾರು-ಬೈಕ್ ಗಳನ್ನು ರಿಪೇರಿ ಮಾಡಿಸಲು ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು.

ಕಾರ್ಮಿಕ ಇಲಾಖೆಯ ವಿಭಾಗೀಯ ಅಧಿಕಾರಿ ಇಡೀ ಪ್ರಕರಣದ ಬಗ್ಗೆ ತನಿಖೆ ನಡೆಸುತ್ತಿದ್ದು, ಶೀಘ್ರ ವರದಿ ಕೈ ಸೇರಲಿದೆ. ಘಟನೆಗೆ ಬೇರೆ ಯಾವುದಾದರೂ ಕಾರಣ ಇದ್ದರೆ ಅದರ ಬಗ್ಗೆಯೂ ಕ್ರಮ ವಹಿಸಲಾಗುವುದು ಎಂದರು.

ಕಾರ್ಮಿಕರು ಏಕಾಏಕಿ ಕೆರಳಲು ಆಡಳಿತ ಮಂಡಳಿಯ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯೇ ಕಾರಣ ಎಂಬ ಆರೋಪವೂ ಕೇಳಿ ಬಂದಿದೆ. ಈ ಹಿಂದೆ ಕಾರ್ಖಾನೆ ಒಳಗೆ ಹಲ್ಲೆಯಂಥ ಅನೇಕ ಅಹಿತಕರ ಘಟನೆಗಳು ನಡೆಸಿದ್ದರೂ, ಅವುಗಳನ್ನು ಮುಚ್ಚಿ ಹಾಕಲಾಗಿದೆ. ಈ ಬಗ್ಗೆ ಸಂಬಂಧಪಟ್ಟ ಪೊಲೀಸರಿಗೂ ದೂರು ನೀಡಿಲ್ಲ ಎಂದು ಸ್ಥಳೀಯರು ಆರೋಪಿಸುತ್ತಾರೆ.

ಈ ಎಲ್ಲಾ ಕಾರಣಗಳಿಂದ ಕಾರ್ಮಿಕರು ಹೀಗೆ ಮಾಡಿದ್ದಾರೆ ಎಂಬ ಮಾತುಗಳೂ ಕೇಳಿ ಬರುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.