ADVERTISEMENT

8 ನಿಮಿಷದಲ್ಲಿ 650 ಮೆಟ್ಟಿಲು ಏರಿ...

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2017, 6:31 IST
Last Updated 9 ಅಕ್ಟೋಬರ್ 2017, 6:31 IST
ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟವನ್ನು ಹತ್ತಿ ಇಳಿಯುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸ್ಪರ್ಧಿಗಳು
ಶ್ರವಣಬೆಳಗೊಳದ ವಿಂಧ್ಯಗಿರಿ ಬೆಟ್ಟವನ್ನು ಹತ್ತಿ ಇಳಿಯುವ ಸ್ಪರ್ಧೆಯಲ್ಲಿ ಭಾಗವಹಿಸಿರುವ ಸ್ಪರ್ಧಿಗಳು   

ಶ್ರವಣಬೆಳಗೊಳ: ಧರ್ಮ ಜಾಗೃತಿಯ ಪ್ರಾಚೀನ ಸ್ಪರ್ಧೆಗಳಲ್ಲಿ ಯುವ ಜನಾಂಗ ಹೆಚ್ಚಾಗಿ ಭಾಗವಹಿಸಬೇಕು ಎಂದು ಸಾಂಗ್ಲಿಯ ಮಹಾನಗರ ಪಾಲಿಕೆ ಮಾಜಿ ಅಧ್ಯಕ್ಷ ಸುರೇಶ್ ಪಾಟೀಲ ಹೇಳಿದರು. ಪಟ್ಟಣದ ಕಾನಜಿ ಯಾತ್ರಿಕಾಶ್ರಮದಲ್ಲಿ ಬಾಹುಬಲಿ ಸ್ವಾಮಿ ಮಹಾಮಸ್ತಕಾಭಿಷೇಕ ಮಹೋತ್ಸವದ ಪ್ರಯುಕ್ತ ಹುಬ್ಬಳ್ಳಿಯ ದಿಗಂಬರ ಜೈನ ಸಮಾಜದವರು ಭಾನುವಾರ ಏರ್ಪಡಿಸಿದ್ದ ರಾಜ್ಯಮಟ್ಟದ ವಿಂಧ್ಯಗಿರಿ ಬೆಟ್ಟಕ್ಕೆ ಹತ್ತಿ ಇಳಿಯುವ ಸ್ಪರ್ಧೆಯ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮ, ಸಂಸ್ಕೃತಿಗಳು ಮುಂದಿನ ಪೀಳಿಗೆಗಳಲ್ಲಿ ಶಾಶ್ವತ ಸ್ಥಾನ ಪಡೆಯಬೇಕಾದರೆ ನಿರಂತರವಾಗಿ ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸಲು ಯುವಕ, ಯುವತಿಯರಿಗೆ ಹಿರಿಯರು ಮಾರ್ಗದರ್ಶನ ಮಾಡಬೇಕು ಎಂದು ಸಲಹೆ ನೀಡಿದರು.

ಜೈನ ಮಠದಿಂದ ಸ್ಪರ್ಧಾಳುಗಳ ಮೆರವಣಿಗೆಯನ್ನು ವಿಂಧ್ಯಗಿರಿಯ ಬಾಹುಬಲಿ ಬೆಟ್ಟದವರೆಗೆ ನಡೆಸಲಾಯಿತು. ಸ್ಪರ್ಧಾ ಸಮಿತಿ ಅಧ್ಯಕ್ಷ ಶಾಂತಿನಾಥ ಹೋತಪೇಟಿ ಮಾತನಾಡಿ, ಸ್ಪರ್ಧೆಯನ್ನು 15 ವರ್ಷದಿಂದ 30 ವರ್ಷದವರೆಗೆ ನಿಗದಿಪಡಿಸಲಾಗಿತ್ತು.

