ಅರಕಲಗೂಡು: ‘ದೊಡ್ಡಬೆಮ್ಮತ್ತಿ ಮತ್ತು ಸುತ್ತಮುತ್ತಲ ಗ್ರಾಮಗಳ ಕೆರೆ, ಕಟ್ಟೆಗಳಿಗೆ ಕಟ್ಟೆಪುರ ಎರಡನೇ ಹಂತದ ನೀರಾವರಿ ಯೋಜನೆಯಲ್ಲಿ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಶಾಸಕ ಎ. ಮಂಜು ತಿಳಿಸಿದರು.
ತಾಲ್ಲೂಕಿನ ಮಲ್ಲಿಪಟ್ಟಣ ಹೋಬಳಿ ದೊಡ್ಡಬೆಮ್ಮತ್ತಿ ಗ್ರಾಮದ ದಲಿತ ಕಾಲೋನಿಯಲ್ಲಿ ಭಾನುವಾರ ಗ್ರಾಮ ವಾಸ್ತವ್ಯದ ಪ್ರಯುಕ್ತ ಏರ್ಪಡಿಸಿದ್ದ ಸಭೆಯಲ್ಲಿ ಮಾತನಾಡಿ, ‘ತಾವು ಸಚಿವರಾಗಿದ್ದ ವೇಳೆ ಕೊಣನೂರು ಮತ್ತು ಕಣಿಯಾರು ಏತನೀರಾವರಿ ಯೋಜನೆಗಳಿಗೆ ಮುಂಗಡ ಪತ್ರದಲ್ಲಿ ಒಪ್ಪಿಗೆ ಪಡೆಯಲಾಗಿತ್ತು. ನಂತರದ ದಿನಗಳಲ್ಲಿ ಇದನ್ನು ಕೈಬಿಡಲಾಗಿತ್ತು. ಈಗ ಸರ್ಕಾರ ₹77 ಕೋಟಿ ಅನುದಾನ ನೀಡಿದ್ದು, 2026ರಲ್ಲಿ ಈ ಭಾಗದ ಕೆರೆಕಟ್ಟೆಗಳಿಗೆ ನೀರು ಹರಿಸಲಾಗುವುದು’ ಎಂದರು.
‘ಅಲ್ಲಾ ಪಟ್ಟಣದ ಗ್ರಾಮದ ಬಳಿ ₹180 ಕೋಟಿ ವೆಚ್ಚದಲ್ಲಿ 220 ಕೆವಿ ವಿದ್ಯುತ್ ಸ್ವೀಕರಣಾ ಕೇಂದ್ರ ತೆರೆಯಲಾಗುತ್ತಿದೆ. ಅಲ್ಲದೆ ಕೇರಾಳಾಪುರ, ಗುಡ್ಡನಕೊಪ್ಪಲು, ಸಿದ್ದಾಪುರ ಗೇಟ್, ಸಂತೆಮರೂರಲ್ಲಿ 66 ಕೆವಿ ವಿದ್ಯುತ್ ವಿತರಣಾ ಕೇಂದ್ರಗಳನ್ನು ತೆರೆಯಲು ಕ್ರಮ ಕೈಗೊಂಡಿದ್ದು ಇವು ಕಾರ್ಯಾರಂಭಗೊಂಡರೆ ತಾಲ್ಲೂಕಿನಲ್ಲಿ ವಿದ್ಯುತ್ ಸಮಸ್ಯೆ ಇರುವುದಿಲ್ಲ’ ಎಂದರು.
‘ಸ್ಮಶಾನ, ಸರ್ಕಾರಿ ಶಾಲೆಯಲ್ಲಿ ಶೌಚಾಲಯ ವ್ಯವಸ್ಥೆ ಸೇರಿದಂತೆ ಗ್ರಾಮಸ್ಥರ ಹಲವು ಸಮಸ್ಯೆಗಳ ಕುರಿತು ಪರಿಶೀಲಿಸಿ ತುರ್ತಾಗಿ ಕ್ರಮ ಕೈಗೊಳ್ಳವಂತೆ ಅಧಿಕಾರಿಗಳಿಗೆ ಸೂಚಿಸಿದರು. ಪ್ರತಿ ವರ್ಷ ಅಂಬೇಡ್ಕರ್ ಜಯಂತಿ ಹಿಂದಿನ ದಿನ ದಲಿತರ ಮನೆಯಲ್ಲಿ ಗ್ರಾಮ ವಾಸ್ತವ್ಯ ನಡೆಸುವುದನ್ನು ಹಲವಾರು ವರ್ಷಗಳಿಂದ ಪಾಲಿಸಿಕೊಂಡು ಬರುತ್ತಿದ್ದು ಈ ಬಾರಿ ಗ್ರಾಮದ ಸೋಮಣ್ಣ ಅವರ ಮನೆಯಲ್ಲಿ ವಾಸ್ತವ್ಯ ಕೈಗೊಂಡಿರುವುದಾಗಿ’ ಹೇಳಿದರು.
ತಹಶೀಲ್ದಾರ್ ಕೆ.ಸಿ.ಸೌಮ್ಯ, ತಾಪಂ ಇಒ ಪ್ರಕಾಶ್, ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು. ಗ್ರಾಮ ವಾಸ್ತವ್ಯಕ್ಕೆ ಆಗಮಿಸಿದ ಶಾಸಕರಿಗೆ ಗ್ರಾಮಸ್ಥರು ಸಂಭ್ರಮದ ಸ್ವಾಗತ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.