ADVERTISEMENT

30 ಯುವಕರು, 15 ಯುವತಿಯರು ಭಾಗವಹಿಸಿದ್ದರು. ವಿಂಧ್ಯಗಿರಿಯ ಬೆಟ್ಟದಲ್ಲಿ ಸುಮಾರು 650 ಮೆಟ್ಟಿಲುಗಳಿದ್ದು, ಯುವತಿಯರ ಪೈಕಿ ಹುಬ್ಬಳ್ಳಿಯ ವರ್ಷಾ ಗೊಂಗಡಿ 10 ನಿಮಿಷ, ಬೆಳ್ಳೂರಿನ ನಮಿತಾ ಶಾಂತಿನಾಥ 14 ನಿಮಿಷ, ಬೆಳಗಾವಿ ಜಿಲ್ಲೆಯ ಜುಗಳ ಗ್ರಾಮದ ವಾಣಿಶ್ರೀ ಲೇಂಗಡೆ 16 ನಿಮಿಷದಲ್ಲಿ ಬೆಟ್ಟ ಹತ್ತಿದರು.

ಯುವಕರ ಪೈಕಿ ಧಾರವಾಡ ಜಿಲ್ಲೆಯ ಪಾರ್ಥನಹಳ್ಳಿ ಬಸಪ್ಪ ಬಸರಿಕೋಡಿ 8 ನಿಮಿಷ, ಬೆಳಗಾವಿ ಜಿಲ್ಲೆಯ ಕಾಗವಾಡದ ಪ್ರಶಾಂತ ಮಾಲಗಾವೆ ಎಂಟೂವರೆ ನಿಮಿಷ, ಬಿ.ಗುಡಿಹಾಳನ ಜೀವನಕುಮಾರ್‌ ಆರ್‌.ಸಂಕಪ್ಪನವರ 12 ನಿಮಿಷ ತೆಗೆದುಕೊಂಡರು. ಕಿಕ್ಕಿರಿದು ನಿಂತಿದ್ದ ಸಾರ್ವಜನಿಕರು ಚಪ್ಪಾಳೆ ತಟ್ಟಿ ಪ್ರೋತ್ಸಾಹಿಸಿದರು.

ಪ್ರತಿಯೊಬ್ಬ ಸ್ಪರ್ಧಾಳುವಿಗೆ ಸಂಖ್ಯೆವುಳ್ಳ ಕಾರ್ಡ್‌ ನೀಡಲಾಗಿತ್ತು. ಬೆಟ್ಟ ಹತ್ತಿದ ನಂತರ ಬಾಹುಬಲಿ ಸ್ವಾಮಿ ದರ್ಶನ ಪಡೆದು ಅಲ್ಲಿಂದ ಮತ್ತೊಂದು ಕಾರ್ಡ್‌ ಪಡೆದು ಇಳಿದ ನಂತರ ಸಮಿತಿಗೆ ಒಪ್ಪಿಸುವ ನಿಯಮ ರೂಪಿಸಲಾಗಿತ್ತು.

ಸ್ಪರ್ಧೆಯಲ್ಲಿ ವಿಜೇತರಾದ ಮೊದಲ ಮೂವರು ಸ್ಪರ್ಧಿಗಳಿಗೆ ಗೌರವಧನ, ಪ್ರಶಸ್ತಿ ಪತ್ರ, ಪಂಚರಂಗಿ ವಸ್ತ್ರ ಹಾಗೂ ಭಾಗವಹಿಸಿದ ಎಲ್ಲ ಸ್ಪರ್ಧಾಳುಗಳಿಗೂ ಪ್ರಶಸ್ತಿ ಪತ್ರ, ಪಂಚರಂಗಿ ವಸ್ತ್ರ ನೀಡಿ ಸನ್ಮಾನಿಸಲಾಯಿತು.

ಚಾತುರ್ಮಾಸ ವ್ಯವಸ್ಥಾಪಕ ಸಮಿತಿಯ ಸಂಯೋಜಕರಾದ ಹುಬ್ಬಳ್ಳಿಯ ಮಹಾವೀರ ಸೂಜಿ, ಧನಪಾಲ್‌ ಮುನವಳ್ಳಿ, ಬ್ರಹ್ಮಕುಮಾರ ಎಸ್.ಬೀಳಗಿ, ಹಾಸನ ಜೈನ ಸಮಾಜದ ಅಧ್ಯಕ್ಷರಾದ ಎಂ.ಅಜಿತ್‌, ಮಹಿಳಾ ಸಮಾಜದ ಅಧ್ಯಕ್ಷ ಪೂರ್ಣಿಮಾ ಅನಂತ ಪದ್ಮನಾಭ್‌, ಕಾರ್ಯದರ್ಶಿ ಕಲ್ಪನಾ ಉದಯಕುಮಾರ್‌ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.